ADVERTISEMENT

ಕೊಪ್ಪಳ | ತಿಂಗಳಲ್ಲೇ ಹೆತ್ತವರ ಸೇರಿತು ಕೂಸು

ಕಾಣೆಯಾಗಿದ್ದ ಮಗುವಿನ ಪತ್ತೆಗೆ ನೆರವಾದ ಮಕ್ಕಳ ರಕ್ಷಣಾ ಘಟಕದ ಗ್ರೂಪ್‌

ಪ್ರಮೋದ ಕುಲಕರ್ಣಿ
Published 29 ಜೂನ್ 2025, 6:05 IST
Last Updated 29 ಜೂನ್ 2025, 6:05 IST
   

ಕೊಪ್ಪಳ: ಸಂತೆ ಮಾಡಲು ಮಾರುಕಟ್ಟೆಗೆ ತನ್ನ ಅಜ್ಜಿಯ ಜೊತೆಗೆ ಬಂದಿದ್ದ ಬುದ್ಧಿಮಾಂದ್ಯ ಮಗುವೊಂದು ನಗರದ ಕೇಂದ್ರೀಯ ಬಸ್‌ ನಿಲ್ದಾಣದಿಂದ ನಾಪತ್ತೆಯಾಗಿತ್ತು. ಆ ಮಗುವನ್ನು ಪತ್ತೆ ಹಚ್ಚಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ವ್ಯಾಟ್ಸ್‌ ಆ್ಯಪ್‌ ಗ್ರೂಪ್‌ ನೆರವಾಗಿದೆ.

11 ವರ್ಷದ ತಮ್ಮ ಮೊಮ್ಮಗಳನ್ನು ಕರೆದುಕೊಂಡು ಬಂದಿದ್ದ ತಾಲ್ಲೂಕಿನ ಹೊಸಳ್ಳಿ ಗ್ರಾಮದ ಮಹಿಳೆಯೊಬ್ಬರು ಮೇ 5ರಂದು ಇಲ್ಲಿನ ಕೇಂದ್ರೀಯ ಬಸ್‌ ನಿಲ್ದಾಣಕ್ಕೆ ಬಂದು ಕೆಲ ಹೊತ್ತಿನಲ್ಲಿ ನಿದ್ರೆಗೆ ಜಾರಿದ್ದರು. ಇದೇ ಸಮಯದಲ್ಲಿ ಮಗು ಬೇರೊಂದು ಬಸ್‌ ಹತ್ತಿಕೊಂಡು ಹೋಗಿದ್ದು ಮೊಮ್ಮಗಳು ಕಾಣೆಯಾಗಿದ್ದಕ್ಕೆ ವಿಚಲಿತರಾಗಿ ಅಜ್ಜಿ ಕುಟುಂಬದವರಿಗೆ ವಿಷಯ ತಿಳಿಸಿದ್ದಾರೆ. ಆ ಮಗುವಿನ ತಂದೆ ಇಲ್ಲಿನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಮಗುವನ್ನು ಅಪಹರಣ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದರು. ಇದಕ್ಕೂ ಮೊದಲು ಅವರು ಜಿಲ್ಲಾಸ್ಪತ್ರೆ, ರೈಲು ನಿಲ್ದಾಣ, ಬಸ್‌ ನಿಲ್ದಾಣ ಹೀಗೆ ಅನೇಕ ಪ್ರಮುಖ ಸ್ಥಳಗಳಲ್ಲಿ ಹುಡುಕಾಡಿದ್ದಾರೆ.

ನೆರವಾದ ಗ್ರೂಪ್‌: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪ್ರತಿ ಪೊಲೀಸ್‌ ಠಾಣೆಗಳಲ್ಲಿರುವ ಮಕ್ಕಳ ಸ್ನೇಹ ವಿಭಾಗ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಘಟಕದ ಪ್ರಮುಖರು ಕಾಣೆಯಾದ ಮಕ್ಕಳ ಪತ್ತೆಗೆ ಪ್ರತಿತಿಂಗಳು ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಾರೆ. ಆಗ ಬುದ್ಧಿಮಾಂದ್ಯ ಮಗು ಕಾಣೆಯಾದ ಬಗ್ಗೆ ಪ್ರಸ್ತಾಪವಾದ ತಕ್ಷಣವೇ ಮಕ್ಕಳ ರಕ್ಷಣಾ ಇಲಾಖೆಸಿಬ್ಬಂದಿ ತಮ್ಮ ಅಧಿಕಾರಿಗಳ ಗ್ರೂಪ್‌ನಲ್ಲಿ ಸಂದೇಶ ರವಾನಿಸಿದಾಗ ಮಗು ಬಸ್‌ನಲ್ಲಿ ಮೈಸೂರಿಗೆ ತೆರಳಿತ್ತು ಎನ್ನುವ ವಿಷಯ ಗೊತ್ತಾಗಿದೆ. ಈ ಮಗುವನ್ನು ಮೈಸೂರು ಬಾಲಮಂದಿರದಲ್ಲಿ ರಕ್ಷಣೆ ಮಾಡಲಾಗಿತ್ತು.

ADVERTISEMENT

ಮಗು ಸುರಕ್ಷಿತವಾಗಿರುವ ವಿಷಯ ತಿಳಿದ ಕುಟುಂಬದವರು ಪೊಲೀಸರೊಂದಿಗೆ ಮೈಸೂರಿಗೆ ತೆರಳಿ ಮೇ 29ರಂದು ಮಗುವನ್ನು ವಾಪಸ್‌ ಕರೆದುಕೊಂಡು ಬಂದಿದ್ದಾರೆ. ಆಗ ಕುಟುಂಬದವರಲ್ಲಿ ಮುಡುಗಟ್ಟಿದ್ದ ದುಃಖ ಕಡಿಮೆಯಾಗಿದೆ. ಮಕ್ಕಳ ರಕ್ಷಣಾ ಘಟಕದವರ ಕಾರ್ಯಕ್ಕೂ ಖುಷಿ ವ್ಯಕ್ತಪಡಿಸಿದ್ದಾರೆ. ‘ಕಳೆದುಹೋಗಿದ್ದ ಮಗು ಮಕ್ಕಳ ರಕ್ಷಣಾ ಘಟಕದ ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರಿಂದ ಮತ್ತೆ ಸಿಕ್ಕಿದೆ. ಇದರಿಂದ ಕುಟುಂಬದವರಿಗೆ ಖುಷಿಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮಗುವನ್ನು ಹೆತ್ತವರ ಒಡಲು ಸೇರಿಸಿದ ಹೆಮ್ಮೆಯಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಖುಷಿ ಹಂಚಿಕೊಂಡರು.

ಆರು ಅಪಹರಣ ಪ್ರಕರಣಗಳು ಬಾಕಿ

ಕೊಪ್ಪಳ: ಜಿಲ್ಲೆಯಲ್ಲಿ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ 14 ಮಕ್ಕಳು ಕಳೆದ ಅಥವಾ ಅಪಹರಣವಾದ ಘಟನೆಗಳು ನಡೆದಿವೆ. ಈ ಕುರಿತು ಪೊಲೀಸ್‌ ಠಾಣೆಗಳಲ್ಲಿ ದೂರು ಕೂಡ ದಾಖಲಾಗಿವೆ.

ಇದರಲ್ಲಿ ಎಂಟು ಪ್ರಕರಣಗಳಲ್ಲಿ ಮಗುವಿನ ಪತ್ತೆಯಾಗಿದೆ. ಉಳಿದ ಆರು ಪ್ರಕರಣಗಳಲ್ಲಿ ಮಗುವಿನ ಪತ್ತೆ ಕಾರ್ಯ ನಡೆಯುತ್ತಿದೆ. ಮಕ್ಕಳ ಪತ್ತೆ ವಿಚಾರದಲ್ಲಿ ಆಗಿರುವ ಪ್ರಗತಿ ಬಗ್ಗೆ ಪ್ರತಿತಿಂಗಳು ಪರಿಶೀಲನಾ ಸಭೆ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.