ADVERTISEMENT

ಇಸ್ಕಾನ್ ವಿರುದ್ಧ ಕ್ರಮಕ್ಕೆ ಶಾಸಕ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 9:50 IST
Last Updated 18 ಜೂನ್ 2011, 9:50 IST

ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರ ಬಳಿ ಅಪಾರ ಪ್ರಮಾಣದ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿದ್ದು, ರೈತರಿಗೆ ಕಿರುಕುಳ ನೀಡುತ್ತಿರುವ ಬೆಂಗಳೂರು ಇಸ್ಕಾನ್ ಸಂಸ್ಥೆಯ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಆಗ್ರಹಿಸಿದರು.

  ಇಲ್ಲಿಗೆ ಸಮೀಪದ ಗಂಜಾಂನಲ್ಲಿ ರೂ.62 ಲಕ್ಷ ವೆಚ್ಚದ ನಿಮಿಷಾಂಬ ಯಾತ್ರಿ ನಿವಾಸ್ ಕಟ್ಟಡ ಕಾಮಗಾರಿಗೆ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು. ಮಹದೇವಪುರ ಬಳಿ 60 ಎಕೆರೆಗೂ ಹೆಚ್ಚು ಸರ್ಕಾರಿ ಗೋಮಾಳವನ್ನು ಇಸ್ಕಾನ್ ಸಂಸ್ಥೆ ಕಬಳಿಸಿದೆ.
 
ಸಮಾಜ ಸೇವೆ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಧಂಧೆ ನಡೆಸುತ್ತಿದೆ. ಕಡಿಮೆ ಬೆಲೆಗೆ, ನಿಯಮ ಬಾಹಿರವಾಗಿ ಬಡ ರೈತರ ಜಮೀನು ಖರೀದಿಸಿ ವಂಚಿಸಿದೆ. ಸುತ್ತಮುತ್ತಲಿನ ರೈತರಿಗೂ ತೊಂದರೆ ನೀಡುತ್ತಿದೆ. ಸಣ್ಣ ಪ್ರಮಾಣದಲ್ಲಿ ಸರ್ಕಾರಿ ಭೂಮಿ ಅತಿಕ್ರಮ ಮಾಡುವ ರೈತರ ವಿರುದ್ಧ ಪ್ರಕರಣ ದಾಖಲಿಸುವ ಜಿಲ್ಲಾಡಳಿತ ಇಸ್ಕಾನ್ ಸಂಸ್ಥೆ ವಿರುದ್ಧವೂ ಕ್ರಮ ಕೈಗೊಳ್ಳಬೇಕು.

ಅತಿಕ್ರಮಕ್ಕೆ ಒಳಗಾಗಿರುವ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಂಡು ವಸತಿ ಶಾಲೆಗಳು, ಇತರ ಉದ್ದೇಶಗಳಿಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

  ಗಂಜಾಂನಲ್ಲಿ ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ, ರೂ.62 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಯಾತ್ರಿ ನಿವಾಸ್ ಕಟ್ಟಡ ಕಾಮಗಾರಿ 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಗುಣಮಟ್ಟದ ಕಾಮಗಾರಿ ನಡೆಸುವಂತೆ ನಿರ್ಮಿತಿ ಕೇಂದ್ರಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷ ಎಲ್.ನಾಗರಾಜು, ಉಪಾಧ್ಯಕ್ಷೆ ಗಾಯತ್ರಿ, ಮುಖ್ಯಾಧಿಕಾರಿ ರಾಜಣ್ಣ, ಸದಸ್ಯರಾದ ಶಿವಾಜಿರಾವ್, ಜಯರಾಂ, ಎಂ.ಎಲ್.ದಿನೇಶ್, ಅಣ್ಣಾಸ್ವಾಮಿ, ಡಾ.ಭಾನುಪ್ರಕಾಶ್ ಶರ್ಮಾ, ನಿಮಿಷಾಂಬ ದೇವಾಲಯದ ಆಡಳಿತಾಧಿಕಾರಿ ಶಿವಲಿಂಗೇಗೌಡ, ಕೃಷ್ಣಮೂರ್ತಿ, ನಿರ್ಮಿತಿ ಕೇಂದ್ರದ ನರೇಶ್, ಶ್ರೀನಾಥ್, ಉಮಾಶಂಕರ್ ಇದ್ದರು. ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಯಲ್ಲಿ ಶನೇಶ್ವರ ಸ್ವಾಮಿ ಸಮುದಾಯ ಭವನಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ ಶುಕ್ರವಾರ ಗುದ್ದಲಿ ಪೂಜೆ ನೆರವೇ ರಿಸಿದರು. ಸಿ.ದೇವರಾಜು, ಪಿಡಿಓ ಸುರೇಂದ್ರ, ಕುಬೇರಪ್ಪ, ಗಂಗಾಧರ್, ಶ್ರೀನಿವಾಸ್, ನಂದೀಶ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.