ADVERTISEMENT

ಅಭ್ಯರ್ಥಿಗಳ ಚುನಾವಣಾ ಖರ್ಚಿನ ಮ್ಯಾಜಿಕ್ ಸಂಖ್ಯೆ...!

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 6:42 IST
Last Updated 21 ಜೂನ್ 2013, 6:42 IST

ಮಂಡ್ಯ:  ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕೋಟ್ಯಂತರ ರೂಪಾಯಿ ಬೇಕು ಎನ್ನುವುದು ಸಾರ್ವಜನಿಕ ಅಭಿಪ್ರಾಯ. ಆದರೆ, ರೂ8 ರಿಂದ 12 ಲಕ್ಷ  ಖರ್ಚು ಮಾಡಿದರೆ ಗೆಲುವು ಸಾಧಿಸಬಹುದು ಎನ್ನುವುದನ್ನು ಜಿಲ್ಲೆಯ ಅಭ್ಯರ್ಥಿಗಳು ತೋರಿಸಿದ್ದಾರೆ.

ನಿಮಗೆ ಇದು ಅಚ್ಚರಿ ಎನಿಸಿದರೂ ಸತ್ಯ. ಏಕೆಂದರೆ ಗೆಲುವು ಸಾಧಿಸಿರುವ ಹಾಗೂ ಸೋತ ಪ್ರಮುಖ ಅಭ್ಯರ್ಥಿಗಳು ಆಯೋಗ ವಿಧಿಸಿರುವ ರೂ16 ಲಕ್ಷಕ್ಕಿಂತ ಕಡಿಮೆ ಖರ್ಚು ತೋರಿಸಿದ್ದಾರೆ. ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಏಕೆಂದರೆ ಈ ವೆಚ್ಚದ ಲೆಕ್ಕವನ್ನು ಚುನಾವಣಾ ಆಯೋಗವೂ ಒಪ್ಪಿಕೊಂಡಿದೆ.

ಆಯೋಗ ವಿಧಿಸಿರುವ ಖರ್ಚಿನ ವೆಚ್ಚದ ಮಿತಿಯನ್ನು ರೂ16 ಲಕ್ಷದಿಂದ 40ಲಕ್ಷಕ್ಕೆ ಏರಿಸಬೇಕು ಎಂದಿದ್ದ ಅಭ್ಯರ್ಥಿಗಳೂ ರೂ10 ಲಕ್ಷ ಗಿಂತ ಕಡಿಮೆ ತೋರಿಸಿದ್ದಾರೆ. ಪಕ್ಷೇತರರಾಗಿರುವ ಬಹಳಷ್ಟು ಅಭ್ಯರ್ಥಿಗಳು ಲಕ್ಷದ ಗಡಿಯನ್ನೂ ದಾಟಿಲ್ಲ. 11 ಅಭ್ಯರ್ಥಿಗಳು ಇನ್ನೂ ವೆಚ್ಚ ಸಲ್ಲಿಸಬೇಕಿದೆ. ಖರ್ಚಿನ ಶೇ 85 ಭಾಗವನ್ನು ವಾಹನಗಳಗಾಗಿ ಎಂದು ತೋರಿಸಲಾಗಿದೆ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಪೈಕಿ ರೂ12,83,726 ಖರ್ಚು ಮಾಡಿರುವ ಅಂಬರೀಷ್ ಅವರು ಅತೀ ಹೆಚ್ಚು ಖರ್ಚು ಮಾಡಿದ್ದರೆ, ರೂ6,46,037 ಖರ್ಚು ಮಾಡಿರುವ ಪಿ.ಎಂ. ನರೇಂದ್ರಸ್ವಾಮಿ ಅವರು ಅತೀ ಕಡಿವೆು ಖರ್ಚು ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಮಂಡ್ಯ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಕಾಂಗ್ರೆಸ್‌ನ ಎಂ.ಎಚ್. ಅಂಬರೀಷ್ ಅವರು 12,83,726 ರೂ ಖರ್ಚು ಮಾಡಿದ್ದರೆ, ಜೆಡಿಎಸ್‌ನ ಎಂ. ಶ್ರೀನಿವಾಸ್ 10,93,293 ರೂ, ಬಿಜೆಪಿಯ ಟಿ.ಎಲ್. ರವಿಶಂಕರ್ ಅವರು 5,73,752 ರೂ ಖರ್ಚು ಮಾಡಿದ್ದಾರೆ.

ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ನ ಪಿ.ಎಂ. ನರೇಂದ್ರಸ್ವಾಮಿ ಅವರು 6,46,037 ರೂಪಾಯಿ ಖರ್ಚು ಮಾಡಿದ್ದರೆ, ಜೆಡಿಎಸ್‌ನ ಡಾ.ಕೆ. ಅನ್ನದಾನಿ ಅವರು ರೂ8,97,875 ಬಿಜೆಪಿ ಅಭ್ಯರ್ಥಿ ಡಾ.ಕುಮಾರಸ್ವಾಮಿ ಅವರು ರೂ5,47,500  ಬಿಎಸ್ಪಿಯ ಕೃಷ್ಣಮೂರ್ತಿ ಅವರು ರೂ5,09,464  ಕೆಜೆಪಿಯ ಮುನಿರಾಜು ಅವರು ರೂ7,42,250  ಜೆಡಿಯುನ        ಬಿ. ಸೋಮಶೇಖರ್ ಅವರು ರೂ6,88,710 ಖರ್ಚು ಮಾಡಿದ್ದಾರೆ.

ಮದ್ದೂರು ಕ್ಷೇತ್ರದಿಂದ ಗೆಲುವು ಸಾಧಿಸಿರುವ ಜೆಡಿಎಸ್‌ನ ಡಿ.ಸಿ. ತಮ್ಮಣ್ಣ ಅವರು ರೂ10,05,290 ಖರ್ಚು ಮಾಡಿದ್ದರೆ, ಕಾಂಗ್ರೆಸ್‌ನ ಮಧು ಮಾದೇಗೌಡ ಅವರು ರೂ8,96,163  ಪಕ್ಷೇತರ ಅಭ್ಯರ್ಥಿ ಕಲ್ಪನಾ ಸಿದ್ದರಾಜು ಅವರು 5,33,123 ರೂ ಖರ್ಚು ಮಾಡಿದ್ದಾರೆ.

ಮೇಲುಕೋಟೆ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಸರ್ವೋದಯ ಕರ್ನಾಟಕ ಪಕ್ಷದ ಕೆ.ಎಸ್. ಪುಟ್ಟಣ್ಣಯ್ಯ ಅವರು, ರೂ 8,95,297 ಖರ್ಚು ಮಾಡಿದ್ದರೆ, ಜೆಡಿಎಸ್‌ನ ಸಿ.ಎಸ್. ಪುಟ್ಟರಾಜು ಅವರು ರೂ9,33,869 ಕಾಂಗ್ರೆಸ್‌ನ ಎಲ್.ಡಿ. ರವಿ ಅವರು ರೂ 7,97,200  ಹಾಗೂ ಬಿಜೆಪಿಯ ಜಿ.ಎಂ. ರವೀಂದ್ರ ಅವರು ರೂ 9,67,600  ಖರ್ಚು ಮಾಡಿದ್ದಾರೆ.

ಶ್ರೀರಂಗಪಟ್ಟಣ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಜೆಡಿಎಸ್‌ನ ರಮೇಶ್‌ಬಾಬು ಬಂಡಿಸಿದ್ದೇಗೌಡ ಅವರು 10,30,952 ರೂ ಖರ್ಚು ಮಾಡಿದ್ದರೆ, ಕಾಂಗ್ರೆಸ್‌ನ ಎಸ್.ಎಲ್. ಲಿಂಗರಾಜು ಅವರು ರೂ14,49,450  ಸರ್ವೋದಯ ಕರ್ನಾಟಕ ಪಕ್ಷದ ಕೆ.ಎಸ್. ನಂಜುಂಡೇಗೌಡ ಅವರು ರೂ10,41,248  ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ರೂ 12,48,029 ಖರ್ಚು ಮಾಡಿದ್ದಾರೆ.

ನಾಗಮಂಗಲ ಕ್ಷೇತ್ರದಿಂದ ಗೆಲುವು ಸಾಧಿಸಿರುವ                ಎನ್. ಚಲುವರಾಯಸ್ವಾಮಿ ಅವರು ರೂ 7,96,883 ಖರ್ಚು ಮಾಡಿದ್ದರೆ, ಕಾಂಗ್ರೆಸ್‌ನ ಕೆ. ಸುರೇಶ್‌ಗೌಡ ಅವರು ರೂ 7,77,656  ಹಾಗೂ ಬಿಜೆಪಿಯ ಡಾ.ಪಾರ್ಥಸಾರಥಿ ಅವರು ರೂ6,80,350  ಖರ್ಚು ಮಾಡಿದ್ದಾರೆ.

ಕೃಷ್ಣರಾಜಪೇಟೆ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಜೆಡಿಎಸ್‌ನ ಕೆ.ಸಿ. ನಾರಾಯಣಗೌಡ ಅವರು ರೂ 7,31,154 ಖರ್ಚು ಮಾಡಿದ್ದರೆ, ಕಾಂಗ್ರೆಸ್‌ನ ಕೆ.ಬಿ. ಚಂದ್ರಶೇಖರ್ ಅವರು  ರೂ 7,89,478  ಹಾಗೂ ಜೆಡಿಎಸ್ ಬಂಡಾಯ ಅಭ್ಯರ್ಥಿ ರೂ 7,41,781 ಖರ್ಚು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.