ADVERTISEMENT

ಏರೋಬಿಕ್‌ ಪದ್ಧತಿಯಲ್ಲಿ ಭತ್ತದ ಬೆಳೆ

ಹೊಸ ಪ್ರಯೋಗಕ್ಕೆ ಮುಂದಾದ ಮಂಗಲದ ರೈತರು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 6:28 IST
Last Updated 12 ಸೆಪ್ಟೆಂಬರ್ 2013, 6:28 IST

ಮಂಡ್ಯ: ಕಾವೇರಿ ಕಣಿವೆಯಲ್ಲಿ ನೀರಿಗಾಗಿ ಆಗಾಗ ಹೋರಾಟಗಳು ನಡೆಯುತ್ತಲೇ ಇರುತ್ತವೆ. ಕಡಿಮೆ ನೀರಿನಲ್ಲಿ ಭತ್ತ ಬೆಳೆಯಲು ಸಾಧ್ಯವಾದರೆ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಅಂತಹದೊಂದು ಪ್ರಯೋಗಕ್ಕೆ ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮದ ಹಲವಾರು ರೈತರು ಮುಂದಾಗಿದ್ದಾರೆ.

ಕಡಿಮೆ ನೀರು ಬಳಸಿಕೊಂಡು ಭತ್ತ ಬೆಳೆದರೆ ಸಾಕಷ್ಟು ನೀರು ಉಳಿಸಬಹುದು. ಆ ಮೂಲಕ ಕಡಿಮೆ ನೀರಿನಲ್ಲಿ ಹೆಚ್ಚು ಪ್ರದೇಶದಲ್ಲಿ ಬೆಳೆಯಬಹುದು. ಕೆಸರುಗದ್ದೆ ಮಾಡಿಕೊಳ್ಳದೇ, ರಾಗಿಯಂತೆಯೇ ಕಡಿಮೆ ನೀರಿನಲ್ಲಿ ಬೆಳೆಯುವುದೇ ‘ಏರೋಬಿಕ್‌’ ಪದ್ಧತಿ.
ಮಂಗಲ ಗ್ರಾಮದ ಅಂದಾಜು 80ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ’ಏರೋಬಿಕ್‌’ ಪದ್ಧತಿಯಲ್ಲಿ ಭತ್ತ ಬೆಳೆಯಲಾಗಿದೆ.

ಸಾಮಾನ್ಯವಾಗಿ ಒಂದು ಎಕರೆ ಭತ್ತ ಬೆಳೆಯಲು ಬಳಸುವ ನೀರಿನಲ್ಲಿ ಎರಡು ಎಕರೆ ಭತ್ತವನ್ನು ಬೆಳೆಯಬಹುದಾಗಿದೆ. ಆ ಮೂಲಕ ನೀರಿನ ಸಮಸ್ಯೆ ಪರಿಹಾರಕ್ಕೆ ಹಾಗೂ ಭೂಮಿ ಫಲವತ್ತತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಉತ್ತಮ ಪ್ರಯತ್ನವಾಗಿದೆ.

ತನು, ಎಂಟಿಯು–1001, ಐಆರ್‌–64 ಹಾಗೂ ಬಿಆರ್‌–2655 ತಳಿ ಭತ್ತವನ್ನು ನಾಟಿ ಮಾಡಲಾಗಿದೆ. 30 ದಿನಗಳ ಬೆಳೆ ಉತ್ತಮ­ವಾಗಿಯೇ ಬೆಳೆದಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿ ರೈತರೂ ಇದ್ದಾರೆ.

‘ಕಳೆದ ವರ್ಷ ಗ್ರಾಮದ ರಮೇಶ್‌ ಎಂಬುವವರು ಈ ತರಹ ಭತ್ತ ಬೆಳೆದಿದ್ದರು. ಅದನ್ನು ನೋಡಿ ನಾವೂ ಈ ಬಾರಿ ಬೆಳೆದಿದ್ದೇವೆ. ಕಡಿಮೆ ಖರ್ಚು ಹಾಗೂ ಕಡಿಮೆ ನೀರಿನಲ್ಲಿ ಉತ್ತಮ ಫಸಲು ಪಡೆಯುತ್ತೇವೆ’ ಎನ್ನುತ್ತಾರೆ ರೈತ ಪುಟ್ಟಸ್ವಾಮಿ.

‘ಕೃಷಿ ಸಂಶೋಧನಾ ಕೇಂದ್ರ ವಿಸಿ ಫಾರಂಗೆ ಹೋಗಿದ್ದಾಗ ಏರೋಬಿಕ್‌ ಪದ್ಧತಿಯಲ್ಲಿ ಬೆಳೆದದ್ದನ್ನು ನೋಡಿದ್ದೆ. ಅದನ್ನೇ ಗಮನದಲ್ಲಿಟ್ಟು­ಕೊಂಡು ಕಳೆದ ವರ್ಷ ಬೆಳೆದಿದ್ದೆ. 35 ಗುಂಟೆಯಲ್ಲಿ ಬೆಳೆದು 23 ಕ್ವಿಂಟಲ್‌ ಇಳುವರಿ ಪಡೆದುಕೊಂಡಿದ್ದೆ’ ಎನ್ನುತ್ತಾರೆ ರಮೇಶ್‌.

ಕಬ್ಬನ್ನು ಬೆಳೆಯುವ ಪ್ರದೇಶವಿದು. ಬೇಸಿಗೆಯಲ್ಲಿ ನೀರು ಕೊಡುವುದು ಗ್ಯಾರಂಟಿ ಇಲ್ಲ ಎಂದ ಮೇಲೆ ಭತ್ತ ಬೆಳೆಯಲು ಮುಂದಾದೆವು. ಭತ್ತಗಾಗಿ ಭೂಮಿ ‘ಲೆವೆಲ್‌’ಮಾಡಿ, ಕಟ್ಟೆ ಕಟ್ಟುವುದಕ್ಕೆ ಮುಂದಾದರೆ 25 ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತಿತ್ತು. ಕಡಿಮೆ ಕರ್ಚಿನಲ್ಲಿ ಭತ್ತ ಬೆಳೆಯಲು ಮುಂದಾಗಿದ್ದೇವೆ ಎನ್ನುವುದು ಅವರ ಅನಿಸಿಕೆ.

ಏರೋಬಿಕ್‌ ಪದ್ಧತಿಯಲ್ಲಿ ರಾಗಿಯಂತೆ ನೇರವಾಗಿ ಅಥವಾ ಸಸಿ ಮಡಿ ಮಾಡಿಕೊಂಡು ನಾಟಿ ಮಾಡಬಹುದಾಗಿದೆ. ಕೆಸರುಗದ್ದೆ ಮಾಡಿ ಭತ್ತ ಬೆಳೆದರೆ ಸದಾ ನೀರು ನಿಲ್ಲಿಸಬೇಕಾಗುತ್ತದೆ. ಈ ಪದ್ಧತಿಯಲ್ಲಿ ವಾರಕ್ಕೆ ಎರಡು ಬಾರಿ ನೀರು ಹರಿಸಿದರೆ ಸಾಕು. ಹೊಸ ಪ್ರಯೋಗಕ್ಕೆ ಮುಂದಾಗಿರುವ ನಮಗೆ ಸರ್ಕಾರ ನೆರವು ನೀಡಬೇಕು ಎನ್ನುವುದು ಅವರ ಆಗ್ರಹ.

‘ಒಂದು ಅಡಿಗೆ ಒಂದು ಸಾಲಿನಂತೆ ಬಿತ್ತನೆ ಮಾಡಿದ್ದಾರೆ. ಅದನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳ­ಬಹುದಿತ್ತು. ಕಳೆ ನಿಯಂತ್ರಣ ಮಾಡಬೇಕು. ನಿಯಮಿತವಾಗಿ ಭೂಮಿ ಫಲವತ್ತತೆ ಆಧಾರದ ಮೇಲೆ ಲಘು ಪೋಷಕಾಂಶ­ಗಳನ್ನು ನೀಡಬೇಕು.

ಅಂತರವಿರುವುದರಿಂದ ರೋಗ, ಕೀಟದ ಬಾಧೆ ಕಡಿಮೆ ಇರುತ್ತದೆ’ ಎನ್ನುತ್ತಾರೆ ವಿ.ಸಿ.ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದ ಭತ್ತದ ತಳಿಯ ಹಿರಿಯ ವಿಜ್ಞಾನಿ ಡಾ.ಎಂ.ಪಿ. ರಾಜಣ್ಣ.

ಈ ಪದ್ಧತಿ ಅಳವಡಿಸಿರುವುದರಿಂದ ಕೂಲಿ ಕಾರ್ಮಿಕರ ಬಳಕೆ ಕಡಿಮೆಯಾಗುತ್ತದೆ. ಪಾತಿ ಕಟ್ಟಲು ಮಾಡಬೇಕಾಗಿದ್ದ ಖರ್ಚೂ ಉಳಿಯುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ನೀರಿನಲ್ಲಿ ಶೇ 40ಕ್ಕೂ ಹೆಚ್ಚು ಉಳಿತಾಯವಾಗುತ್ತದೆ ಎನ್ನುತ್ತಾರೆ ಅವರು.

ನಮ್ಮ ಕೇಂದ್ರ ಹಾಗೂ ಕೃಷಿ ಇಲಾಖೆ ವತಿಯಿಂದ ಅವರಿಗೆ ಬೇಕಾದ ಎಲ್ಲ ನೆರವನ್ನೂ ನೀಡಲಾಗುವುದು. ರೋಗ ಬಾಧೆ ಕಂಡು ಬಂದರೂ ಸೂಕ್ತ ಸಲಹೆಗಳನ್ನು ಕೊಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.