ADVERTISEMENT

ಅಧಿಕಾರಿಗಳು ಗೈರು; ನೋಟಿಸ್ ನೀಡಲು ಸೂಚನೆ

ಮಳವಳ್ಳಿ: ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 6:46 IST
Last Updated 21 ಜೂನ್ 2013, 6:46 IST

ಮಳವಳ್ಳಿ: ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಅಬಕಾರಿ ಇಲಾಖೆ ಹಾಗೂ ರಾಜ್ಯ ರಸ್ತೆ ಸಾರಿಗೆ ಅಧಿಕಾರಿ ಸಭೆಗೆ ಹಾಜರಾಗದೆ ಅವರ ಬದಲು ಬೇರೆ ನೌಕರರು ಹಾಜರಾಗಿದ್ದರು. ಕೆಲವು ಮಾಹಿತಿ ಕೇಳಿದಾಗ ನಮ್ಮ ಬಳಿ ಇಲ್ಲ ಎಂದು ಈ ಅಧಿಕಾರಿಗಳು ಪ್ರತಿಕ್ರಿಯಿಸಿದರು. ಸಭೆಗೆ ಏಕೆ ಬಂದೀರಿ ಶಾಸಕರು ತರಾಟೆಗೆ ತೆಗೆದುಕೊಂಡರು. ಸಂಬಂಧ ಪಟ್ಟ ಅಧಿಕಾರಿಗೆ ಕೂಡಲೇ ನೋಟಿಸ್ ನೀಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.

ನಂತರ ಇಲಾಖಾವಾರು ಪ್ರಗತಿ ಬಗ್ಗೆ ಚರ್ಚೆ ನಡೆದಾಗ ಬಹುತೇಕ ಇಲಾಖೆ ಅಧಿಕಾರಿಗಳು ಸಿಬ್ಬಂದಿ, ಕಟ್ಟಡ ಹಾಗೂ ವಾಹನಗಳ ಕೊರತೆಯ ಬಗ್ಗೆ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು  ಇಲಾಖಾವಾರು ಮಾಹಿತಿ ನೀಡಿ ಇದರ ಬಗ್ಗೆ ಸಂಬಂಧಿಸಿದ ಮೇಲಿನ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿರುವ ಮೊರಾರ್ಜಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ ಆಹಾರ ಪೂರೈಕೆಯಾಗದೆ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ, ಶಾಲೆ ದುಃಸ್ಥಿತಿಯ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪ್ರಾಂಶುಪಾಲರು ಕಳೆದ ಸಾಲಿನಲ್ಲಿ ಟೆಂಡರ್ ಪಡೆದಿದ್ದ ಗುತ್ತಿಗೆದಾರರ ಅವಧಿ ಮುಗಿದಿದೆ. ಮೇಲಧಿಕಾರಿಗಳು ಜನತಾ ಬಜಾರ್‌ನಲ್ಲಿ ಕೊಳ್ಳಲು ಸೂಚಿಸಿದ್ದರು. ಜನತಾ ಬಜಾರ್‌ನವರು ನೀಡದಿದ್ದಾಗ ವಾರ್ಡನ್ ಅವರು ತಮ್ಮ ಹಣದಿಂದಲೇ ಆಹಾರ ಪದಾರ್ಥಗಳನ್ನು ಖರೀದಿಸಿ ಹಾಸ್ಟೆಲ್ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ತಾಲ್ಲೂಕಿನ ಬಂಡೂರು ಕುರಿ ಅಭಿವೃದ್ಧಿ ತಳಿ ಕೇಂದ್ರ ಉನ್ನತೀಕರಣ, ವಿಶ್ವವಿದ್ಯಾನಿಲಯ ಸ್ಥಾಪನೆಗೆ  ಒತ್ತುವರಿ ಜಾಗವನ್ನು ಕಂದಾಯ, ಅರಣ್ಯ ಇಲಾಖೆಯವರು ಜಂಟಿ ಕಾರ್ಯಚರಣೆ ಮೂಲಕ ಸಮೀಕ್ಷೆ ನಡೆಸಿ ಒತ್ತುವರಿ ತೆರವುಗೊಳಿಸಬೇಕು ಎಂದು ತಹಶೀಲ್ದಾರ್‌ಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಸ್. ಪ್ರಕಾಶ್, ಉಪಾಧ್ಯಕ್ಷೆ ಚಂದ್ರಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಚಿಕ್ಕಲಿಂಗಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಯಲಕ್ಷ್ಮಮ್ಮ,ಆರ್.ಎನ್. ವಿಶ್ವಾಸ್, ತಹಶೀಲ್ದಾರ್ ಎಂ.ಆರ್ .ರಾಜೇಶ್, ಡಿವೈಎಸ್ಪಿ ಜಿ.ಕೆ. ಚಿಕ್ಕಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.