ADVERTISEMENT

ಫಾಸ್ಟ್ ಟ್ಯಾಗ್ ಮುಗಿಯದ ಗೊಂದಲ

ಹಿಟ್ನಾಳ ಭಾಗದ ಜನರ ವಿರೋಧ: ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಮತ್ತೆ ಹೋರಾಟ

ಸಿದ್ದನಗೌಡ ಪಾಟೀಲ
Published 16 ಡಿಸೆಂಬರ್ 2019, 15:15 IST
Last Updated 16 ಡಿಸೆಂಬರ್ 2019, 15:15 IST
ಕೊಪ್ಪಳ ತಾಲ್ಲೂಕಿನ ಹಿಟ್ನಾಳ ಬಳಿಯಿರುವ ಟೋಲ್ ಪ್ಲಾಜಾ
ಕೊಪ್ಪಳ ತಾಲ್ಲೂಕಿನ ಹಿಟ್ನಾಳ ಬಳಿಯಿರುವ ಟೋಲ್ ಪ್ಲಾಜಾ   

ಕೊಪ್ಪಳ: ಜಿಲ್ಲೆಯಲ್ಲಿ ಹಾಯ್ದು ಹೋಗಿರುವ 2 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸುವ3 ಪ್ಲಾಜ್‌ಗಳಲ್ಲಿ ಫಾಸ್ಟ್ ಟ್ಯಾಗ್ ವ್ಯವಸ್ಥೆ ಜಾರಿಗೊಳಿಸಲು ಡಿ.15 ಕೊನೆಯ ದಿನವಾಗಿದ್ದು, ಜಾಗೃತಿ ಕೊರತೆಯಿಂದ ಇನ್ನೂ ಬಹಳಷ್ಟು ಜನ ಅಳವಡಿಸಿಕೊಳ್ಳದ ಪರಿಣಾಮ ಗೊಂದಲ ಹಾಗೆ ಮುಂದುವರಿದೆ.

ಟೋಲ್ ಕಟ್ಟಲು ವಾಹನ ಸವಾರರು ಕೆಲವು ನಿಮಿಷ ನಿಲ್ಲಬೇಕಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿ ಕೆಲವೊಮ್ಮೆ ಜಗಳಕ್ಕೂ ಕಾರಣವಾಗುತ್ತಿತ್ತು. ಈಗ ಹೊಸ ವ್ಯವಸ್ಥೆ ಜಾರಿಯಿಂದ ಟ್ಯಾಗ್ ಅಳವಡಿಸಿಕೊಂಡ ವಾಹನಗಳನ್ನು ದೂರದಿಂದ ಸ್ಕಾನ್ ಮಾಡುವ ಯಂತ್ರಗಳು ಸುಲಭವಾಗಿ ಮುಂದೆ ಚಲಿಸುವಂತೆ ಗೇಟ್ ತೆರೆದುಕೊಳ್ಳುತ್ತಿವೆ. ಟ್ಯಾಗ್ ಇಲ್ಲದೇ ಇರುವವರು ಎಂದಿನಂತೆ ಟೋಲ್ ಕಟ್ಟಿ ಮುಂದೆ ಹೋಗಬೇಕಾಗಿದೆ.

ಅಂಕೋಲಾ-ಗುತ್ತಿ ರಾಷ್ಟ್ರೀಯ ಹೆದ್ದಾರಿಗೆ ಹಿಟ್ನಾಳ ಬಳಿ, ಪುಣೆ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಕುಷ್ಟಗಿ ಬಳಿ ಹಾಗೂ ಗಂಗಾವತಿ- ಬೂದಗುಂಪಾ ರಾಜ್ಯ ಹೆದ್ದಾರಿ ಗಿಣಗೇರಿ ಸಮೀಪದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರತಿನಿತ್ಯ 9ರಿಂದ 10 ಸಾವಿರ ವಾಹನಗಳು ಸಂಚರಿಸುತ್ತಿವೆ. ಶೇ 40ರಷ್ಟು ಜನರು ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿದ್ದು, ಇನ್ನೂ ಶೇ 60ರಷ್ಟು ಬಾಕಿ ಇದೆ. ಈ ಜನರು ಟೋಲ್‌ನಲ್ಲಿ ಹಣ ಕಟ್ಟಿಯೇ ಹೋಗುತ್ತಾರೆ.

ADVERTISEMENT

ಆನ್‌ಲೈನ್ ಮೂಲಕ ಟೋಲ್ ಕಟ್ಟುವುದರಿಂದ ಚಿಲ್ಲರೆ ಸಮಸ್ಯೆಯಾಗಲಿ ಇಲ್ಲಿ ಗ್ರಾಹಕರನ್ನು ಕಾಡುವುದಿಲ್ಲ. ಆದರೆ ಕೆಲವು ವಾಹನಗಳ ಮಾಲೀಕರು ಡಿಜಿಟಲ್ ಗೊಂದಲಗಳಿಂದ ಬ್ಯಾಂಕಿನಲ್ಲಿ ಹಣ ಕೂಡಿಟ್ಟಿರುವುದಿಲ್ಲ. ಅಲ್ಲದೆ ಲಾರಿ ಚಾಲಕರು ಸೇರಿದಂತೆ ಗೂಡ್ಸ್ ಗಾಡಿಗಳ ಚಾಲಕರ ಬಳಿ ದಾಖಲೆಗಳ ಕೊರತೆ ಇರುವುದರಿಂದ ಹಣ ಪಾವತಿಸುವ ಗೇಟ್ ಬಳಿ ಜಮಾಯಿಸಿರುತ್ತಾರೆ.

ಕಾರುಗಳ ಚಾಲಕರಲ್ಲಿ ಹೆಚ್ಚಿನವರು ಫಾಸ್ಟ್‌ಟ್ಯಾಗ್ ಅಳವಡಿಸಿಕೊಂಡಿದ್ದಾರೆ. ಅಪರೂಪಕ್ಕೆ ಪ್ರಯಾಣ ಮಾಡುವವರು. ಇನ್ನೊಬ್ಬರ ಅವಶ್ಯಕತೆಗೆ ನೀಡಿದ್ದವರಿಗೆ ಈ ಟ್ಯಾಗ್ ಸಮಸ್ಯೆಯಾಗಿದೆ. ಮಾಲೀಕರ ಖಾತೆಯಿಂದಲೇ ಹಣ ಡ್ರಾ ಆಗುತ್ತಿದ್ದು, ಅದು ಹೊರೆಯಾಗುತ್ತಿದೆ. ಅಲ್ಲದೆ ಇದೊಂದು ಸುಧಾರಿತ ಮತ್ತು ಪಾರದರ್ಶಕ ವ್ಯವಸ್ಥೆಯಾಗಿದ್ದು, ಉತ್ತಮವಾಗಿದೆ ಬಹುತೇಕ ಚಾಲಕರು, ಸವಾರರು ಹೇಳುತ್ತಾರೆ.

ಈ ಹೊಸ ವಿಧಾನ ಇನ್ನೂ ಅನೇಕರಲ್ಲಿ ಗೊಂದಲ ಮೂಡಿಸಿದ ಪರಿಣಾಮ ಟೋಲ್‌ಗಳಲ್ಲಿ ವಾಹನಗಳು ನಿಲ್ಲುವುದು ತಪ್ಪುತ್ತಿಲ್ಲ. ಅಲ್ಲದೆ ಫಾಸ್ಟ್‌ಟ್ಯಾಗ್ ಅಳವಡಿಕೆಗೆ ಇನ್ನೂ ಒಂದು ತಿಂಗಳು ಮೂಂದೂಡಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಫಾಸ್ಟ್ ಟ್ಯಾಗ್‌ಗೆ ವಿರೋಧ: ಹಿಟ್ನಾಳ ಬಳಿ ಇರುವ ಟೋಲ್‌ ಪ್ಲಾಜಾ ಅತ್ಯಂತ ದಟ್ಟಣೆಯಿಂದ ಕೂಡಿರುತ್ತದೆ. ಅಲ್ಲದೆ ರಸ್ತೆ ಪಕ್ಕದಲ್ಲಿಯೇ ಇರುವ ಹೊಸಳ್ಳಿ, ಮುನಿರಾಬಾದ್, ಹಿಟ್ನಾಳ ಗ್ರಾಮಸ್ಥರಿಗೆ ಸೇವಾ ರಸ್ತೆಗಳಿಲ್ಲದೆ ತೀವ್ರ ತೊಂದರೆಯಾಗಿದೆ. ಈ ಕುರಿತು ಅನೇಕ ಸಾರಿ ಹೋರಾಟ ಮಾಡಿದರೆ ಸರ್ಕಾರ ಕಣ್ತೆರೆಯುತ್ತಿಲ್ಲ. ಈಗ ಫಾಸ್ಟ್ ಟ್ಯಾಗ್ ಅಳವಡಿಸುವ ಮೂಲಕ ಜನರಿಗೆ ಸೇವೆ ನೀಡದೇ ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ವಕೀಲ, ಹೋರಾಟಗಾರ ಪೀರಾ ಹುಸೇನ್ ಹೊಸಳ್ಳಿ ಆಕ್ರೋಶ ವ್ಯಕ್ತಪಡಿಸುತ್ತಾರೆ.

'ಫಾಸ್ಟ್ ಟ್ಯಾಗ್ ಅಳವಡಿಕೆಯಿಂದ ಟೋಲ್‌ಗಳ ವ್ಯವಸ್ಥೆ ಸುಧಾರಿಸಲಿದೆ. ಸಿಬ್ಬಂದಿಯೂ ಅಪಾಯಕಾರಿ ಸ್ಥಿತಿಯಲ್ಲಿಕೆಲಸ ನಿರ್ವಹಿಸುತ್ತಿದ್ದರು. ಈಗ ಹಣ ತುಂಬಿದರೆ ಮಾತ್ರ ಗೇಟ್ ತೆರೆಯುತ್ತಿದೆ.ಅನವಶ್ಯಕ ಒತ್ತಡ, ಭಯವಿಲ್ಲದೆ ಭದ್ರತಾ ಸಿಬ್ಬಂದಿಯನ್ನು ಬಳಸಿಕೊಂಡು ಕೆಲಸ ನಿರ್ವಹಿಸಬಹುದು' ಎನ್ನುತ್ತಾರೆ ಟೋಲ್ ಅಧಿಕಾರಿ ಸಿದ್ಧೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.