ADVERTISEMENT

ಅಕ್ರಮ ಗಣಿಗಾರಿಕೆ: ಬಿರುಕು ಬಿಟ್ಟ ಮನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 6:52 IST
Last Updated 3 ಡಿಸೆಂಬರ್ 2013, 6:52 IST

ಪಾಂಡವಪುರ: ತಾಲ್ಲೂಕಿನ ಬೇಬಿಬೆಟ್ಟದ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದಾಗಿ ಕೂಗಳತೆ ದೂರದಲ್ಲಿರುವ ಬೋರೆ ಎಂಬ ರಾಗಿಮುದ್ದನಹಳ್ಳಿ ಹೊಸಬಡಾವಣೆಯ ನೂರಾರು ಮನೆಗಳು ಬಿರುಕುಬಿಟ್ಟಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಬೋರೆ ಗ್ರಾಮದ ಸುತ್ತ ಸುಮಾರು 40ಕ್ಕೂ ಹೆಚ್ಚು ಜಲ್ಲಿ ಕ್ರಷರ್‌ಗಳು ಕಾರ್ಯನಿರ್ವಹಿಸುತ್ತಿವೆ. ನಿತ್ಯ ಇಲ್ಲಿ  ಭಾರಿ ಸ್ಫೋಟಕ ಬಳಸಿ ಕಲ್ಲು ಸಿಡಿಸಲಾಗುತ್ತದೆ. ಪರಿಣಾಂ ನೂರಾರು ಮನೆಗಳ ಗೋಡೆಗಳು ಬಿರುಕುಬಿಟ್ಟಿವೆ. 

ಬಿರುಕು ಬಿಟ್ಟಿರುವ ಮನೆಗಳಲ್ಲಿ ವಾಸಿಸುವಂತ ಜನರು ಯಾವಾಗ ಬೀಳುವುದೋ ಎಂಬ ಆತಂಕದಲ್ಲಿ ದಿನಗಳನ್ನು ಕಳೆಯುವಂತಾಗಿದೆ.
ಬೋರೆಗೌಡ, ಜವರೇಗೌಡ, ಕುಮಾರ, ಟೈಲರ್ ಜಗದೀಶ್‌ ಅವರ ಮನೆ ಮತ್ತು ಛಾವಣಿ ಅನಾಹುತಕ್ಕೆ ಈಡಾಗಿವೆ.  ಗಣಿ ಧೂಳಿನಿಂದ ಗ್ರಾಮದಲ್ಲಿ ಸಾಕಷ್ಟು ಜನರು ಅಸ್ತಮಾ, ಅಲರ್ಜಿ, ಕೆಮ್ಮು ಮುಂತಾದ ಕಾಯಿಲೆಗಳಿಂದ ನರಳುತ್ತಿದ್ದಾರೆ. 3 ವರ್ಷಗಳ ಹಿಂದೆ ತಮಗೆ ಬಂದ ’ಡಸ್ಟ್ ಅಲರ್ಜಿ’ಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಚಾಮೇಗೌಡ.

ಕೆಲ ದಿನಗಳ ಹಿಂದೆಯೇ ಇಲ್ಲಿ ಗಣಿಗಾರಿಕೆ ನಡೆಸುವುದಕ್ಕೆ ಜಿಲ್ಲಾಡಳಿತ ನಿಷೇದ ಹೇರಿದ್ದರೂ, ರಾತ್ರಿ ವೇಳೆ ಇಂದಿಗೂ ರಿಗ್‌ಬೋರ್‌ ಬ್ಲಾಸ್ಟ್‌ ಮಾಡುವ ಕಾರ್ಯ ನಿರಾಂತಕವಾಗಿ ನಡೆದಿದೆ.

ಕೊಟ್ಟಿಗೆಯಲ್ಲಿ ಕಟ್ಟಿದ ದನಕರುಗಳು ಹಗ್ಗ ಕಿತ್ತು ಬೀದಿಗೆ ಓಡುತ್ತವೆ ಎಂದು ಎಂ.ವಿ.ಪುಟ್ಟೇಗೌಡ ಹೇಳಿದರೆ, ರಾತ್ರಿ ವೇಳೆ ಸಿಹಿ ನಿದ್ರೆಗೆ ಜಾರಿರುವ ಮಕ್ಕಳು ಸ್ಫೋಟದ ಸದ್ದಿಗೆ  ಬೆಚ್ಚಿಬೀಳುತ್ತದೆ, ರಚ್ಚೆ ಹಿಡಿದರಂತೂ ಅವು ಮುಂಜಾನೆ ತನಕವೂ ಮಲಗುವುದಿಲ್ಲ ಎಂದು ಸುಲ್ತಾನ ಮತ್ತು ಪಾರ್ವತಮ್ಮ ಹೇಳುತ್ತಾರೆ.

ಗಣಿಗಾರಿಕೆಯ ಬಿಸಿ ಕೇವಲ ಮನುಷ್ಯರಿಗಷ್ಟೇ ಅಲ್ಲ. ಪ್ರಾಣಿ ಪಕ್ಷಿಗಳಿಗೂ ತಗುಲಿದ್ದು, ಅವುಗಳ ಆಹಾರಕ್ಕೆ ಕುತ್ತುಂಟಾಗಿದೆ. ಗಣಿ ಧೂಳು ಹತ್ತಾರು ಕಿ.ಮೀ. ವ್ಯಾಪಿಸಿರುವುದರಿಂದ ಜಾನುವಾರುಗಳ ಹುಲ್ಲು ಮತ್ತು ಗಿಡ ಮರಗಳು ಧೂಳಿನಿಂದ ಆವೃತವಾಗಿವೆ. ಹೀಗಾಗಿ ಅವುಗಳಿಗೂ ಶುದ್ಧ ಆಹಾರ ಸಿಗದಂತಾಗಿದೆ.

ಬೇಬಿಮಠದ ಶ್ರೀ ರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಸದಾಶಿವಸ್ವಾಮಿಗಳು ಗಣಿಕಾರಿಕೆಯನ್ನು ನಿಲ್ಲಿಸುವಂತೆ ಕಳೆದ ವರ್ಷ ಬೀದಿಗಿಳಿದು ಹೋರಾಟ ಮಾಡಿದ್ದರು. ನಿಲುಗಡೆ ಕ್ರಮಗಳನ್ನೂ ಕೈಗೊಳ್ಳಲಾಗಿತ್ತು. ಆದರೆ, ಗಣಿಗಾರಿಕೆ ಮಾತ್ರ ನಿಂತಿಲ್ಲ.
ಮಠದ ಗೋಡೆಗಳೂ ಸಹ ಬಿರುಕುಬಿಟ್ಟಿದ್ದು, ತಕ್ಷಣ ಗಣಿಗಾರಿಕೆ ನಿಲ್ಲಿಸಬೇಕು. ಇಲ್ಲದಿದ್ದರೆ ಇಷ್ಟರಲ್ಲಿಯೇ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ. 

ಗಣಿಗಾರಿಕೆ ನಿಲ್ಲಿಸುವಂತೆ ತಾಲ್ಲೂಕು ಆಡಳಿತಕ್ಕೆ ಮತ್ತು ಜಿಲ್ಲಾಡಳಿತಕ್ಕೆ ನೂರಾರು ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.