ಕುಷ್ಟಗಿ: ಮಳೆ ನೀರು ಹರಿದುಬರುವ ಕಡೆಗಳಲ್ಲಿ ಕೃಷಿ ಹೊಂಡಗಳು ನಿರ್ಮಾಣಗೊಳ್ಳಬೇಕು. ಆದರೆ ತಾಲ್ಲೂಕಿನಲ್ಲಿ ನೀರು ಬಾರದ ದಿಬ್ಬದ ಜಾಗದಲ್ಲಿ ಅವೈಜ್ಞಾನಿಕ ಮತ್ತು ಕಾಟಾಚಾರಕ್ಕೆ ಕೃಷಿ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ ಎಂಬ ವಿಚಾರ ಮಂಗಳವಾರ ಇಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪ್ರಸ್ತಾಪವಾಯಿತು.
ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆಯಲ್ಲಿ ಕೃಷಿಹೊಂಡಗಳನ್ನು ನಿರ್ಮಿಸಲಾಗುತ್ತಿದ್ದು ಈ ಬಾರಿ 23 ಹೊಂಡಗಳ ಗುರಿ ಇದೆ ಎಂದು ಇಲಾಖೆಯವರು ಸಭೆಗೆ ತಿಳಿಸಿದರು. ಮಳೆ ನೀರಿನ ಸದ್ಬಳಕೆ, ಅಂತರ್ಜಲ ಹೆಚ್ಚಳದ ಉದ್ದೇಶ ಇದಾಗಿದ್ದರೂ ಕೆಲ ರೈತರು ಪಂಪ್‌ಸೆಟ್ ಮೂಲಕ ನೀರು ಸಂಗ್ರಹಿಸುವುದಾಗಿ ತಿಳಿಸುತ್ತಾರೆ. ಈ ರೀತಿ ಹೊಂಡ ನಿರ್ಮಿಸುವ ಉದ್ದೇಶವಾದರೂ ಏನು ಎಂದು ಸದಸ್ಯರು ಆಕ್ಷೇಪಿಸಿದರು. ತಾಂತ್ರಿಕವಾಗಿ ಸೂಕ್ತವಾಗಿರುವ ಸ್ಥಳದಲ್ಲಿ ಮಾತ್ರ ಹೊಂಡ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಅಧ್ಯಕ್ಷತೆ ವಹಿಸಿದ್ದ ಶಾಸಕ ದೊಡ್ಡನಗೌಡ ಪಾಟೀಲ ಅಧಿಕಾರಿಗೆ ತಾಕೀತು ಮಾಡಿದರು. ಬೀಜ, ಗೊಬ್ಬರ ಪಡೆಯಲು ರೈತರ ಅನುಕೂಲಕ್ಕೆ ತಾಲ್ಲೂಕಿನ ಪತ್ತಿನ ಸಹಕಾರ ಸಂಘಗಳಿಗೆ ಪರವಾನಗಿ ಕೊಡಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಲು ಸಭೆ ನಿರ್ಣಯಿಸಿತು.
ಅಪೂರ್ಣಗೊಂಡಿರುವ ಶಾಲೆ, ಅಂಗನವಾಡಿ ಕಟ್ಟಡಗಳನ್ನು ಪೂರ್ಣಗೊಳಿಸಿ ಹಸ್ತಾಂತರಿಸಲು ನಿರ್ಮಿತಿ, ಕೆಆರ್‌ಡಿಎಲ್ ಎಂಜಿನಿಯರ್‌ಗಳಿಗೆ ಸೂಚಿಸಲಾಯಿತು. 80 ಶಾಲೆಗಳಿಗೆ ಕುಡಿಯುವ ನೀರಿನ ಸಂಪರ್ಕ ಇಲ್ಲ. ಈ ವರ್ಷ 35 ಎಲ್‌ಕೆಜಿ, ಯುಕೆಜಿ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಶಿಕ್ಷಣಾಧಿಕಾರಿ ಸಭೆಗೆ ತಿಳಿಸಿದರು.
ಜೆಜೆಎಂ ಯೋಜನೆ ಅಪೂರ್ಣಗೊಂಡಿದೆ, ಕೆಲಸ ಹಸ್ತಾಂತರಗೊಳ್ಳದಿದ್ದರೂ ಬಿಲ್ ಪಾವತಿಯಾಗಿದೆ, ಬಹುತೇಕ ಕಡೆಗಳಲ್ಲಿ ನೀರು ಬರುವುದಿಲ್ಲ, ಕೊಳವೆಗಳೂ ಇಲ್ಲ ಇದು ‘ಜಲ ಇಲ್ಲದ ಜೀವನ’ ಯೋಜನೆ ಎಂದು ಸದಸ್ಯರು ಅತೃಪ್ತಿ ಹೊರಹಾಕಿದರು.
ಪಟ್ಟಣದಲ್ಲಿ 1978ರಿಂದ ಇಲ್ಲಿಯವರೆಗೆ ಒಟ್ಟು 246 ಉದ್ಯಾನ ಜಾಗಗಳಿದ್ದವು ಎಂದು ಪುರಸಭೆ ಮುಖ್ಯಾಧಿಕಾರಿ ಹೇಳಿದಾಗ ಈಗ ಉಳಿದದ್ದೆಷ್ಟು ಎಂದು ಸದಸ್ಯರು ಆಕ್ಷೇಪಿಸಿದರು. ಈಗ ಕೆಲ ಉದ್ಯಾನಗಳಿಗೆ ರಕ್ಷಣೆ ಒದಗಿಸಲಾಗಿದೆ, ಕೃಷ್ಣಗಿರಿಯಲ್ಲಿ ₹ 10 ಲಕ್ಷ ವೆಚ್ಚದಲ್ಲಿ ಮಾದರಿ ಉದ್ಯಾನ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.
ಬ್ಯಾಲಿಹಾಳ ಬಳಿಯ ಉದ್ಯಾನವನ್ನು ಪುರಸಭೆಗೆ ವಹಿಸಿಕೊಳ್ಳುವಂತೆ ಹಾಗೂ ಸಭೆಗೆ ಬಾರದ ಮತ್ತು ಅನುಪಾಲನಾ ವರದಿ ನೀಡದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸಭೆ ನಿರ್ಣಯಿಸಿತು. ನಾಮನಿರ್ದೇಶಿತ ಸದಸ್ಯರಾದ ಕೆ.ಶಾಮರಾವ, ಶೇಖರಗೌಡ ಮಾಲಿಪಾಟೀಲ, ಗೋಪಾಲರಾವ ಬಿಜಕಲ್, ಯಲ್ಲಪ್ಪ ಬಾಗಲಿ, ಸಿದ್ದನಗೌಡ ಪಾಟೀಲ, ಅನ್ವರ್ ಅತ್ತಾರ, ಹನುನಮಗೌಡ ಇದ್ಲಾಪುರ. ತಹಶೀಲ್ದಾರ್ ಅಶೋಕ ಶಿಗ್ಗಾವಿ, ಕಾರ್ಯನಿರ್ವಹಣಾಧಿಕಾರಿ ಪಂಪಾಪತಿ ಹಿರೇಮಠ ಇತರರು ಇದ್ದರು.
ಸದಸ್ಯ–ಶಾಸಕರ ಮಧ್ಯೆ ವಾಗ್ವಾದ
ಲೋಕೋಪಯೋಗಿ ಇಲಾಖೆ ನಿರ್ಮಿಸಿರುವ ಸಿಸಿ ರಸ್ತೆಗಳು ಕಳಪೆಯಾಗಿವೆ ಎಂದು ಸದಸ್ಯ ಯಲ್ಲಪ್ಪ ಬಾಗಲಿ ಸಭೆಯಲ್ಲಿ ದೂರಿದರು. ಎಲ್ಲದಕ್ಕೂ ಕಳಪೆ ಎಂದರೆ ಹೇಗೆ ಯಾವ ತಾಂತ್ರಿಕ ಆಧಾರ ಇಲ್ಲದೆ ಆರೋಪಿಸುವುದು ಬೇಡ ಎಂದು ಶಾಸಕ ದೊಡ್ಡನಗೌಡ ಪಾಟೀಲ ಆಕ್ಷೇಪಿಸಿದರು. ‘ಹಾಗಾದರೆ ಗುಣಮಟ್ಟದ ಬಗ್ಗೆ ಕೇಳಲೇಬಾರದೇ? ಈಗಲೇ ಹೋಗಿ ನೋಡೋಣ ನಿಮಗೇ ತಿಳಿಯುತ್ತದೆ. ಒಂದೊಮ್ಮೆ ಸರಿಯಾಗಿದ್ದರೆ ನನ್ನ ಕಪಾಳಕ್ಕೆ ಹೊಡೆಯಿರಿ’ ಎಂದು ಸದಸ್ಯ ಪುನಃ ವಾಗ್ವಾದಕ್ಕಿಳಿದರು. ‘ಕಳಪೆ ಎಂದು ಎಂಜಿನಿಯರ್ ಹೇಳಬೇಕಾಗುತ್ತದೆ ನಿಮಗೆ ಅಂಥ ಅಧಿಕಾರ ಇಲ್ಲ. ಕಳಪೆಯಾಗಿದ್ದರೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ. ಗುತ್ತಿಗೆದಾರರ ಬಿಲ್ ತಡೆಹಿಡಿಯಲೂ ಅವಕಾಶವಿದೆ. ಸುಮ್ಮನೆ ಆರೋಪಿಸುವುದು ಸರಿಯಲ್ಲ’ ಎಂದು ಶಾಸಕ ಹೇಳಿದರು. ಇಬ್ಬರ ಮಧ್ಯೆ ಈ ವಿಷಯದಲ್ಲಿ ಕಾವೇರಿದ ಚರ್ಚೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.