
ಕುಷ್ಟಗಿ: ಪಟ್ಟಣದಿಂದ ಕೊಪ್ಪಳ ಮುಖ್ಯರಸ್ತೆಯಲ್ಲಿ ಹಾದುಹೋಗಿರುವ ರೈಲ್ವೆ ಗೇಟ್ ಬಳಿ ರೈಲ್ವೆ ಇಲಾಖೆ ಅನಗತ್ಯವಾಗಿ ರಸ್ತೆ ಉಬ್ಬು (ಹಂಪ್ಸ್)ಗಳನ್ನು ಅಳವಡಿಸಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿ ಸವಾರರು ಪರದಾಡುತ್ತಿರುವುದು ಕಂಡುಬಂದಿದೆ.
ರೈಲ್ವೆ ಮಾರ್ಗದ ಬಳಿ ರಸ್ತೆಯ ಎರಡೂ ಬದಿಯಲ್ಲಿ ವೈಜ್ಞಾನಿಕವಾಗಿ ಉಬ್ಬುಗಳನ್ನು ಅಳವಡಿಸಲಾಗಿದ್ದು ಸರಿಯಾಗಿದೆ. ವಾಹನಗಳು ನಿಧಾನವಾಗಿ ಏರಿ ಇಳಿಯುವುದಕ್ಕೆ ಅನುಕೂಲವಿದ್ದು ಸವಾರರಿಗೆ ಬೆನ್ನುಮೂಳೆಯ ಮೇಲೆ ಒತ್ತಡ ಬೀಳುವುದಿಲ್ಲ.
ಆದರೆ ಅದೇ ಸ್ಥಳದಲ್ಲಿ ಮತ್ತೆ ಎರಡು ಉಬ್ಬುಗಳನ್ನು ಕಾಂಕ್ರಿಟ್‌ನಿಂದ ಅಳವಡಿಲಾಗಿದ್ದು ಉಬ್ಬುಗಳು ತೀರಾ ಅವೈಜ್ಞಾನಿಕವಾಗಿದ್ದು ಬೈಕ್, ತ್ರಿಚಕ್ರ ವಾಹನಗಳು, ಭಾರದ ಲಾರಿ, ಬಸ್‌ಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಬಹಳಷ್ಟು ತೊಂದರೆ ಆಗುತ್ತಿರುವುದನ್ನು ರೈಲ್ವೆ ಇಲಾಖೆ ಎಂಜಿನಿಯರ್‌ಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯವಹಿಸಿದ್ದಾರೆ ಎಂದು ವಾಹನ ಸವಾರರಾದ ಚಂದ್ರಶೇಖರಗೌಡ ಹಲ್ಲೂರು, ಮೇಘರಾಜ ಇತರರು ಅಸಮಾಧಾನ ಹೊರಹಾಕಿದರು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನೈಋತ್ಯ ರೈಲ್ವೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಶೋಕ ಮುದಗೌಡರ, ಹಂಪ್ಸ್‌ಗಳನ್ನು ಅವೈಜ್ಞಾನಿಕವಾಗಿ ಅಳವಡಿಸಿರುವುದು ಗೊತ್ತಾಗಿದೆ. ಅಲ್ಲದೆ ರೈಲ್ವೆ ಮಾರ್ಗದ ಅಕ್ಕಪಕ್ಕದಲ್ಲಿರುವ ಹಂಪ್ಸ್‌ಗಳು ಮಾತ್ರ ಅಗತ್ಯ. ಆದರೆ ಅನಗತ್ಯವಾಗಿರುವುದನ್ನು ತಕ್ಷಣ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.