ADVERTISEMENT

ಟಯರ್ ಕಳವು: ಆತಂಕ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 7:15 IST
Last Updated 4 ಡಿಸೆಂಬರ್ 2020, 7:15 IST
ಕೊಪ್ಪಳದ ಮಾರುಕಟ್ಟೆಯ ಪ್ರದೇಶದಲ್ಲಿ ಟಂಟಂ ವಾಹನದ ಟಯರ್‌ ಕಳ್ಳತನವಾಗಿರುವುದನ್ನು ತೋರಿಸುತ್ತಿರುವ ಚಾಲಕರು
ಕೊಪ್ಪಳದ ಮಾರುಕಟ್ಟೆಯ ಪ್ರದೇಶದಲ್ಲಿ ಟಂಟಂ ವಾಹನದ ಟಯರ್‌ ಕಳ್ಳತನವಾಗಿರುವುದನ್ನು ತೋರಿಸುತ್ತಿರುವ ಚಾಲಕರು   

ಕೊಪ್ಪಳ: ಮೇಲಿಂದ ಮೇಲೆ ನಗರದಲ್ಲಿ ಆಟೋ, ಟಂಟಂ ವಾಹನಗಳ ಟಯರ್‌ ಕಳ್ಳತನ ಮಾಡುತ್ತಿದ್ದು, ಬಡ ಚಾಲಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿರುವ ಅವರು, ಲಾಕ್‌ಡೌನ್‌ ಸೇರಿದಂತೆ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮೊದಲೇ ಕೆಲಸವಿಲ್ಲದೆ ತೀವ್ರ ಸಂಕಷ್ಟ ಅನುಭವಿಸಿದ್ದು, ಮನೆ, ಗಲ್ಲಿಗಳಲ್ಲಿ ನಿಲ್ಲಿಸಿದ ವಾಹನಗಳ ಟಯರ್ ಕದ್ದುಕೊಂಡು ಹೋಗುತ್ತಿರುವುದು ತೀವ್ರ ತೊಂದರೆಯಾಗಿದೆ. ಆದ್ದರಿಂದ ಈ ಕಳ್ಳರ ಜಾಲವನ್ನು ಬೇಧಿಸಿ ನಮಗೆ ನ್ಯಾಯ ಒದಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಒಂದು ತಿಂಗಳ ಹಿಂದೆ ನಾಲ್ಕೈದು ವಾಹನಗಳ ಟಯರ್‌ ಕದ್ದುಕೊಂಡು ಹೋಗಿದ್ದರು. ಈಗ ಮತ್ತೆ ಮಂಗಳವಾರ ಕಪಾಲಿ ಗಲ್ಲಿ, ಕುರುಬರ ಓಣಿ, ಪಲ್ಲೇದವರ ಓಣಿ, ನಂದಿ ನಗರಗಳಲ್ಲಿ 8 ವಾಹನಗಳ ಟಯರ್‌ ಕದ್ದುಕೊಂಡು ಹೋಗಿದ್ದಾರೆ.

ADVERTISEMENT

ಹೆಚ್ಚಿನ ಸಂಖ್ಯೆಯಲ್ಲಿ ಬಡವರು ಮತ್ತು ಕೂಲಿಕಾರರು ವಾಸಿಸುವ ಈ ಬಡಾವಣೆಗಳಲ್ಲಿ ನಿತ್ಯದ ದುಡಿಮೆಗೆ ಈ ವಾಹನಗಳನ್ನೇ ಅವಲಂಬಿಸಿದ್ದಾರೆ. ಆದರೆ ಕಳ್ಳರು ಮಾತ್ರ ಪತ್ತೆಯಾಗುತ್ತಿಲ್ಲ. ಇದು ಪೊಲೀಸ್ ಇಲಾಖೆಗೂ ತಲೆನೋವು ತಂದಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳು ಕೂಡಾ ಇಲ್ಲ. ಇಕ್ಕಟ್ಟಾದ ಓಣಿಯಲ್ಲಿ ಮಧ್ಯರಾತ್ರಿ ಅಥವಾ ನಸುಕಿನ ಜಾವ ಈ ಕಳ್ಳತನಕ್ಕೆ ಕೆಲವು ಕಿಡಿಗೇಡಿಗಳು ಇಳಿದಿದ್ದು, ಚಾಲಕರು ಗೋಳಾಡುವಂತೆ ಆಗಿದೆ.

ಚಾಲಕರ ಪರವಾಗಿ ಮುಖಂಡ ಮಾನ್ವಿ ಪಾಶಾ ಜಿಲ್ಲಾ ಪೊಲೀಸ್‌ ಇಲಾಖೆಗೆ ಮನವಿ ಸಲ್ಲಿಸಿ, ಬಡವರ ತುತ್ತಿನ ಚೀಲ ತುಂಬಿಸಿಕೊಳ್ಳಲು ಉದ್ಯೋಗಕ್ಕೆ ಆಸರೆಯಾದ ಈ ವಾಹನಗಳ ವಸ್ತುಗಳನ್ನು ಕಳ್ಳತನ ಮಾಡುತ್ತಿರುವುದು ಅಮಾನವೀಯ. ಕಳ್ಳರನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ನೀಡುವುದರ ಜೊತೆಗೆ ಕಳುವಾದ ಸ್ವತ್ತುಗಳನ್ನು ಮರಳಿ ಕೊಡಿಸುವಂತೆ ಮನವಿ ಮಾಡಿದ್ದಾರೆ.

ನಗರದಲ್ಲಿ ಟಯರ್‌ ಕಳ್ಳತನ ಜಾಲವಿದ್ದು, ಅದನ್ನು ಬೇಧಿಸುವುದು ಪೊಲೀಸರಿಗೆ ಸವಾಲಾಗಿದೆ. ಇದಕ್ಕಾಗಿ ಮೇಲಿಂದ ಮೇಲೆ ನಿಗಾ ವಹಿಸಿದರೂ ಕಳ್ಳರು ಪತ್ತೆಯಾಗುತ್ತಿಲ್ಲ. ಇದರಿಂದ ರೋಸಿ ಹೋಗಿರುವ ಬಡ ಚಾಲಕರು ತಮ್ಮ ವಾಹನಗಳನ್ನು ಮಾರುವ ಸ್ಥಿತಿಗೆ ಬಂದಿದ್ದಾರೆ.

₹1 ಸಾವಿರದಿಂದ ₹2 ಸಾವಿರ ದವರೆಗೆ ಮೌಲ್ಯದ ಈ ಟಯರ್‌ಗಳನ್ನು ಹಾಕಿಸಲು ದುಡಿದ ಹಣವನ್ನು ವ್ಯಯಿಸಬೇಕಾಗಿದೆ. ಕಳ್ಳರ ಜಾಲವನ್ನು ಪತ್ತೆ ಹಚ್ಚಿ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.