ಕಾರಟಗಿ: ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಯೋಗ ಪ್ರದರ್ಶನ ನಡೆಯಿತು.
ಪತಂಜಲಿ ಯೋಗ ಸಮಿತಿ, ಭಾರತ್ ಸ್ವಾಭಿಮಾನ ಟ್ರಸ್ಟ್, ಯುವ ಭಾರತ್, ಮಹಿಳಾ ಪತಂಜಲಿ ಯೋಗ ಸಮಿತಿ ಹಾಗೂ ಕಿಸಾನ್ ಸೇವಾ ಯೋಗ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಯೋಗ ಕಾರ್ಯಕ್ರಮ ನಡೆಯಿತು.
ತಹಶೀಲ್ದಾರ್ ಎಂ. ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ಋಷಿಮುನಿಗಳ ಕಾಲದಿಂದಲೂ ಯೋಗ ಪರಂಪರೆಯಾಗಿಯೇ ಅಸ್ತಿತ್ವದಲ್ಲಿದೆ. ಯೋಗಭ್ಯಾಸವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸದೃಢ ಆರೋಗ್ಯದಿಂದಿರಬೇಕು ಎಂಬುದು ಯೋಗ ದಿನಾಚರಣೆಯ ಆಶಯವಾಗಿದೆ’ ಎಂದರು.
ಇನ್‌ಸ್ಪೆಕ್ಟರ್ ಸುಧೀರಕುಮಾರ ಬೆಂಕಿ ಮಾತನಾಡಿ, ‘ಜಗತ್ತಿಗೆ ಯೋಗ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ’ ಎಂದರು.
ಸಿ.ಎಚ್.ಶರಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ‘ಚಂಚಲ ಮನಸ್ಸನ್ನು ಸ್ವಯಂ ನಿಯಂತ್ರಣಕ್ಕೆ ತರುವ ಶಕ್ತಿ ಯೋಗಕ್ಕಿದೆ. 13 ವರ್ಷಗಳಿಂದ ಸ್ಥಳೀಯ ಪತಂಜಲಿ ಯೋಗ ಸಮಿತಿಯಿಂದ ಉಚಿತ ಯೋಗ ಕಾರ್ಯಕ್ರಮ ಆಯೋಜಿಸಲಾಗಿದೆ. ಪಟ್ಟಣದ ಜನರು ಇದರ ಸದುಪಯೋಗಕ್ಕೆ ಮುಂದಾಗಬೇಕು’ ಎಂದರು. ಯೋಗಾಭ್ಯಾಸವನ್ನು ತಾಲ್ಲೂಕು ಪ್ರಭಾರಿ ಪ್ರಸಾದ ಚಿಟ್ಟೂರಿ ನಡೆಸಿಕೊಟ್ಟರು.
ಪುರಸಭೆ ಮುಖ್ಯಾಧಿಕಾರಿ ಸುರೇಶ, ಉದ್ಯಮಿ ಸಣ್ಣ ವೀರೇಶಪ್ಪ ಚಿನಿವಾಲ, ಎಪಿಎಂಸಿ ಮಾಜಿ ಅಧ್ಯಕ್ಷ ಶರಣಪ್ಪ ಬಾವಿ, ಗಾದಿಲಿಂಗಪ್ಪ ಚಳ್ಳೂರು, ಮಂಜುನಾಥ ಮಸ್ಕಿ, ಪತಂಜಲಿ ಜಿಲ್ಲಾ ಮಹಿಳಾ ಪ್ರಭಾರಿ ಸಿ.ಎಚ್.ಮೀನಾಕ್ಷಿ ಶರಣಪ್ಪ, ಮಹಿಳಾ ತಾಲ್ಲೂಕು ಪ್ರಭಾರಿ ಉಮಚಂದ್ರಮೌಳಿ ಅನೇಕ ಸಾಧಕರು ಉಪಸ್ಥಿತರಿದ್ದರು.
ಶರಣೇಗೌಡ, ನಾಗೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು.
ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್: ಪಟ್ಟಣದ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಯೋಗ ದಿನಾಚರಣೆ ನಿಮಿತ್ತ 600 ವಿದ್ಯಾರ್ಥಿಗಳಿಂದ ಏಕಕಾಲಕ್ಕೆ ಯೋಗಭ್ಯಾಸದ ಪ್ರದರ್ಶನ ನಡೆಯಿತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಲೀಲಾ ಮಲ್ಲಿಕಾರ್ಜುನ ಮಾತನಾಡಿ, ಯೋಗದ ಪ್ರಾಮುಖ್ಯತೆ ಹಾಗೂ ಅಷ್ಟಾಂಗ ಯೋಗ ಮಾಡುವುದರಿಂದ ಆಗುವ ಲಾಭದ ಕುರಿತು ವಿವರಿಸಿದರು.
ಶಾಲಾ ಆಡಳಿತ ಅಧಿಕಾರಿಗಳಾದ ಮಲ್ಲಿಕಾರ್ಜುನ ಬಿಚ್ಚಗಲ್ ಮಾತನಾಡಿದರು. ಶಾಲೆಯ ಯೋಗ ಗುರುಗಳಾದ ಬಸವರಾಜ್ ಯಾರಡೋಣ ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು. ಪ್ರಾಚಾರ್ಯ ಹನುಮಂತಪ್ಪ, ಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.
ಸಿದ್ದಾಪುರ: ತಾಲ್ಲೂಕಿನ ಸಿದ್ದಾಪುರದ ಕಸ್ತೂರಬಾ ಗಾಂಧಿ ಬಾಲಕಿಯರ ಉರ್ದು ವಸತಿ ಶಾಲೆಯಲ್ಲಿ ಮಕ್ಕಳಿಂದ ಯೋಗಭ್ಯಾಸ ನಡೆಯಿತು. ಸುಮಾ ಜೀರಗಾಳಿ ಯೋಗ ತರಬೇತಿ ನೀಡಿ, ವಿವಿಧ ಆಸನಗಳನ್ನು ಮಾಡಿಸಿದರು. ಮುಖ್ಯಶಿಕ್ಷಕ ಚಂದ್ರಶೇಖರ ಗಣವಾರಿ, ಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.
ಶಾಂತಿನಿಕೇತನ ಶಾಲೆ: ಪಟ್ಟಣದ ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ ಯೋಗ ದಿನಾಚರಣೆ ನಿಮಿತ್ತ ವಿದ್ಯಾರ್ಥಿಗಳು, ಶಿಕ್ಷಕರು, ಆಡಳಿತ ಮಂಡಳಿ ಮುಖ್ಯಸ್ಥರು ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು.
ಮುಖ್ಯಶಿಕ್ಷಕ ಮೃತ್ಯುಂಜಯ ಅಂಗಡಿ, ಸಂಸ್ಥೆಯ ಅಧ್ಯಕ್ಷ ಶರಣಪ್ಪ ಅಂಗಡಿ, ಆಡಳಿತಾಧಿಕಾರಿ ಶಿವಲೀಲಾ ಎಸ್. ಅಂಗಡಿ, ಶಿಕ್ಷಕರು, ಸಿಬ್ಬಂದಿ ಮತ್ತು ಮಕ್ಕಳು ಉಪಸ್ಥಿತರಿದ್ದರು. ಯೋಗ ಶಿಕ್ಷಕಿ ಪೂರ್ಣಿಮಾ ಮಾರ್ಗದರ್ಶನದಲ್ಲಿ ಮಕ್ಕಳು ಯೋಗಾಭ್ಯಾಸ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.