ADVERTISEMENT

‘ಈಡಿಗರಿಗೆ ಸಾಮೂಹಿಕ ನಾಯಕತ್ವ’

ಜೆ.ಪಿ ಸಾಕ್ಷರತಾ ಅಭಿಯಾನದ ‘ಯುವ ಸಿರಿ’ ಕಾರ್ಯಕ್ರಮದಲ್ಲಿ ಡಾ.ಲಕ್ಷ್ಮಿನರಸಯ್ಯ ಸಲಹೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 5:48 IST
Last Updated 17 ಫೆಬ್ರುವರಿ 2020, 5:48 IST
ಕೊಪ್ಪಳದ ಮಹಾವೀರ ಸಮುದಾಯ ಭವನದಲ್ಲಿ ಭಾನುವಾರ ನಡೆದ ಜೆ.ಪಿ ಸಾಕ್ಷರತಾ ಅಭಿಯಾನದ ‘ಯುವ ಸಿರಿ’ ಆರ್ಯ ಈಡಿಗ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನರು ಭಾಗವಹಿಸಿದ್ದ ಜನರು
ಕೊಪ್ಪಳದ ಮಹಾವೀರ ಸಮುದಾಯ ಭವನದಲ್ಲಿ ಭಾನುವಾರ ನಡೆದ ಜೆ.ಪಿ ಸಾಕ್ಷರತಾ ಅಭಿಯಾನದ ‘ಯುವ ಸಿರಿ’ ಆರ್ಯ ಈಡಿಗ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನರು ಭಾಗವಹಿಸಿದ್ದ ಜನರು   

ಕೊಪ್ಪಳ: ಪ್ರಸ್ತುತ ಈಡಿಗ ಸಮಾಜದ ಶೂನ್ಯ ಯುಗವಾಗಿದೆ.ಕಷ್ಟ ಕೇಳುವ ಯಾವೊಬ್ಬ ನಾಯಕರಿಲ್ಲ. ಹಾಗಾಗಿ ಸಾಮೂಹಿಕ ನಾಯಕತ್ವ, ಚಿಂತನೆಯಲ್ಲಿ ಸಮಾಜವನ್ನು ಕಟ್ಟಬೇಕಾದ ಅನಿವಾರ್ಯತೆಯಿದೆ. ಗೌರವಯುತ ಸಮಾಜವನ್ನು ನಿರ್ಮಿಸಬೇಕು ಎಂದು ಕೆಪಿಎಸ್‌ಸಿ ಸದಸ್ಯ ಡಾ. ಲಕ್ಷ್ಮಿನರಸಯ್ಯ ಹೇಳಿದರು.

ನಗರದ ಗೋಶಾಲೆ ರಸ್ತೆಯ ಮಹಾವೀರ ಸಮುದಾಯ ಭವನದಲ್ಲಿ ಭಾನುವಾರ ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದ ಜಿಲ್ಲಾ ಘಟಕದ ವತಿಯಿಂದ ನಡೆದ ಜೆ.ಪಿ ಸಾಕ್ಷರತಾ ಅಭಿಯಾನದ ‘ಯುವ ಸಿರಿ’ ಉತ್ತರ ಕರ್ನಾಟಕ ಜಿಲ್ಲೆಗಳ ಆರ್ಯ ಈಡಿಗ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೆ.ಎನ್.ಗುರುಸ್ವಾಮಿ, ವೆಂಕಟಸ್ವಾಮಿ ಯುಗವನ್ನು ಸುವರ್ಣಯುಗ ಎಂದರು. ಏಕೆಂದರೆ ಸರ್ಕಾರಗಳು ಕೆಲವೊಂದು ಬಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕೆ.ಎನ್‌.ಗುರುಸ್ವಾಮಿ ಅವರ ಅಭಿಪ್ರಾಯಗಳನ್ನು ಕೇಳುತ್ತಿದ್ದವು. ಡಾ.ರಾಜಕುಮಾರ‌ ಹಾಗೂ ಎಸ್.ಬಂಗಾರಪ್ಪನವರದು ಪ್ರಕಾಶಿತಯುಗ. ಯಾರೊಬ್ಬರು ಇವರನ್ನು ಬಳಸಿ ಕೊಳ್ಳಲಿಲ್ಲ. ಅಂದು ಭವಿಷ್ಯದ ಬದುಕಿನ ಚಿಂತನೆ ಯಾರು ಮಾಡಲಿಲ್ಲ ಎಂದರು.

ADVERTISEMENT

ಜಾಲಪ್ಪ ಹಾಗೂ ಜೆ.ಪಿ.ನಾರಾಯಣಸ್ಚಾಮಿನವರದು ಪರಿವರ್ತನಾ ಯುಗ. ಸೇಂದಿ, ಸಾರಾಯಿ ಬಿಟ್ಟು ಶಿಕ್ಷಣ ಮತ್ತು ಸಂಘಟನೆಯ ಮೂಲಕ ಸಮಾಜ ಪರಿವರ್ತನೆ‌ಗೆ ಮುಂದಾದರು. ಇವರಿಬ್ಬರೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರು.

ಜೆ.ಪಿ.ನಾರಾಯಣಸ್ವಾಮಿ ಅವರು ವಿದ್ಯಾರ್ಥಿ ನಿಲಯ, ಸಮುದಾಯ‌ಭವನ, ದೇವಸ್ಥಾನ ನಿರ್ಮಾಣದಂತಹ ಸ್ಥಿರಾಸ್ತಿಗಳನ್ನು ಮಾಡಿದರು. ಸರ್ಕಾರದಿಂದ ₹‌ 39.40 ಕೋಟಿ ಅನುದಾನ ತಂದರು. ಇವರ ನಿಧನದ ಬಳಿಕ ಒಂದು ರೂಪಾಯಿ ಸಮಾಜಕ್ಕೆ ಬಂದಿಲ್ಲ. ಸೇಂದಿ ಸಾರಾಯಿ ಕಳೆದುಕೊಂಡವರಿಗೆ ಉದ್ಯೋಗವೂ ಇಲ್ಲ ಮತ್ತು ಪರಿಹಾರವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿದ್ಯಾರ್ಥಿ ವೇತನ, ನಿರುದ್ಯೋಗಿ60 ಯುವಕರಿಗೆ ಉಚಿತ ಕೌಶಲ ತರಬೇತಿ ನೀಡಿ, ಎಲ್ಲರಿಗೂ ಉದ್ಯೋಗ ಕೊಡಿಸಿದ್ದಾರೆ. 57 ಜನರಿಗೆ ವೈದ್ಯಕೀಯ ನೆರವು, ವೃದ್ಧರಿಗೆ₹ 500 ಮಾಸಾಶನ, ಬಿ.ಪ್ಲೋರಾಯ್ಡ ಘಟಕ ಸ್ಥಾಪನೆ ಹಾಗೂ ಸಮಾಜದ ಸಂಘಟನೆಗೆ ಜಿಲ್ಲೆಗಳಲ್ಲಿ ಸಂಚಾಲಕ ಸಮಿತಿ ರಚನೆ ಮಾಡಿದ್ದಾರೆ. ಅಲ್ಲದೇ ಕೊಪ್ಪಳದಲ್ಲಿಯೂ ಕೌಶಲ ತರಬೇತಿ ನೀಡುವ ಉದ್ದೇಶ ಹೊಂದಿದ್ದು, ಯುವಕರು ಸದುಪಯೋಗ ಪಡಿಸಿಕೊಳ್ಳಿ‌ ಎಂದು ಕರೆ ನೀಡಿದರು.

ಮಾಜಿ ಸಂಸದ ಎಚ್.ಜಿ.ರಾಮುಲು ಮಾತನಾಡಿ, ಜೆ.ಪಿ ನಾರಾಣಯಸ್ವಾಮಿ ಅವರು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಹಾಗೂ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.‌ ತಂದೆಯ ಆಶಯವನ್ನು ಮಗ ಜೆ.ಪಿ.ಸುಧಾಕರ ಈಡೇರಿಸಬೇಕು ಎಂದರು.

ಜಿಲ್ಲಾ ಮುಖ್ಯ ಸಂಚಾಲಕ ರಾಘವೇಂದ್ರ ಹುಯಿಲಗೋಳ ಹಾಗೂ ಅನಿಲ್ ಹುಲಿಗಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಬೆಂಗಳೂರು ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ಜೆ.ಪಿ.ಸುಧಾಕರ ಅಧ್ಯಕ್ಷತೆ ವಹಿಸಿದ್ದರು.

ಆರ್.ಎಲ್.ಜಾಲಪ್ಪ ಅಕಾಡೆಮಿ ಅಧ್ಯಕ್ಷ ಎಚ್.ಎಲ್.ಶಿವಾನಂದ, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ, ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷ ಎ.ಈ.ಸೂರಿಬಾಬು, ಗೌರವ ಅಧ್ಯಕ್ಷ ಪ್ರದೀಪ ಹಾನಗಲ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.