ಕೊಪ್ಪಳ: ಪ್ರತಿವರ್ಷ ಬೇಸಿಗೆ ಆರಂಭವಾಗುತ್ತಿದ್ದಂತೆ ಜನರಿಗೆ ಒಂದೆಡೆ ಬಿಸಿಲು, ಧಗೆ ಹೆಚ್ಚಾದರೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರಿಗೆ ‘ಈ ಬಾರಿ ಎರಡನೇ ಬೆಳೆಗೆ ನೀರು ಸಿಗುತ್ತದೆಯಾ’ ಎನ್ನುವ ಪ್ರಶ್ನೆ ಕಾಡುತ್ತಿದೆ. ಕೊಪ್ಪಳ, ಗಂಗಾವತಿ, ಕನಕಗಿರಿ ಹಾಗೂ ಕಾರಟಗಿ ಭಾಗದ ಅನ್ನದಾತರು ನೀರಿಗಾಗಿ ಜೀವನಾಡಿ ತುಂಗಭದ್ರ ನೆಚ್ಚಿಕೊಂಡಿದ್ದಾರೆ.
ಜಲಾಶಯ ಹಾಗೂ ನೀರು ಹರಿವಿಗೆ ಅತ್ಯುತ್ತಮ ಕಾಲುವೆ ವ್ಯವಸ್ಥೆಯಿದ್ದರೂ ಬಹಳಷ್ಟು ಕಡೆ ಇರುವ ನೀರಿನ ಸೋರಿಕೆ ರೈತರಿಗೆ ಮುಳುವಾಗುತ್ತದೆ. ಹೀಗಾಗಿ ನೆರೆಯ ರಾಯಚೂರು ಜಿಲ್ಲೆಯ ಕೊನೆಯ ಭಾಗದ ರೈತರಿಗೆ ನೀರು ತಲುಪುವುದಿಲ್ಲ. ಇದಕ್ಕಾಗಿ ಪ್ರತಿ ವರ್ಷ ಎರಡನೇ ಬೆಳೆಗೆ ನೀರಿಗಾಗಿ ರೈತರ ನಡುವೆಯೇ ಕಿತ್ತಾಟ ನಡೆಯುತ್ತದೆ. ಈ ಸಲದ ಬೇಸಿಗೆಯೂ ಇದರಿಂದ ಹೊರತಾಗಲಿಲ್ಲ.
ಐಸಿಸಿ ಸಲಹಾ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ‘ಕೊನೆಯ ಭಾಗದ ರೈತರಿಗೂ ನೀರು ತಲುಪಿಸಲು ಅಧಿಕಾರಿಗಳೇ ಹಗಲಿರುಳು ಕಣ್ಗಾವಲು ವಹಿಸಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಕಾರ್ಯಪಡೆ ತಂಡದೊಂದಿಗೆ ಖುದ್ದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಕಾಲುವೆ ಮಾರ್ಗದಲ್ಲಿಯೇ ಹಗಲಿರುಳು ಓಡಾಡಬೇಕಾಯಿತು. ಕಲಬುರಗಿ ವಿಭಾಗದ ಪ್ರಭಾರ ಪ್ರಾದೇಶಿಕ ಆಯುಕ್ತ ಎಂ.ಸುಂದರೇಶ ಬಾಬು ಕೂಡ ಎಡದಂಡೆ ಭಾಗದ ಕಾಲುವೆಗಳ ನೀರು ಹರಿವಿನ ಮೇಲೆ ಕಣ್ಗಾವಲು ಇರಿಸಬೇಕಾಯಿತು.
ನೀರಾವರಿ ವ್ಯವಸ್ಥೆ: ಜಲಾಶಯ ವ್ಯಾಪ್ತಿಯ ಎಡದಂಡೆ ಕಾಲುವೆಗಳ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರಿಗೆ ಸುಲಭವಾಗಿ ನೀರು ತಲುಪಲು ಉತ್ತಮ ರಕ್ಷಣಾ ನೀರಾವರಿ ವ್ಯವಸ್ಥೆ ರೂಪಿಸಲಾಗಿದೆ.
ರಕ್ಷಣಾ ನೀರಾವರಿ ವ್ಯವಸ್ಥೆಯೆಂದರೆ ಲಭ್ಯವಿರುವ ನೀರನ್ನು ತೆಳುವಾಗಿ ಅತಿ ಹೆಚ್ಚು ಕ್ಷೇತ್ರಕ್ಕೆ ಅರೆ ನೀರಾವರಿ ಬೆಳೆಗಳಿಗೆ ನೀರು ಒದಗಿಸುವುದಾಗಿರುತ್ತದೆ. ಈ ವಿನ್ಯಾಸದ ತಳಹದಿಯ ಮೇಲೆ ರಚಿಸಿದ ತುಂಗಭದ್ರ ಯೋಜನೆಯೂ, ತುಂಗಭದ್ರ ಅಣೆಕಟ್ಟಿನಿಂದ ಎಡದಂಡೆ ಕಾಲುವೆಗಳು ಹಾಗೂ ಬಲದಂಡೆ ಕಾಲುವೆಗಳ ಮೂಲಕ ಸಾವಿರಾರು ಗ್ರಾಮಗಳಿಗೆ ಹಾಗೂ ಪ್ರಮುಖ ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸುತ್ತದೆ.
ತುಂಗಭದ್ರ ಎಡದಂಡೆ ಕಾಲುವೆಯ ವಿನ್ಯಾಸವು ಸಹ ಬಹಳ ಸೊಗಸಾಗಿದ್ದು, ಈ ಭಾಗದ ಪ್ರತಿಯೊಂದು ಗ್ರಾಮಗಳಿಗೆ ನೀರು ಕಲ್ಪಿಸಲು ಕಾಲುವೆಗಳ ಜಾಲ ರೂಪಿಸಲಾಯಿತು. ಈ ಕಾಲುವೆಯ ಮತ್ತೊಂದು ವಿಶೇಷವೆಂದರೆ ಒಳ ಜಲಸಾರಿಗೆಯಾಗಿ ರಚಿಸಲಾಯಿತು. ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ. ಮುಖ್ಯವಾಗಿ ಕಾಲುವೆ ಮಾರ್ಗದಲ್ಲಿ ವಾಮಮಾರ್ಗದಲ್ಲಿ ನೀರು ಹರಿಸಿಕೊಳ್ಳುವ ಹಾಗೂ ನೀರು ಸೋರಿಕೆಯಾಗುವುದನ್ನು ತಡೆಗಟ್ಟಬೇಕಾಗಿದೆ.
ರೈತರ ಹೊಲ ತಲುಪಬೇಕಾದ ನೀರು ಅನಗತ್ಯವಾಗಿ ಸೋರಿಕೆಯಾಗುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಇದನ್ನು ತುರ್ತಾಗಿ ತಡೆಗಟ್ಟಬೇಕು.–ಪಂಪಾಪತಿ ರಾಟಿ, ತುಂಗಭದ್ರಾ ಎಡದಂಡೆ ಮತ್ತು ಬಲದಂಡೆ ಗುತ್ತಿಗೆ ಕಾರ್ಮಿಕರ ಸಂಘದ ಗೌರವಾಧ್ಯಕ್ಷ
‘ವ್ಯತಿರಿಕ್ತ ಬೆಳೆಯ ಮಾದರಿಯೇ ಮಾರಕ’
– ಆರ್. ದೊರೈಸ್ವಾಮಿ
ಕೊಪ್ಪಳ: ತುಂಗಭದ್ರ ಎಡದಂಡೆ ಕಾಲುವೆ ನೀರಿ ರೈತರಿಗೆ ಸರಿಯಾಗಿ ತಲುಪುತ್ತಿಲ್ಲ ಎನ್ನುವ ದೂರು ಇದ್ದೇ ಇದೆ. ಪ್ರತಿ ಹಂಗಾಮಿನಲ್ಲಿ ನೀರು ನಿರ್ವಹಣೆ ಜಟಿಲವಾಗುತ್ತಿದೆ.
ಕೊನೆಭಾಗದ ನಿರಾಶ್ರಿತ ರೈತರ ಪರಿಸ್ಥಿತಿ ಬರಿ ಮುಖ್ಯ ಕಾಲುವೆಯಲ್ಲಷ್ಟೇ ಅಲ್ಲದೆ ವಿತರಣಾ ಹಾಗೂ ಉಪ ವಿತರಣಾ ಕಾಲುವೆಗಳಲ್ಲಿಯೂ ಸಮಸ್ಯೆ ಕಾಡುತ್ತದೆ. ಎಡದಂಡೆ ಕಾಲುವೆಯ ಗರಿಷ್ಠ 4000ಕ್ಕೂ ಅಧಿಕ ಕ್ಯುಸೆಕ್ ನೀರು ಹರಿಸಿದರೂ ಸಿರವಾರ ದಾಟಿಸಲು ಕಷ್ಟವಾಗುತ್ತಿದೆ. ನೀರು ಹರಿಸುವ ಯೋಜನೆಯ ವಿನ್ಯಾಸದ ಬೆಳೆ ಮಾದರಿಗೂ ಹಾಗೂ ಹಾಲಿ ಬೆಳೆಯುತ್ತಿರುವ ಬೆಳೆ ಮಾದರಿಯು ವ್ಯತಿರಿಕ್ತವಾಗಿದ್ದು ಇದಕ್ಕೆ ಪ್ರಮುಖ ಕಾರಣ.
ಈ ಸಮಸ್ಯೆ ಕೇವಲ ತುಂಗಭದ್ರ ಯೋಜನೆಯಲ್ಲಷ್ಟೇ ಅಲ್ಲ ತಮಿಳುನಾಡಿನಲ್ಲಿರುವ ಲೊವರ್ ಭವಾನಿಸಾಗರ ಯೋಜನೆ ಹಾಗೂ ಪರಂಬಿಕುಳಂ ಆಳಿಯರ್ ಯೋಜನೆಯಲ್ಲಿಯೂ ಇದೆ. ಈ ಬೆಳೆ ಮಾದರಿಯ ಉಲ್ಲಂಘನೆ ನಿಯಂತ್ರಿಸುವುದು ಕಷ್ಟಸಾಧ್ಯವೆಂದು ಅರಿತ ತಂಇಳುನಾಡು ಸರ್ಕಾರ ಒಟ್ಟು ಅಚ್ಚುಕಟ್ಟು ಪ್ರದೇಶವನ್ನು ಪರ್ಯಾಯ ನೀರಾವರಿ ವ್ಯವಸ್ಥೆ ಎಂದು ಅಧಿಸೂಚನೆ ಹೊರಡಿಸಿತ್ತು. ಈ ಅಚ್ಚುಕಟ್ಟು ಪ್ರದೇಶದಲ್ಲಿ ಅಂತರ್ಜಲ ಮಟ್ಟ ಐದು ಮೀಟರ್‌ಗಿಂತಲೂ ಕಡಿಮೆ ಆಳದಲ್ಲಿ ಲಭ್ಯವಿರುವುದಾಗಿ ಮೇಲ್ನೋಟಕ್ಕೆ ಕಂಡರೂ ಸಹ ಇದರ ಲಭ್ಯತೆಯ ಪ್ರಮಾಣವು ಬಹಳ ಕಡಿಮೆಯಿದೆ. ಇದರ ಗುಣಮಟ್ಟವು ಬಳಕೆಗೆ ಯೋಗ್ಯವಿಲ್ಲ. ಅಧ್ಯಯನದ ಪ್ರಕಾರ ಸುಮಾರು 3 ಟಿಎಂಸಿ ಅಡಿ ಅಂತರ್ಜಲ ನೀರು ಮಾತ್ರ ಬಳಕೆಯಾಗುತ್ತಿದೆ. ಇದು ಈ ಭೂ ಭಾಗದ ಲಕ್ಷಣಗಳಿಂದ ಅಂತರ್ಜಲ ಕ್ಲಿಷ್ಟಕರ ಪರಿಸ್ಥಿತಿಯಲ್ಲಿದ್ದು ರೈತರಿಗೆ ಅನುಕೂಲವಾಗಿಲ್ಲ. ತುಂಗಭದ್ರ ಜಲಾಶಯ ಹಾಗೂ ಕಾಲುವೆಗಳು ಏಳು ದಶಕಗಳಿಂದ ಕಾರ್ಯನಿರ್ವಹಿಸುತ್ತಿವೆ.
ಈ ಆಣೆಕಟ್ಟುಗಳ ಗೇಟುಗಳನ್ನು ತಾಂತ್ರಿಕ ಅಧ್ಯಯನ್ನಾಧರಿಸಿ ಪುನರ್ವಸತಿ ಕಾರ್ಯ ಕೈಗೊಳ್ಲುವುದರ ಜೊತೆಗೆ 227 ಕಿ.ಮೀ. ಉದ್ದದ ಎಡದಂಡೆ ಕಾಲುವೆಯಲ್ಲಿ ಹಲವಾರು ರಚನೆಗಳು ಶಿಥಿಲಾವಸ್ಥೆಯಲ್ಲಿವೆ. ಇದರಿಂದಾಗಿ ಕಾಲುವೆಯ ನೀರಿನ ಸೋರಿಕೆಯಾಗಿ ನೀರು ಹರಿಯುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಇವು ಮುಂಬರುವ ದಿನಗಳಲ್ಲಿ ಕುಸಿದು ಬೀಳುವ ಸಾಧ್ಯತೆಯೂ ಇರುತ್ತದೆ. ಹಾಗೆ ಕುಸಿದು ಬಿದ್ದಲ್ಲಿ ನೀರು ಬೇರೆ ಕಡೆ ಪೂರೈಸಲು ಸಾಧ್ಯವಾಗದೇ ಕುಡಿಯುವ ನೀರು ಸರಬರಾಜು ಮಾಡಲು ಹಾಗೂ ಲಕ್ಷಾಂತರ ಪ್ರದೇಶಕ್ಕೆ ತುರ್ತಾಗಿ ನೀರು ಒದಗಿಸಲು ಆಗುವುದಿಲ್ಲ.
ಸಾವಿರಾರು ಕೋಟಿಯ ಆರ್ಥಿಕ ಚಟುವಟಿಕೆಯ ಮೇಲೆ ಬರೆ ಎಳೆದಂತಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮ ವಹಿಸಿ ಈ ಕಾಲುವೆಯಲ್ಲಿರುವ ವಿನ್ಯಾಸಗಳ ಜೊತೆಗೆ ಕಾಲುವೆಗಳ ದುರಸ್ತಿ ಕಾರ್ಯವನ್ನೂ ಕ್ಷಿಪ್ರವಾಗಿ ಕೈಗೊಳ್ಳಬೇಕಿದೆ. ಈ ಸಂಬಂಧವಾಗಿ ಕರ್ನಾಟಕ ನೀರಾವರಿ ನಿಗಮ ₹1800 ಕೋಟಿ ಪ್ರಸ್ತಾವ ಕೈಗೆತ್ತಿಕೊಂಡಿರುವುದು ಶ್ಲಾಘನೀಯ. ನೀರಿನ ಸಮರ್ಪಕ ಬಳಕೆಗೆ ಯೋಜನೆಯಲ್ಲಿ ನೀರು ಬಳಕೆದಾರರ ಸಂಘಗಳನ್ನು ಬಲಪಡಿಸುವುದು ಅಚ್ಚುಕಟ್ಟಿನಲ್ಲಿ ಮಣ್ಣಿನ ಫಲವತ್ತತೆ ಕಾಯುವುದಕ್ಕೆ ಆದ್ಯತೆ ನೀಡುವುದು ಮತ್ತು ಪ್ರತಿ ವರ್ಷವು ಕಾಲುವೆಗೆ ಅವಶ್ಯಕತೆಗನುಗುಣವಾಗಿ ಕ್ರಮ ಕೈಗೊಳ್ಳಬೇಕಿದೆ.
ಈ ಪ್ರಸ್ತಾವಕ್ಕೆ ಅವಶ್ಯವಾದ ಹಣಕಾಸು ನೆರವು ಕೇಂದ್ರ ಸರ್ಕಾರದಿಂದ ದೊರೆಯುವುದು ವಿಳಂಬವಾದಲ್ಲಿ ಇತರೆ ಹಣಕಾಸಿನ ಸಂಸ್ಥೆಗಳ ಹಾಗೂ ಅಭಿವೃದ್ಧಿ ಬ್ಯಾಂಕ್‌ಗಳ ನೆರವು ಪಡೆಯುವ ಚಿಂತನೆ ಅಗತ್ಯ. ಸಾಮಾಜಿಕ ಆರ್ಥಿಕ ಸಾಂಸ್ಥಿಕ ಹಾಗೂ ರಾಜಕೀಯ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿರುವ ಈ ಅದ್ಬುತವಾದ ನೀರಾವರಿ ಸೌಕರ್ಯವನ್ನು ರಕ್ಷಿಸಿ ನಮ್ಮ ಮುಂದಿನ ಪೀಳಿಗೆಗೆ ಉಳಿಸಬೇಕಿದೆ.
ಲೇಖಕರು: ವಿಜಯನಗರ ಕಾಲುವೆಗಳ ಆಧುನೀಕರಣ ಯೋಜನೆ ಇಜಿಐಎಸ್ ಇಂಡಿಯಾದ ಯೋಜನಾ ಸಹಾಯಕ ಸಮಾಲೋಚಕ ತಂಡದ ಟೀಮ್ ಲೀಡರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.