ಕಾರಟಗಿ: ವಿಶ್ವ ಪರಿಸರ ದಿನವನ್ನು ಪಟ್ಟಣದ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಆರಂಭದಲ್ಲಿ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿಚ್ಚಗಲ್ ಪರಿಸರ, ಅದರ ಅಗತ್ಯ, ಮಹತ್ವ, ನಮ್ಮೆಲ್ಲರ ಜವಾಬ್ದಾರಿತನ ಏನು ಎನ್ನುವ ಕುರಿತು ಮಾತನಾಡಿದರು.
ಶಾಲೆಯ ಪುಟ್ಟ ಮಕ್ಕಳು ಪರಿಸರದ ಕುರಿತು ವೇಷಭೂಷಣದೊಂದಿಗೆ ಘೋಷಣೆಯ ಭಿತ್ತಿಪತ್ರಗಳೊಂದಿಗೆ ಅರಿವು ಮೂಡಿಸಿದ್ದು ವಿಶೇಷವಾಗಿತ್ತು. ಬಳಿಕ ಶಾಲಾ ಆವರಣದಲ್ಲಿ ತರಾವರಿ ಸಸಿಗಳನ್ನು ನೆಡುವುದರ ಮೂಲಕ ಸಂಭ್ರಮಿಸಿದರು. ಮುಖ್ಯೋಪಾಧ್ಯಾಯರಾದ ಹನುಮಂತಪ್ಪ, ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.
ಬಾಲಕಿಯರ ಶಾಲೆ: ಪರಿಸರ ದಿನಾಚರಣೆ ನಿಮಿತ್ತ ಪಟ್ಟಣದ ಉನ್ನತೀಕರಿಸಿದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ನಮೂನೆಯ ಸಸಿಗಳನ್ನು ನೆಟ್ಟು, ನೀರೆರೆಯಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು. ಮನೆಗೆ ಒಂದು ಮರ, ಊರಿಗೊಂದು ವನ. ಹಸಿರು ಇದ್ದರೆ ಉಸಿರು ಎಂಬ ಘೋಷಣೆಗಳನ್ನು ವಿದ್ಯಾರ್ಥಿಗಳು ಹಾಕಿದರು. ಪರಿಸರದ ಬಗ್ಗೆ ಚಿತ್ರಕಲಾ ಸ್ಪರ್ಧೆಯನ್ನು ನಡೆಸಲಾಯಿತು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಆಂಜನೇಯ ಬೇವಿನಾಳ, ಮುಖ್ಯಶಿಕ್ಷಕ ಬಸಯ್ಯ ಮಠ, ಶಿಕ್ಷಕರಾದ ಅಮರೇಶ ಮೈಲಾಪುರ, ರಾಮಪ್ಪ, ಪ್ರಮೀಳಾ ದೇವಿ, ಯಶೋದ, ಗೀತಾ ಇದ್ದರು.
ಅಗ್ನಿಶಾಮಕ ಠಾಣೆ: ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ನೂತನ ಠಾಣಾಧಿಕಾರಿ ದಯಾನಂದಗೌಡ ನೇತೃತ್ವದಲ್ಲಿ ವಿವಿಧ ನಮೂನೆಯ ಸಸಿಗಳನ್ನು ನೆಡಲಾಯಿತು. ಸಿಬ್ಬಂದಿ ಹಾಜರಿದ್ದರು.
ಸೋಮನಾಳ: ಸೋಮನಾಳ ಗ್ರಾಮದ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ವಿವಿಧ ಸಸಿಗಳನ್ನು ನೆಡಲಾಯಿತು ಆರೋಗ್ಯ ಸುರಕ್ಷಾಧಿಕಾರಿ ಗೀತಾ, ಸಮುದಾಯ ಆರೋಗ್ಯಾಧಿಕಾರಿ ಆನಂದ, ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜಸ್ವಾಮಿ, ಅಂಗನವಾಡಿ ಕಾರ್ಯಕರ್ತೆಯರಾದ ಲಕ್ಷ್ಮಿದೇವಿ, ಅಕ್ಕನಾಗಮ್ಮ, ಅಂಜನಮ್ಮ, ಆಶಾ ಕಾರ್ಯಕರ್ತೆಯರಾದ ಬಾಲಮ್ಮ, ರೂಪಾ, ಸುಧಾ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.
ಪುರಸಭೆ: ಪಟ್ಟಣದ ಪುರಸಭೆಯಿಂದ ಇಂದಿರಾ ಕ್ಯಾಂಟೀನ್ ಆವರಣದಲ್ಲಿ ವಿವಿಧ ನಮೂನೆಯ ಸಸಿಗಳನ್ನು ಅಧ್ಯಕ್ಷೆ ರೇಖಾ ರಾಜಶೇಖರ ಆನೇಹೊಸೂರು, ಮುಖ್ಯಾಧಿಕಾರಿ ಸುರೇಶ ನೇತೃತ್ವದಲ್ಲಿ ನೆಟ್ಟು ಪರಿಸರ ದಿನ ಆಚರಿಸಲಾಯಿತು. ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.