ADVERTISEMENT

ಅಭ್ಯರ್ಥಿಗಳ ಸಂವಾದ: ಮತದಾರರಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 6:50 IST
Last Updated 26 ಏಪ್ರಿಲ್ 2013, 6:50 IST

ಮಂಡ್ಯ: ಮಂಡ್ಯ ವಿಧಾನಸಭಾ ಅಭ್ಯರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಅಭ್ಯರ್ಥಿಗಳಿಂದ ಸಮಸ್ಯೆಗಳಿಗೆ ಉತ್ತರ ಪಡೆಯುತ್ತೇನೆ ಎಂದು ಬಂದಿದ್ದವರಿಗೆ ನಿರಾಸೆ ಕಾದಿತ್ತು. ಜಾರಿಕೆಯ ಉತ್ತರಗಳೇ ಕೇಳಿ ಬಂದವು.

ಕರ್ನಾಟಕ ಜನಶಕ್ತಿ ಹಾಗೂ ನಗರ ಸ್ಲಂ ನಿವಾಸಿಗಳ ಒಕ್ಕೂಟದ ವತಿಯಿಂದ ಗುರುವಾರ ನಗರದಲ್ಲಿ ಹಮ್ಮಿಕೊಂದ್ದ ಸಂವಾದದಲ್ಲಿ ಕಾವೇರಿ ವಿವಾದ, ಸಕ್ಕರೆ ಕಾರ್ಖಾನೆ ಪುನರುಜ್ಜೀವನ ಸೇರಿದಂತೆ ಎಲ್ಲ ಅಭ್ಯರ್ಥಿಗಳಿಗೆ ಕೇಳಿದ್ದ ಲಿಖಿತ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ದೊರೆಯಲಿಲ್ಲ. ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರೇ ಹೊರತು, ಹೇಗೆ ಪರಿಹರಿಸುತ್ತೇವೆ ಎಂಬ ಸ್ಪಷ್ಟ ಚಿತ್ರಣ ನೀಡದ್ದು ಭಾಗವಹಿಸಿದ್ದವರಿಗೆ ಬೇಸರ ತರಿಸಿತು.

ಜೆಡಿಎಸ್ ಅಭ್ಯರ್ಥಿ ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಕಾರ್ಖಾನೆ ಸ್ಥಾಪನೆಗೆ ಹೆಚ್ಚು ಒತ್ತು ನೀಡಲಾಗುವುದು. ಕಾವೇರಿ ಅನ್ಯಾಯ ಸರಿಪಡಿಸಲು ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಕೆಜೆಪಿ ಅಭ್ಯರ್ಥಿ ಡಿ.ವೆಂಕಟೇಶ್‌ಆಚಾರ್ ಮಾತನಾಡಿ, ರಾಜಕಾರಣಿಗಳ ನಿರಾಸಕ್ತಿಯೇ ಹಿನ್ನಡೆಗೆ ಕಾರಣ. ಕೈಗಾರಿಕಾ ವಸಾಹತು ಆರಂಭಿಸುತ್ತೇನೆ ಎಂದರು.

ಎಸ್‌ಡಿಪಿಐ ಅಭ್ಯರ್ಥಿ ಮಹ್ಮದ್ ತಾಹೀರ್ ಮಾತನಾಡಿ, ಅಧಿಕಾರ ಜನಸಾಮಾನ್ಯರಿಗೆ ದೊರೆಯುವಂತಾಗಬೇಕು ಎಂದು ಹೇಳಿದರು. ಪಕ್ಷೇತರ ಅಭ್ಯರ್ಥಿ ಹಲ್ಲೆಗೆರೆ ಶಿವರಾಮು ಮಾತನಾಡಿ, ವರ್ತುಲ ರಸ್ತೆ ನಿರ್ಮಾಣ, ಗ್ರಾಮೀಣ ಪ್ರದೇಶ ಸ್ವಚ್ಛತೆಗೆ ಆದ್ಯತೆ ನೀಡುವುದಾಗಿ ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಟಿ.ಎಲ್. ರವಿಶಂಕರ್ ಮಾತನಾಡಿ, ಸುಂದರ ನಗರ ನಿರ್ಮಾಣ, ಕೃಷಿ ಆಧಾರಿತ ಕೈಗಾರಿಕೆಗಳಿಗೆ ಒತ್ತು ನೀಡುವುದಾಗಿ ಹೇಳಿದರು.
ಜೆಡಿಎಸ್ ಬಂಡಾಯ ಅಭ್ಯರ್ಥಿ ಅಶೋಕ್ ಜಯರಾಂ, ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆ. ಜನರು ದುಡಿಯುವುದಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸುತ್ತೇನೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಅಂಬರೀಷ್ ಸೇರಿದಂತೆ ಕೆಲವು ಅಭ್ಯರ್ಥಿಗಳು ಆಗಮಿಸಿರಲಿಲ್ಲ. ಹಿರಿಯ ಸಾಹಿತಿ ಪ್ರೊ.ಎಚ್.ಎಲ್. ಕೇಶವಮೂರ್ತಿ, ವಕೀಲ ಬಿ.ಟಿ. ವಿಶ್ವನಾಥ್, ಒಕ್ಕೂಟದ ಮುಖಂಡರಾದ ಡಾ.ವಾಸು, ಲಕ್ಷ್ಮಣ ಚೀರನಹಳ್ಳಿ, ನಾಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.