ಶ್ರೀರಂಗಪಟ್ಟಣ: ತಾಲ್ಲೂಕು ಕೇಂದ್ರಕ್ಕೆ ಕೇವಲ 3 ಕಿ.ಮೀಗಳ ದೂರದಲ್ಲಿರುವ ದೊಡ್ಡೇಗೌಡನಕೊಪ್ಪಲು ಗ್ರಾಮದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯ ನಡೆದಿಲ್ಲ.
ಊರಿಗೆ ಕಾಲಿಟ್ಟೊಡನೆ ಕಿತ್ತೋದ ರಸ್ತೆಗಳು, ಕಟ್ಟಿಕೊಂಡು ಗಬ್ಬು ನಾರು ಚರಂಡಿಗಳು ಹಾಗೂ ತಿಪ್ಪೆಗಳ ರಾಶಿ ನಮ್ಮನ್ನು ಸ್ವಾಗತಿಸುತ್ತವೆ.
ದಲಿತ ಕಾಲೋನಿಗೆ ಹೋಗ ಬೇಕಾದರೆ ಕೊಚ್ಚೆ ಗುಂಡಿಯ ದರ್ಶನ ಖಚಿತ. ಈ ಗ್ರಾಮದ ಯಾವುದೇ ಬೀದಿ ಡಾಂಬರು ಕಂಡಿಲ್ಲ. ಬಾಕ್ಸ್ ಚರಂಡಿಗಳ ನಿರ್ಮಾಣ ಆಗಿಲ್ಲ. ಹಾಗಾಗಿ ಕೊಳಚೆ ನೀರು ರಸ್ತೆಯಲ್ಲಿ ಯದ್ವಾತದ್ವ ಹರಿ ಯುತ್ತದೆ. ಮಳೆಗಾಲದಲ್ಲಿ ರಸ್ತೆಗಳು ಕೆಸರು ಗದ್ದೆಗಳಾಗಿ ಮಾರ್ಪಡುತ್ತವೆ. ಕುಡಿ ಯಲು ತೊಂಬೆ ನಲ್ಲಿಯ ನೀರಿದ್ದರೂ ತುರ್ತು ಸಂದರ್ಭಗಳಲ್ಲಿ ಬೋರ್‌ವೆಲ್ ನೀರೇ ಗತಿ ಎಂಬ ಪರಿಸ್ಥಿತಿ ಇದೆ. ಇರುವ ಒಂದು ಬೋರ್‌ವೆಲ್ ಒತ್ತಿದರೆ ಅದರಲ್ಲಿ ಕುಡಿಯಲಾಗದ ಕಲುಷಿತ ನೀರು ಬರುತ್ತದೆ.
ಬಸ್ ಕಂಡಿಲ್ಲ: 400 ಜನಸಂಖ್ಯೆ ಇರುವ ದೊಡ್ಡೇಗೌಡನಕೊಪ್ಪಲು ಗ್ರಾಮ ಇದುವರೆಗೆ ಒಮ್ಮೆಯೂ ಬಸ್ ಮುಖವನ್ನೇ ಕಂಡಿಲ್ಲ. ಪಟ್ಟಣಕ್ಕೆ ಬರುವವರು ಒಂದೂವರೆ ಕಿ.ಮೀ ದೂರದ ರಾಂಪುರ ಗ್ರಾಮದ ವರೆಗೆ ನಡೆದು ಬಂದು ಬಸ್ ಹತ್ತಬೇಕು. ವಿದ್ಯಾರ್ಥಿಗಳು, ರೋಗಿಗಳ ಪಾಡು ಹೇಳತೀರದು. ಹೆರಿಗೆ ಇತರ ಕಾರಣಗಳಿಗೆ ತುರ್ತಾಗಿ ಆಸ್ಪತ್ರೆಗೆ ಹೋಗಬೇಕಾದರೆ ಎತ್ತಿನ ಗಾಡಿಗಳನ್ನು ಅವಲಂಬಿಸಬೇಕಾಗಿದೆ. ತರಕಾರಿ ಬೆಳೆಯುವ ರೈತರು ಮಾರುಕಟ್ಟೆಗೆ ತರಕಾರಿ ಸಾಗಿಸಲು ಪರದಾಡುವ ಸ್ಥಿತಿ ಇದೆ. `ಇದೇ ಊರಿನವರು ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿದ್ದರು. ಆದರೆ ಅವರಿಂದ ಊರಿಗೆ ಹೇಳಿಕೊಳ್ಳುವಂತಹ ಉಪಕಾರವಾಗಿಲ್ಲ. ಮಣ್ಣಿನ ರಸ್ತೆಯಲ್ಲಿ ಓಡಾಡುವುದು ತಪ್ಪಿಲ್ಲ~ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.
`ರಾಂಪುರ- ದೊಡ್ಡೇಗೌಡನ ಕೊಪ್ಪಲು ಸಂಪರ್ಕ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಚಿಂತನೆ ನಡೆಸಿದೆ. ಕೆಲಸಗಾರರ ಕೊರತೆಯಿಂದ ಗ್ರಾಮದ ಚರಂಡಿಗಳನ್ನು ಸಕಾಲಕ್ಕೆ ಸ್ವಚ್ಛ ಗೊಳಿಸಲು ಆಗುತ್ತಿಲ್ಲ. ರಸ್ತೆಯಲ್ಲಿರುವ ತಿಪ್ಪೆಗಳನ್ನು ತೆರವು ಮಾಡುವಂತೆ ತಿಳಿ ಹೇಳಿದ್ದರೂ ಗ್ರಾಮಸ್ಥರು ಸಹಕರಿಸುತ್ತಿಲ್ಲ~ ಎಂದು ದರಸಗುಪ್ಪೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಆರ್. ಕೃಷ್ಣಪ್ಪಗೌಡ ಅಸಹಾಯಕರಂತೆ ಮಾತನಾಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.