ADVERTISEMENT

ರೈಲು ಸಂಚಾರಕ್ಕೆ ಕೂಡಿಬಂದ ‘ಮುಹೂರ್ತ’

ಮೇ 15ಕ್ಕೆ ಗದಗ–ವಾಡಿ ರೈಲು ಸಂಚಾರ, ಅಧಿಕೃತ ಪ್ರಕಟಣೆ

​ಪ್ರಜಾವಾಣಿ ವಾರ್ತೆ
Published 11 ಮೇ 2025, 5:04 IST
Last Updated 11 ಮೇ 2025, 5:04 IST
ಕುಷ್ಟಗಿ ರೈಲು ನಿಲ್ದಾಣ ಉದ್ಘಾಟನೆಗೊಳ್ಳುವ ಮೊದಲೇ ಕಂಡುಬಂದ ಗುಟ್ಕಾ ಕೊಳೆ
ಕುಷ್ಟಗಿ ರೈಲು ನಿಲ್ದಾಣ ಉದ್ಘಾಟನೆಗೊಳ್ಳುವ ಮೊದಲೇ ಕಂಡುಬಂದ ಗುಟ್ಕಾ ಕೊಳೆ   

ಕುಷ್ಟಗಿ: ನನೆಗುದಿಯಲ್ಲಿದ್ದ ಗದಗ–ವಾಡಿ ನೂತನ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಕರ ರೈಲು ಸಂಚಾರಕ್ಕೆ ಅಂತೂ ಮುಹೂರ್ತ ಕೂಡಿಬಂದಿದ್ದು, ಕುಷ್ಟಗಿ-ಹುಬ್ಬಳ್ಳಿ ಮಧ್ಯೆ ಮೇ 15ರಂದು ರೈಲು ಸಂಚಾರ ಆರಂಭಗೊಳ್ಳಲಿದೆ.

ಈ ಕುರಿತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಕಚೇರಿಯ ಸೆಕ್ಷನ್‌ ಅಧಿಕಾರಿ ಸುರೇಂದ್ರ ಪಾಲ್‌ ಶನಿವಾರ ಸಚಿವರ ಪ್ರವಾಸ ಕಾರ್ಯಕ್ರಮ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಅಂದು ಬೆಳಿಗ್ಗೆ 9.45ಕ್ಕೆ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ವಿವರಿಸಲಾಗಿದೆ.

ಪ್ರಯಾಣಿಕರ ರೈಲು ಸಂಚಾರಕ್ಕೆ ಉದ್ಘಾಟನೆಗೊಳ್ಳುವ ಮೂಲಕ ಅಧಿಕೃತ ಚಾಲನೆ ದೊರೆಯಲಿದೆ. ಆದರೆ ದೈನಂದಿನ ಸಂಚಾರದ ವೇಳಾ ಪಟ್ಟಿ ಇನ್ನೂ ಅಧಿಕೃತಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಕುಷ್ಟಗಿ ಪಟ್ಟಣದಿಂದಲೇ ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಚಾಲನೆ ಸಿಕ್ಕಿರುವುದು ಈ ಭಾಗದ ಜನರಲ್ಲಿನ ಸಂತಸ ಇಮ್ಮಡಿಗೊಳಿಸಿದೆ. ಈ ವಿಷಯ ಸಾರ್ವಜನಿಕರ ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಸಂದರ್ಭವನ್ನು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ಸಂಘಟನೆಗಳು, ರೈಲ್ವೆ ಹೋರಾಟ ಸಮಿತಿಗಳು ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿವೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ, ‘ರೈಲು ಸಂಚಾರ ಉದ್ಘಾಟನೆಗೊಳ್ಳುವುದು ನಿರ್ಧಾರವಾಗಿದೆ. ಸಚಿವ ವಿ.ಸೋಮಣ್ಣ ಅವರು ಕುಷ್ಟಗಿಯಿಂದಲೇ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದು, ಅದಕ್ಕಾಗಿ ಎಲ್ಲ ಸಿದ್ಧತೆಗಳು ನಡೆದಿವೆ. ಉದ್ಘಾಟನೆ ನಂತರ ಯಾವ ದಿನದಿಂದ ರೈಲು ನಿತ್ಯ ಸಂಚರಿಸಲಿದೆ ಎಂಬ ವೇಳಾಪಟ್ಟಿ ಶೀಘ್ರದಲ್ಲಿ ಅಂತಿಮಗೊಳ್ಳುವ ಸಾಧ್ಯತೆ ಇದೆ. ಬಹುತೇಕ ಉದ್ಘಾಟನೆ ಮರುದಿನದಿಂದಲೇ ಆರಂಭಗೊಳ್ಳಲೂಬಹುದು’ ಎಂದರು.

‘ರೈಲು ಸಂಚಾರದ ದಿನ ನಿಗದಿಗೊಂಡಿದ್ದು ನಿಲ್ದಾಣದ ಉದ್ಘಾಟನೆಯೂ ಅದೇ ವೇಳೆ ನಡೆಯಲಿದ್ದು, ಸ್ವಚ್ಛತೆ, ಅಗತ್ಯ ಮೂಲಸೌಲಭ್ಯಗಳ ಕೆಲಸ ಪೂರ್ಣಗೊಳಿಸಲಾಗುತ್ತಿದೆ. ಅಲ್ಲದೆ ಅಲ್ಲಲ್ಲಿ ಉಗುಳಿದ ಕಲೆಗಳು, ಗುಟ್ಕಾ ಚೀಟುಗಳು ಕಂಡುಬಂದಿದ್ದು ಸ್ವಚ್ಛಗೊಳಿಸುವ ಕೆಲಸ ನಡೆಯಲಿದೆ’ ಎಂದು ನೈರುತ್ಯ ರೈಲ್ವೆ ಕಾಮಗಾರಿ ವಿಭಾಗದ ಎಇಇ ಅಶೋಕ ಮುದಗೌಡರ ಹೇಳಿದರು.

ಉದ್ಘಾಟನೆ ದಿನ ಮಾತ್ರ ರೈಲು ಸಂಚಾರ ಆರಂಭಗೊಳ್ಳಲಿದೆ.

ನಿತ್ಯ ದೈನಂದಿನ ಸಂಚಾರದ ವೇಳಾಪಟ್ಟಿ ನಿಗದಿಯಾಗಿಲ್ಲ. ಅಧಿಸೂಚನೆ ಎರಡು ದಿನಗಳ ಒಳಗೆ ಅಂತಿಮಗೊಳ್ಳಲಿದೆ ಮಂಜುನಾಥ ಕನಮಡಿ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ನೈರುತ್ಯ ರೈಲ್ವೆ ರೈಲು ಸಂಚಾರ ಎಂಬುದು ಕುಷ್ಟಗಿ ಭಾಗದವರಿಗೆ ಐತಿಹಾಸಿಕ ಮಹತ್ವದಿಂದ ಕೂಡಿದೆ. ಇಲ್ಲಿಂದಲೇ ಚಾಲನೆ ದೊರೆಯಲಿರುವುದು ಮತ್ತಷ್ಟು ಸಂತಸ ತಂದಿದೆ ಡಾ.ಕೆ.ಬಸವರಾಜ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರೈಲು ಸಂಚಾರದ ವಿಷಯ ಇಲ್ಲಿಯ ಜನಮನದಲ್ಲಿ ಪುಳಕ ತಂದಿದೆ. ಉದ್ಘಾಟನೆ ಕಾರ್ಯಕ್ರಮ ಅರ್ಥಪೂರ್ಣವಾಗಿಸುತ್ತೇವೆ ವೀರೇಶ ಬಂಗಾರಶೆಟ್ಟರ ಅಧ್ಯಕ್ಷ ರೈಲ್ವೆ ಹೋರಾಟ ಸಮಿತಿ

ಬಿಜೆಪಿಗೆ ಗೆಲುವು ರಾಯರೆಡ್ಡಿಗೆ ಹಿನ್ನಡೆ

ಗದಗ–ವಾಡಿ ಪ್ರಯಾಣಿಕರ ರೈಲು ಸಂಚಾರವನ್ನು ಯಲಬುರ್ಗಾದಿಂದಲೇ ಚಾಲನೆಗೊಳಿಸುವ ನಿಟ್ಟಿನಲ್ಲಿ ಅಲ್ಲಿಯ ಶಾಸಕ ಬಸವರಾಜ ರಾಯರೆಡ್ಡಿ ಶತಾಯಗತಾಯ ಬಹಳಷ್ಟು ಪ್ರಯತ್ನಿಸಿದ್ದರು. ಅಷ್ಟೇ ಅಲ್ಲ ಈ ಕುರಿತು ರೈಲ್ವೆ ಇಲಾಖೆಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೂ ಪತ್ರ ಬರೆಯಿಸಿದ್ದರು. ಆದರೆ ಈ ವಿಷಯದಲ್ಲಿ ರಾಯರೆಡ್ಡಿ ಅವರ ಪ್ರಯತ್ನ ಕೈಕೊಟ್ಟಿದ್ದರೆ ಬಿಜೆಪಿಗೆ ರಾಜಕೀಯವಾಗಿ ಗೆಲುವಿಗೆ ಸಾಧ್ಯವಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಸಚಿವ ವಿ.ಸೋಮಣ್ಣ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಕೆ.ಬಸವರಾಜ ಈ ವಿಷಯದಲ್ಲಿ ಸಚಿವರ ಮನ ಒಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.