ADVERTISEMENT

ಕರ್ತವ್ಯ ನಿರತ ಪೇದೆ ಮೇಲೆ ಹಲ್ಲೆ; ಇಬ್ಬರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 16:21 IST
Last Updated 17 ಸೆಪ್ಟೆಂಬರ್ 2022, 16:21 IST
   

ಕುಷ್ಟಗಿ (ಕೊಪ್ಪಳ ಜಿಲ್ಲೆ): ಕರ್ತವ್ಯಕ್ಕೆ ತೆರಳುತ್ತಿದ್ದ ಪೇದೆಯೊಬ್ಬರ ಮೇಲೆ ವಿನಾಕಾರಣ ಹಲ್ಲೆ ನಡೆಸಿ ಪ್ರಾಣ ಬೆದರಿಕೆಯೊಡ್ಡಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಇಲ್ಲಿಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಲಾರಿ ಚಾಲಕ ಶರಣಪ್ಪ ವೀರಭದ್ರಪ್ಪ ಸೊಬರದ, ಇಟ್ಟಿಗೆ ವ್ಯಾಪಾರ ಶರಣಪ್ಪ ಚನ್ನಪ್ಪ ಹೊಸವಕ್ಕಲ ಎಂದು ಗುರುತಿಸಲಾಗಿದೆ.

ಆಗಿದ್ದೇನು: ಶನಿವಾರ ಮಧ್ಯಾಹ್ನ ಪಟ್ಟಣದ ಶಾಖಾಪುರ ರಸ್ತೆ ಮಾರ್ಗವಾಗಿ ಪೇದೆ ಅಬ್ದುಲ್‌ ಖಾದರ್‌ ಬೈಕ್‌ ಮೇಲೆ ಪೊಲೀಸ್‌ ಠಾಣೆ ಬರುತ್ತಿದ್ದಾಗ ದಾರಿ ಮಧ್ಯೆ ಕ್ಯಾಂಟರ್‌ ಲಾರಿ ರಸ್ತೆಗುಂಡಿಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ದಾರಿಗೆ ಅಡ್ಡಲಾಗಿ ಲಾರಿ ನಿಂತಿದ್ದರಿಂದ ಸಂಚಾರಕ್ಕೆ ಅಡ್ಡಿಯಾಗಿದ್ದು ಕಂಡುಬಂದಿದೆ. ಅದನ್ನು ಅಬ್ದುಲ್‌ ಖಾದರ್‌ ಪ್ರಶ್ನಿಸಿದ್ದಾರೆ. ಅಷ್ಟಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರೋಪಿಗಳು ಪೇದೆಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.

ADVERTISEMENT

ಅಂಗಿ ಹಿಡಿದು ಎಳೆದಾಡಿ ಅವಾಚ್ಯಪದಗಳಿಂದ ನಿಂದಿಸಿದ್ದಲ್ಲದೆ ಒಬ್ಬ ಆರೋಪಿ ಸ್ಕ್ರೂಡ್ರಾವರ್‌ನಿಂದ ತಿವಿಯಲು ಯತ್ನಿಸಿದರೆ, ಇನ್ನೊಬ್ಬ ಪೇದೆಯನ್ನು ನೆಲಕ್ಕೆ ಒರಗಿಸಿ ಗುದ್ದಿ, ಕಪಾಳಕ್ಕೆ ಹೊಡೆದು ಹಲ್ಲೆ ನಡೆಸಿದ್ದಾನೆ ಎಂದು ಎಫ್‌ಐಆರ್‌ದಲ್ಲಿ ವಿವರಿಸಲಾಗಿದೆ.

ಅಬ್ದುಲ್‌ ಖಾದರ್‌ ದೂರಿನ ಅನ್ವಯ ಇಲ್ಲಿಯ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್ ಮೌನೇಶ್‌ ರಾಠೋಡ್ ಕೊಲೆಗೆ ಯತ್ನ ಸೇರಿದಂತೆ ವಿವಿಧ ಕಲಂ ಗಳ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಪಿಐ ಎನ್‌.ಆರ್‌.ನಿಂಗಪ್ಪ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.