ADVERTISEMENT

ಆರ್‌ಟಿಐ ಕಾರ್ಯಕರ್ತನ ವಿರುದ್ಧ ಎಸ್ಪಿಗೆ ದೂರು: ಸಂಸದ ಸಿ.ಎಸ್‌.ಪುಟ್ಟರಾಜು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2017, 10:27 IST
Last Updated 25 ಡಿಸೆಂಬರ್ 2017, 10:27 IST
ಆರ್‌ಟಿಐ ಕಾರ್ಯಕರ್ತನ ವಿರುದ್ಧ ಎಸ್ಪಿಗೆ ದೂರು: ಸಂಸದ ಸಿ.ಎಸ್‌.ಪುಟ್ಟರಾಜು
ಆರ್‌ಟಿಐ ಕಾರ್ಯಕರ್ತನ ವಿರುದ್ಧ ಎಸ್ಪಿಗೆ ದೂರು: ಸಂಸದ ಸಿ.ಎಸ್‌.ಪುಟ್ಟರಾಜು   

ಮಂಡ್ಯ: ‘ಕಾಂಗ್ರೆಸ್‌ ಸರ್ಕಾರದ ಏಜೆಂಟ್‌ ಆಗಿ ನನ್ನ ವಿರುದ್ಧ ಇಲ್ಲಸಲ್ಲದ ದೂರು ನೀಡುತ್ತಿರುವ ಆರ್‌.ಟಿ.ಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ವಿರುದ್ಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ಸಲ್ಲಿಸುತ್ತೇನೆ’ ಎಂದು ಸಂಸದ ಸಿ.ಎಸ್‌.ಪುಟ್ಟರಾಜು ಹೇಳಿದರು.

‘ಕಲ್ಲು ಗಣಿಗಾರಿಕೆ ಸೇರಿ ಹಲವು ಪ್ರಕರಣಗಳಲ್ಲಿ ನನ್ನ ವಿರುದ್ಧ ಸಲ್ಲದ ದೂರು ನೀಡಿ ಹೆಸರಿಗೆ ಮಸಿ ಬಳಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಇದರ ಹಿಂದೆ ಕಾಂಗ್ರೆಸ್‌ ಮುಖಂಡರ ಕೈವಾಡ ಇರುವುದು ಗೊತ್ತಾಗಿದೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇನೆ. ಲೇವಾದೇವಿ ವ್ಯವಹಾರ ಮಾಡುತ್ತಿರುವ ರವೀಂದ್ರ ಆರ್‌ಟಿಐ ಕಾರ್ಯಕರ್ತನ ಸೋಗಿನಲ್ಲಿ ಅಕ್ರಮವಾಗಿ ಅಪಾರ ಹಣ ಸಂಪಾದನೆ ಮಾಡಿದ್ದಾರೆ. ಫೋನ್‌ ಕರೆಯಲ್ಲಿ ಅವರ ಅಕ್ರಮಗಳು ದಾಖಲಾಗಿವೆ. ಅವುಗಳ ವಿವರ ಪಡೆದು ಅಕ್ರಮಗಳನ್ನು ಶೀಘ್ರ ಬಹಿರಂಗ ಮಾಡಲಾಗುವುದು’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯ ಸರ್ಕಾರ ಜೆಡಿಎಸ್‌ ಅಲೆ ತಡೆಯಲು ತನಿಖಾ ಅಸ್ತ್ರ ಪ್ರಯೋಗ ಮಾಡುತ್ತಿದೆ. ಮೈಸೂರಿನಲ್ಲಿ ಜಿ.ಟಿ.ದೇವೇಗೌಡ ಅವರ ವಿರುದ್ಧ ತನಿಖೆಗೆ ಆದೇಶಿಸಿದೆ. ಕಲ್ಲು ಗಣಿಗಾರಿಕೆ ಪ್ರಕರಣದಲ್ಲಿ ನನ್ನ ವಿರುದ್ಧ ತನಿಖೆಗೆ ಆದೇಶ ನೀಡಲಾಗಿದೆ. ರವೀಂದ್ರ ಅವರಂತಹ ಏಜೆಂಟರ ಮೂಲಕ ರಾಜ್ಯ ಸರ್ಕಾರ ಜೆಡಿಎಸ್‌ ಪಕ್ಷವನ್ನು ಹಣಿಯಲು ಯತ್ನಿಸುತ್ತಿದೆ. ಸರ್ಕಾರ ಏನೇ ಪಯತ್ನಪಟ್ಟರೂ ಜೆಡಿಎಸ್‌ನ ಅಲೆಯನ್ನು ತಡೆಯಲು ಸಾಧ್ಯವಿಲ್ಲ. ಎಲ್ಲಾ ತನಿಖೆಗೂ ನಾವು ಸಿದ್ಧರಿದ್ದೇವೆ’ ಎಂದು ಹೇಳಿದರು.

ADVERTISEMENT

'ಲಾರಿ ಡ್ರೈವರ್‌ ಆಗಿದ್ದ ಪುಟ್ಟರಾಜು ಈಗ ಸಾವಿರ ಕೋಟಿಯ ಒಡೆಯ'
‘ಸಂಸದ ಪುಟ್ಟರಾಜು ನನ್ನ ವಿರುದ್ಧ ದೂರು ನೀಡಿದರೆ ಸ್ವಾಗತಿಸುತ್ತೇನೆ. ಮಾನನಷ್ಟ ಮೊಕದ್ದಮೆ ಹೂಡಿದರೆ ಸಂಸದರು ಹಾಗೂ ಅವರ ಕುಟುಂಬ ಸದಸ್ಯರು ಮಾಡಿರುವ ಅಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಲು ನನಗೊಂದು ಅವಕಾಶ ಸಿಗುತ್ತದೆ. ಲಾರಿ ಡ್ರೈವರ್‌ ಆಗಿದ್ದ ಪುಟ್ಟರಾಜು ಈಗ ಸಾವಿರ ಕೋಟಿಯ ಒಡೆಯರಾಗಿದ್ದಾರೆ. ಇದರ ವಿರುದ್ಧ ತನಿಖೆ ಕೈಗೊಳ್ಳುವಂತೆ ಆಗ್ರಹಿಸಿ ಸಿಬಿಐಗೆ ದೂರು ನೀಡುತ್ತೇನೆ. ಅಲ್ಲದೆ ಸಂಸದರು ನನ್ನ ಮೊಬೈಲ್‌ ಫೋನ್‌ ಕದ್ದಾಲಿಕೆ ಮಾಡುತ್ತಿದ್ದಾರೆ. ಇದರ ವಿರುದ್ಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡುತ್ತೇನೆ’ ಎಂದು ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.