ADVERTISEMENT

ಅಂಬರೀಷ್‌ ಬಗ್ಗೆ ಹೇಳಿರುವುದೆಲ್ಲವೂ ಸತ್ಯ: ರಮ್ಯಾ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 10:42 IST
Last Updated 11 ಮಾರ್ಚ್ 2014, 10:42 IST

ಶ್ರೀರಂಗಪಟ್ಟಣ: ಅಂಬರೀಷ್‌ ದೇಹದಿಂದ 12 ಲೀಟರ್‌ ನೀರು ತೆಗೆದಿರುವುದು ಮತ್ತು ನನ್ನ ತಂದೆ ಆರ್‌.ಟಿ. ನಾರಾಯಣ್‌ ಹಾಗೂ ಎಸ್‌.ಎಂ. ಕೃಷ್ಣ ಅವರ ಜತೆ ಅಂಬರೀಷ್‌ ರಾಜಕೀಯ ಸಖ್ಯ ಹೊಂದಿದ್ದುದು ಎಲ್ಲವೂ ನಿಜ ಎಂದು ಸಂಸದೆ ರಮ್ಯಾ ಸಮರ್ಥಿಸಿಕೊಂಡರು.

ತಾಲ್ಲೂಕಿನ ಎಂ. ಶೆಟ್ಟಹಳ್ಳಿಯಲ್ಲಿರುವ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ ಅಧ್ಯಕ್ಷ ಎಂ.ಆರ್‌. ಯತಿರಾಜ್‌ ಅವರ ಮನೆಗೆ ಸೋಮವಾರ ಭೇಟಿ ನೀಡಿ ಚರ್ಚೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಅಂಬರೀಷ್‌ ಅವರ ದೇಹದಿಂದ ನೀರು ತೆಗೆದ ಬಗ್ಗೆ ವೈದ್ಯರು ಹೇಳಿದ್ದನ್ನೇ ನಾನು ಹೇಳಿದ್ದೇನೆ. ತಮ್ಮ ತಂದೆಯ ಜತೆಗೆ ಅವರು ಹೊಂದಿದ್ದ ಒಡನಾಟದ ಬಗ್ಗೆ ಮಾತನಾಡಿದ್ದೇನೆ. ಸತ್ಯ ಹೇಳುವುದು ತಪ್ಪಾ? ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

ಬಂಡೂರು ತಳಿಯ ಕುರಿ ಪಡೆಯಲು ನನ್ನಿಂದ ಕೆಲವರು ಶಿಫಾರಸು ಪತ್ರ ಪಡೆದುಕೊಂಡಿದ್ದಾರೆ. ತಮ್ಮ ಪೆಟ್ರೋಲ್‌ ಬಂಕ್‌ ಉದ್ಘಾಟನೆಗೂ ನನ್ನನ್ನು ಕರೆದೊಯ್ದಿದ್ದಾರೆ. ನನ್ನ ಹೆಸರು ಹೇಳಿಕೊಂಡು ಕೆಲಸ ಮಾಡಿಸಿಕೊಂಡವರು ನನ್ನ ವಿರುದ್ಧ ಟೀಕೆ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಶ್ರೀರಂಗಪಟ್ಟಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಎಲ್‌. ಲಿಂಗರಾಜು ಅವರಿಗೆ ಸಾಕಷ್ಟು ಶಿಫಾರಸು ಪತ್ರ ನೀಡಿದ್ದೇನೆ. ಅವರ ಮನೆಗೂ ಭೇಟಿ ನೀಡಿದ್ದೇನೆ. ಇಷ್ಟಾದರೂ ಚುನಾವಣೆಗೆ ಸ್ಪರ್ಧಿಸಲು ನನಗೆ ಟಿಕೆಟ್‌ ನೀಡಬಾರದು ಎಂದು ಅವರು ಹೇಳಿರುವುದು ನೋವುಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಟೀಕೆ ಮಾಡುತ್ತಿರುವವರ ಜತೆ ನಾನು ಮಾತನಾಡುವುದಿಲ್ಲ. ಪಕ್ಷದ ವರಿಷ್ಠರು ಮಂಡ್ಯ ನಗರ ಕುಡಿಯುವ ನೀರು ಯೋಜನೆಗೆ ಕೇಂದ್ರ ಸರ್ಕಾರದಿಂದ ₨ 156 ಕೋಟಿ ಯೋಜನೆ ಮಂಜೂರು ಮಾಡಿಸಿದ್ದೇನೆ. ಮಳವಳ್ಳಿ ಪಟ್ಟಣಕ್ಕೆ ₨ 56 ಕೋಟಿ ಕೊಡಿಸಿದ್ದೇನೆ. ಮಂಡ್ಯ ತಾಲ್ಲೂಕು ಮಂಗಲ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ₨1 ಲಕ್ಷ ಅನುದಾನ ನೀಡಿದ್ದೇನೆ. ಇದೆಲ್ಲವೂ ನಮ್ಮ ಪಕ್ಷದ ಮುಖಂಡರ ಕೋರಿಕೆ ಮೇರೆಗೆ ಮಾಡಿರುವ ಕೆಲಸ ಎಂದು ಹೇಳಿದರು.

‘ಒನ್‌ ಎಂಪಿ ಒನ್‌ ಐಡಿಯಾ’ ಕಾರ್ಯಕ್ರಮದ ವಿಫಲತೆಯಲ್ಲಿ ನನ್ನದೇನೂ ತಪ್ಪಿಲ್ಲ. ಇದಕ್ಕೆ 115 ಅರ್ಜಿಗಳು ಬಂದಿದ್ದವು. ಅದಕ್ಕಾಗಿ ₨ 5 ಲಕ್ಷ ಹಣವನ್ನು ಮೀಸಲಿಡಲಾಗಿತ್ತು. ಆಯ್ಕೆ ಮಾಡಬೇಕಾದ ಅಂದಿನ ಜಿಲ್ಲಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ ಎಂದು ಹೇಳಿದರು. ಯುವ ಕಾಂಗ್ರೆಸ್‌ ಅಧ್ಯಕ್ಷ ಎಂ.ಆರ್‌. ಯತಿರಾಜ್‌, ಗ್ರಾ.ಪಂ. ಅಧ್ಯಕ್ಷೆ ಶಾರದಾ, ಮುಖಂಡರಾದ ಕೋ.ಪು. ಗುಣಶೇಖರ್‌, ರವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.