ADVERTISEMENT

ಅಡ್ಡಗಾಲು ಹಾಕಿದವರು ಹೆಸರು ಬಹಿರಂಗ ಮಾಡುವೆ- ಬಸವನಗೌಡ ಪಾಟೀಲ ಯತ್ನಾಳ

ಪಂಚಮಸಾಲಿ ಸಮಾಜದ ಸಮಾವೇಶ: ಬಸವನಗೌಡ ಪಾಟೀಲ ಯತ್ನಾಳ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 15:58 IST
Last Updated 29 ನವೆಂಬರ್ 2022, 15:58 IST
ಯಲಬುರ್ಗಾ ತಾಲ್ಲೂಕು ಮುಧೋಳ ಗ್ರಾಮದಲ್ಲಿ ಮಂಗಳವಾರ ಪಂಚಮಸಾಲಿ ಸಮಾಜದ ಸಮಾವೇಶಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಚಾಲನೆ ನೀಡಿದರು. ಬಸವಜಯ ಮೃತ್ಯುಂಜಯ ಸ್ವಾಮೀಜಿ, ಸಂಸದ ಸಂಗಣ್ಣ ಕರಡಿ ಇದ್ದರು
ಯಲಬುರ್ಗಾ ತಾಲ್ಲೂಕು ಮುಧೋಳ ಗ್ರಾಮದಲ್ಲಿ ಮಂಗಳವಾರ ಪಂಚಮಸಾಲಿ ಸಮಾಜದ ಸಮಾವೇಶಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಚಾಲನೆ ನೀಡಿದರು. ಬಸವಜಯ ಮೃತ್ಯುಂಜಯ ಸ್ವಾಮೀಜಿ, ಸಂಸದ ಸಂಗಣ್ಣ ಕರಡಿ ಇದ್ದರು   

ಯಲಬುರ್ಗಾ: ‘ಪಂಚಮಸಾಲಿ ಸಮಾಜದ ಮಕ್ಕಳ ಶೈಕ್ಷಣಿಕ ಹಾಗೂ ಉದ್ಯೋಗಕ್ಕೆ ಅನುಕೂಲವಾಗುವ 2ಎ ಮೀಸಲಾತಿಗೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟಕ್ಕೆ ಅಡ್ಡಗಾಲು ಹಾಕುತ್ತಿರುವ ರಾಜಕಾರಣಿಗಳು ಯಾರು ಎನ್ನುವುದು ನನಗೆ ಗೊತ್ತಿದೆ. ಅವರ ಹೆಸರು ಬಹಿರಂಗ ಮಾಡುವೆ’ ಎಂದುವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ಮಂಗಳವಾರ ಪಂಚಮಸಾಲಿ ಸಮಾಜದ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಮೀಸಲಾತಿಗೆ ವಿರೋಧಿಸಿದ ಮಾಜಿಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಶಾಸಕರು ಯಾರು ಎನ್ನುವುದು ಚೆನ್ನಾಗಿ ಗೊತ್ತು. ಸಮಯ ಬಂದಾಗ ಬಹಿರಂಗ ಮಾಡುವೆ. ಅವರನ್ನು ಸೋಲಿಸಲು ನಮ್ಮ ಸಮಾಜ ಸನ್ನದ್ದವಾಗಿದೆ. ರಾಜ್ಯದಲ್ಲಿ ಒಂದು ಕೋಟಿಗೂ ಮೀರಿದ ಜನಸಂಖ್ಯೆ ನಮ್ಮ ಸಮಾಜ ಹೊಂದಿದ್ದು, ರಾಜ್ಯದ ಮುಖ್ಯಮಂತ್ರಿಯನ್ನು ನಿರ್ಧರಿಸುವುದು ನಮ್ಮದೇ ಸಮಾಜ’ ಎಂದರು.

‘ಡಿ.19ರ ಒಳಗಾಗಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸದೆ ಹೋದರೆ 22ರಂದು ಬೆಳಗಾವಿಯ ವಿಧಾನಸೌಧ ಮುತ್ತಿಗೆ ಹಾಕುವುದು ನಿಶ್ಚಿತ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸದ್ಯದ ಧೋರಣೆ ಗಮನಿಸಿದರೆ ಖಂಡಿತವಾಗಿಯೂ ಮೀಸಲಾತಿ ಸಿಗುವ ಸಾಧ್ಯತೆಯಿದೆ’ ಎಂದರು.

ADVERTISEMENT

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ‘1994ರಲ್ಲಿ ಯಲಬುರ್ಗಾದಿಂದ ಆರಂಭವಾದ ಮೀಸಲಾತಿ ಹೋರಾಟಕ್ಕೆ 28 ವರ್ಷಗಳಾಗಿವೆ. ಪ್ರಾರಂಭದಲ್ಲಿ ಸಮಾಜ ಜಾಗೃತರಾಗಿರಲಿಲ್ಲ. ಆದರೆ ಪರಿಸ್ಥಿತಿ ಮೊದಲಿನಂತಿಲ್ಲ. ಮೀಸಲಾತಿ ಕೊಡದಿದ್ದರೆ ಬಿಡುವ ಪ್ರಶ್ನೆಯೇ ಇಲ್ಲ’ ಎಂದರು.

ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಸರ್ಕಾರ ಮೀಸಲಾತಿ ಕೊಟ್ಟರೆ ಸಾಕು. ಸಮಾಜದ ಅಭಿವೃದ್ಧಿ ಮುಖ್ಯವಾಗಿದೆ. ಪಾದಯಾತ್ರೆ ಹಮ್ಮಿಕೊಂಡಿದ್ದರ ಪರಿಣಾಮ ಸಮಾಜದ ಅಭಿವೃದ್ಧಿಗೆ ಮೀಸಲಾತಿ ಸಿಗುವ ಸಾಧ್ಯತೆಗಳು ಹೆಚ್ಚಿವೆ’ ಎಂದರು.

ಸಮಾಜದ ಜಿಲ್ಲಾ ಮುಖಂಡ ಬಸವಲಿಂಗಪ್ಪ ಭೂತೆ ಸಂಘಟನೆ ನಡೆದುಬಂದ ದಾರಿ ಬಗ್ಗೆ ಮಾಹಿತಿ ನೀಡಿದರು. ಇದಕ್ಕೂ ಮುನ್ನ ಯಲಬುರ್ಗಾದಿಂದ ಮುಧೋಳದವರೆಗೂ ಯುವಕರು ಬೈಕ್ ರ್‍ಯಾಲಿ ನಡೆಸಿದರು. ಮುಧೋಳದಲ್ಲಿ ಕುಂಬೋತ್ಸವ ಹಾಗೂ ಸ್ವಾಮೀಜಿಯವರ ಅದ್ದೂರಿಯಾಗಿ ಮೆರವಣಿಗೆ ನೆರವೇರಿತು.

ಸಂಘದ ಸಂಸ್ಥಾಪಕ ಶ್ರೀಪಾದಪ್ಪ ಅಧಿಕಾರಿ, ಕಳಕನಗೌಡ ಪಾಟೀಲ, ಕಳಕನಗೌಡ ತೊಂಡಿಹಾಳ, ಬಸವರಾಜ ಉಳ್ಳಾಗಡ್ಡಿ, ಕೆ.ಜಿ.ಪಲ್ಲೇದ, ವೀರಣ್ಣ ಹುಬ್ಬಳ್ಳಿ, ಸುರೇಶಗೌಡ ಶಿವನಗೌಡ್ರ, ರಾಜು ನಿಂಗೋಜಿ ಸೇರಿ ಅನೇಕರು ಪಾಲ್ಗೊಂಡಿದ್ದರು.

ಸಮಾಜದ ಅಭಿವೃದ್ಧಿ ಕೇವಲ ಮೀಸಲಾತಿಯಿಂದ ಸಾಧ್ಯವಿಲ್ಲ. ದುಡಿಮೆಯು ಮುಖ್ಯ, ಮೀಸಲಾತಿಗೆ ಸಂಬಂಧಿಸಿದಂತೆ ನಿರಂತರವಾಗಿ ಹೋರಾಟ ಮಾಡಲಾಗುವುದು.
ಸಂಗಣ್ಣ ಕರಡಿ, ಸಂಸದ

ಯಲಬುರ್ಗಾ ಕ್ಷೇತ್ರದಲ್ಲಿ ಪಂಚಮಸಾಲಿ ಸಮಾಜದ ಸಾಕಷ್ಟು ಜನರಿದ್ದಾರೆ. ಸಮಾಜದವರೇ ಶಾಸಕರಾಗುವ ಕಾಲ ಈಗ ಕೂಡಿ ಬಂದಿದೆ.ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.