ಯಲಬುರ್ಗಾ: ಪಟ್ಟಣದ ಮೊಗ್ಗಿಬಸವೇಶ್ವರ ದೇವಸ್ಥಾನದ ನೂತನ ರಥೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು. ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಹೊಸ ರಥದ ಪ್ರಥಮ ಉತ್ಸವವನ್ನು ನೋಡುವುದಕ್ಕಾಗಿಯೇ ದೂರ ದೂರದಲ್ಲಿದ್ದ ಸ್ಥಳೀಯ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ರಥವು ನಿಂತ ಸ್ಥಳದಲ್ಲಿಯೇ ತಿರುಗುವ ವ್ಯವಸ್ಥೆ ಮಾಡಿದ್ದು ಭಕ್ತರ ಗಮನ ಸೆಳೆಯಿತು.
ಹೊಸ ರಥ ಆಗಿದ್ದರಿಂದ ನಿಧಾನವಾಗಿ ಮುಂದಕ್ಕೆ ಸಾಗುತ್ತಿರುವುದು ಹಾಗೂ ತಡವಾಗಿಯೇ ಚಾಲನೆ ದೊರೆತಿರುವ ಹಿನ್ನೆಲೆಯಲ್ಲಿ ಬಸವವೃತ್ತಕ್ಕೆ ಬಂದು ಹೋಗುವಷ್ಟರಲ್ಲಿ ರಾತ್ರಿ 8 ಗಂಟೆಯಾಗಿತ್ತು. ರಥದ ಬೀದಿಯಲ್ಲಿ ವಿದ್ಯುತ್ ಕಂಬಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು.
ಪಂಚಕಳಸಗಳನ್ನು ಹೋಮ ಹವನದ ಮೂಲಕ ವಿಶೇಷ ಪೂಜೆ ನೆರವೇರಿಸಿ ಕಳಸಾರೋಹಣ ನೆರವೇರಿಸಲಾಯಿತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಂಡು ನೂತನ ರಥಕ್ಕೆ ವಿಶೇಷ ಪೂಜೆ ಕೈಗೊಳ್ಳಲಾಗಿತ್ತು.
ಸಾಮೂಹಿಕ ವಿವಾಹ: 18 ನವ ಜೋಡಿಗಳು ಹೊಸ ದಾಂಪತ್ಯ ಜೀವನಕ್ಕೆ ಪಾದರ್ಪಣೆ ಮಾಡಿದರು. ಸಾನ್ನಿಧ್ಯ ವಹಿದ್ದ ಸ್ಥಳೀಯ ಶ್ರೀಧರ ಮುರಡಿ ಹಿರೇಮಠ ಪೀಠಾಧಿಕಾರಿ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಆದರ್ಶ ದಂಪತಿಗಳಾಗಿ ಜೀವನ ನಡೆಸಬೇಕು. ಕುಟುಂಬದ ಹಿರಿಯರನ್ನು ಸರಿಯಾಗಿ ನೋಡಿಕೊಂಡು ಒಳ್ಳೆಯ ಕುಟುಂಬ ಎಂಬ ಹಿರಿಮೆ ಪಾತ್ರರಾಗಬೇಕು ಎಂದು ಸಲಹೆ ನೀಡಿದರು.
ಮುಖಂಡರಾದ ಅಮರಪ್ಪ ಕಲಬುರ್ಗಿ, ಅಂದಾನಗೌಡ ಉಳ್ಳಾಗಡ್ಡಿ, ಸುರೇಶಗೌಡ ಶಿವನಗೌಡ್ರ, ದಾನನಗೌಡ ತೊಂಡಿಹಾಳ, ವೀರನಗೌಡ ಬನ್ನಪ್ಪಗೌಡ್ರ, ಬಸಲಿಂಗಪ್ಪ ಕೊತ್ತಲ, ಬಸವರಾಜ ಅಧಿಕಾರಿ, ಷಣ್ಮುಖಪ್ಪ ರಾಂಪೂರ, ಮಲ್ಲೇಶಗೌಡ್ರ ಸೇರಿ ಅನೇಕರು ಉಸ್ತುವಾರಿ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.