ADVERTISEMENT

ಆಮಿಷಕ್ಕೆ ಒಳಗಾಗದೆ ಮತದಾನ ಮಾಡಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2016, 8:37 IST
Last Updated 26 ಜನವರಿ 2016, 8:37 IST
ಮಂಡ್ಯದಲ್ಲಿ ಸೋಮವಾರ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮದಲ್ಲಿ ಮತದಾರರು ಪ್ರತಿಜ್ಞಾವಿಧಿ ಸ್ವೀಕರಿಸಿದರು
ಮಂಡ್ಯದಲ್ಲಿ ಸೋಮವಾರ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮದಲ್ಲಿ ಮತದಾರರು ಪ್ರತಿಜ್ಞಾವಿಧಿ ಸ್ವೀಕರಿಸಿದರು   

ಮಂಡ್ಯ:  ಪ್ರಜಾಪ್ರಭುತ್ವದ ಆಶಯ ರಕ್ಷಿಸಲು ಯುವಜನರು ಆಮಿಷಕ್ಕೆ ಒಳಗಾಗದೇ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್ ಹೇಳಿದರು.

ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ (ಸ್ವಾಯತ್ತ)  ಸೋಮವಾರ ಜಿಲ್ಲಾಡಳಿತ ಆಯೋಜಿಸಿದ್ದ ‘ರಾಷ್ಟ್ರೀಯ ಮತದಾರರ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿ ಮತದಾರರ ತೀರ್ಮಾನ ಅವಲಂಭಿಸಿರುತ್ತದೆ. ಚುನಾವಣೆ ಸಂದರ್ಭದಲ್ಲಿ ಎಚ್ಚರಿಕೆಯಿಂದ ಮತ ಚಲಾಯಿಸಬೇಕು. ಗ್ರಾ.ಪಂ. ಚುನಾವಣೆ ಹೊರತುಪಡಿಸಿ, ಉಳಿದ ಚುನಾವಣೆಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮತದಾನ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿ ಚುನಾವಣೆಯಲ್ಲೂ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ. ಸರ್ಕಾರಿ ರಜೆ ಇದ್ದರೂ  ಮತದಾನ ಮಾಡದೆ ತಮ್ಮ ಜವಾಬ್ದಾರಿ ಮರೆಯುತ್ತಿದ್ದಾರೆ ಎಂದರು.

ಮುಂಬರುವ ಚುನಾವಣೆಗಳಲ್ಲಿ ಶೇ 100 ರಷ್ಟು ಮತದಾನ ನಡೆಯಬೇಕು. 18 ವರ್ಷ ತುಂಬಿದ ಪ್ರತಿಯೊಬ್ಬರು ಚುನಾವಣಾ ಗುರುತಿನ ಚೀಟಿ ಪಡೆದುಕೊಳ್ಳಬೇಕು. ಭ್ರಷ್ಟಾಚಾರ ಮುಕ್ತ ಮತದಾನ ಮಾಡಬೇಕು. ನೋಟಾ ಆಯ್ಕೆ ಇದ್ದು, ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಜತೆಗೆ ಜನರಲ್ಲಿ ಆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್‌ಕುಮಾರ್ ರೆಡ್ಡಿ ಅವರು ಯುವ ಮತದಾರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸ್ಪರ್ಧೆ ವಿಜೇತರು:  ಪ್ರಬಂಧ ಸ್ಪರ್ಧೆಯಲ್ಲಿ ಸರ್ಕಾರಿ ಮಹಿಳಾ ಕಾಲೇಜಿನ ಕೆ.ವಿ. ಹರ್ಷಿತಾ (ಪ್ರಥಮ), ಏಕಾಂತಶ್ರೀ (ದ್ವಿತೀಯ), ಲೋಕಶ್ರೀ (ತೃತೀಯ) ಹಾಗೂ ಭಾಷಣ ಸ್ಪರ್ಧೆಯಲ್ಲಿ ಪಿಇಎಸ್ ಕಾಲೇಜಿನ ಡಿ. ಶರತ್ (ಪ್ರಥಮ), ಸರ್ಕಾರಿ ಮಹಿಳಾ ಕಾಲೇಜಿನ ಎಂ. ಹರ್ಷಿತಾ (ದ್ವಿತೀಯ), ಭವ್ಯ (ತೃತೀಯ) ಬಹುಮಾನ ಪಡೆದರು.
ಮಂಡ್ಯ ಉಪ ವಿಭಾಗಾಧಿಕಾರಿ ಅರುಳ್‌ಕುಮಾರ್, ತಹಶೀಲ್ದಾರ್ ಮಾರುತಿ ಪ್ರಸನ್ನ, ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎಂ. ಶ್ರೀಕಂಠಯ್ಯ, ಪ್ರಾಂಶುಪಾಲ ಚಿಕ್ಕಮಾದನಾಯ್ಕ  ಉಪಸ್ಥಿತರಿದ್ದರು.

ರೈತ ಆತ್ಮಹತ್ಯೆ: ಪಿರಿಯಪಟ್ಟಣ: ಸಾಲದ ಬಾಧೆ ಹಾಗೂ ಬೆಳೆ ನಷ್ಟದಿಂದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಗಂಗೇಗೌಡನ ಕೊಪ್ಪಲಿನ  ಭಾನುವಾರ ನಡೆದಿದೆ. ಗ್ರಾಮದ ಬುಗ್ಗೆಗೌಡ (58) ಆತ್ಮಹತ್ಯೆ ಮಾಡಿಕೊಂಡಿರುವ ರೈತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.