ADVERTISEMENT

ಐತಿಹಾಸಿಕ ಕಂದಕಕ್ಕೆ ಕಲ್ಲು, ಮಣ್ಣು!

​ಪ್ರಜಾವಾಣಿ ವಾರ್ತೆ
Published 25 ಜೂನ್ 2012, 9:15 IST
Last Updated 25 ಜೂನ್ 2012, 9:15 IST

ಶ್ರೀರಂಗಪಟ್ಟಣ: ಪಟ್ಟಣದ ಐತಿಹಾಸಿಕ ಕಂದಕಕ್ಕೆ ಕಲ್ಲು, ಮಣ್ಣು ತಂದು ಸುರಿಯಲಾಗುತ್ತಿದ್ದು, ಕಂದಕ ಮುಚ್ಚಿ ಹೋಗುವ ಅಪಾಯ ಎದುರಾಗಿದೆ.

ಪಟ್ಟಣದ ಪೂರ್ವ ಕೋಟೆಗೆ ಹೊಂದಿಕೊಂಡಿರುವ ಕಂದಕಕ್ಕೆ ಹಳೆಯ ಮನೆಗಳನ್ನು ಒಡೆದಾಗ ಉಳಿಯುವ ತ್ಯಾಜ್ಯ, ಕೋಳಿ ಮಾಂಸದ ಅಂಗಡಿ, ಮೀನು ಮಾರಾಟ ಕೇಂದ್ರ ಹಾಗೂ ಹೋಟೆಲ್‌ಗಳ ತ್ಯಾಜ್ಯವನ್ನು ಸುರಿಯಲಾಗುತ್ತಿದೆ.
 
ಕಳೆದ ಏಳೆಂಟು ತಿಂಗಳುಗಳಿಂದ ಹೀಗೆ ತ್ಯಾಜ್ಯವನ್ನು ಅಡೆ ತಡೆಯಿಲ್ಲದೆ ಸುರಿಯಲಾಗುತ್ತಿದೆ. ಕಾವೇರಿ ಬಡಾವಣೆ ಪಕ್ಕದ ಕಂದಕ ಈಗಾಗಲೇ ಭಾಗಶಃ ಮುಚ್ಚಿಹೋಗಿದೆ. ಥಾಮಸ್ ಇನ್‌ಮಾನ್ಸ್ ಡಂಜನ್‌ಗೆ ಸಂಪರ್ಕ ಕಲ್ಪಿಸುವ ಹಾಗೂ ಪುರಸಭೆ ಕಚೇರಿ ಹಿಂಭಾಗದ ಕಂದಕಗಳಲ್ಲಿ ರಾಶಿ ರಾಶಿ ಕಸ ತುಂಬಿದೆ. ಹತ್ತಿರ ಸುಳಿದರೆ ಗಬ್ಬು ವಾಸನೆ ಮೂಗಿಗೆ ಬಡಿಯುತ್ತದೆ. ಕೋಟೆಯನ್ನು ನೋಡಲು ಬರುವ ದೇಶ, ವಿದೇಶಗಳ ಪ್ರವಾಸಿಗರು ಕಂದಕದ ಸ್ಥಿತಿ ನೋಡಿ ಮರುಗುವಂತಾಗಿದೆ.

  ರಾಜ್ಯ ಪ್ರಾಚ್ಯವಸ್ತು ಇಲಾಖೆ ಈ ಕಂದಕಗಳ ನಿರ್ವಹಣೆ ಮಾಡುತ್ತಿದೆ. ಆದರೆ ಸ್ಮಾರಕದ ಪಟ್ಟಿಯಲ್ಲಿರುವ ಕಂದಕಗಳನ್ನು ಉಳಿಸಿಕೊಳ್ಳಲು ಆ ಇಲಾಖೆ ಗಂಭೀರ ಪ್ರಯತ್ನ ಮಾಡುತ್ತಿಲ್ಲ. ಕೋಟೆಗಳ ಮೇಲೆ ಬೆಳೆದಿರುವ ಮುಳ್ಳು ಕಂಟಿಗಳನ್ನು ಸ್ವಚ್ಛಗೊಳಿಸುವ ಗೋಜಿಗೂ ಹೋಗಿಲ್ಲ. ಇದರಿಂದಾಗಿ ಐತಿಹಾಸಿಕ ಕುರುಹುಗಳು ಒಂದೊಂದಾಗಿ ಅವಸಾನದ ಅಂಚಿಗೆ ತಲುಪುತ್ತಿವೆ.

`ಪಟ್ಟಣದ ಇತಿಹಾಸ ಪ್ರಸಿದ್ಧ ಕೋಟೆ, ಬುರುಜು, ದೇವಾಲಯಗಳನ್ನು ಪ್ರಾಚ್ಯವಸ್ತು ಇಲಾಖೆ ಕಡೆಗಣಿಸಿದೆ. ಪಟ್ಟಣದ ಐತಿಹಾಸಿಕ ಮಹತ್ವ ಬಿಂಬಿಸುವ ಮಹತ್ವದ ಧ್ವನಿ- ಬೆಳಕು ಕಾರ್ಯಕ್ರಮ ಹಲವು ತಿಂಗಳುಗಳಿಂದ ನೆನಗುದಿಗೆ ಬಿದ್ದಿದೆ. ಸ್ಮಾರಕಗಳ ರಕ್ಷಣೆ ಮಾಡದಿದ್ದರೆ ಮುಂದಿನ ಪೀಳಿಗೆಗೆ ಏನೂ ಉಳಿಯುವುದಿಲ್ಲ~ ಎಂದು ಶಿಕ್ಷಕ ಸಾ.ವೆ.ರ.ಸ್ವಾಮಿ ಇತರರು ಅಸಹನೆ ವ್ಯಕ್ತಪಡಿಸುತ್ತಾರೆ.

 ಇತಿಹಾಸ: ಟಿಪ್ಪು ಸುಲ್ತಾನ್ ಆಳ್ವಿಕೆ ಕಾಲದಲ್ಲಿ (1782-99) 6 ಕಿ.ಮೀ. ಸುತ್ತಳತೆಯ ಕೋಟೆಯ ಸುತ್ತ ಸುಮಾರು 30 ಅಡಿ ಆಳದ ಕಂದಕ ನಿರ್ಮಿಸಲಾಗಿತ್ತು. ಶತ್ರು ಸೈನಿಕರು ಪಟ್ಟಣ ಪ್ರವೇಶಿಸದಂತೆ ಈ ಕಂದಕಕ್ಕೆ ಕಾವೇರಿ ನದಿಯಿಂದ ನೀರು ಹರಿಸಲಾಗುತ್ತಿತ್ತು. ಕಂದಕಗಳಿಗೆ ಮೊಸಳೆಗಳನ್ನೂ ಬಿಡುತ್ತಿದ್ದರು. ಫ್ರೆಂಚ್ ಎಂಜಿನಿಯರ್ ಹ್ಯೂಬನ್ ಅವರ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡ ಈ ಕೋಟೆ ಅಭೇದ್ಯ ಕೋಟೆ ಎಂಬ ಖ್ಯಾತಿ ಪಡೆದಿತ್ತು.

ನಗ-ನಾಣ್ಯ ಕಳವು
ಕೃಷ್ಣರಾಜಪೇಟೆ:
ಮನೆಯೊಂದರ ಹಿಂಬಾಗಿಲು ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ನಗ ನಾಣ್ಯ ದೋಚಿರುವ ಘಟನೆ ಶನಿವಾರ ತಡರಾತ್ರಿ ತಾಲ್ಲೂಕಿನ ಲಿಂಗಾಪುರದಲ್ಲಿ ನಡೆದಿದೆ.

ಗ್ರಾಮದ ತಮ್ಮಯ್ಯ ಎಂಬುವವರ ಮನೆಯಲ್ಲಿ ಶನಿವಾರ ರಾತ್ರಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಈ ಘಟನೆ ನಡೆದಿದೆ. ಹಿಂಬಾಗಿಲನ್ನು ತೆಗೆದು ಮನೆಯೊಳಗೆ ಪ್ರವೇಶಿಸಿರುವ ಕಳ್ಳರು ನಗನಾಣ್ಯ ತುಂಬಿದ್ದ ಪೆಟ್ಟಿಗೆಯೊಳಗಿದ್ದ ಸುಮಾರು 70 ಗ್ರಾಂ ಚಿನ್ನದ ಆಭರಣ ಮತ್ತು 40 ಸಾವಿರ ನಗದನ್ನು ಅಪಹರಿಸಿ, ಪರಾರಿಯಾಗಿದ್ದಾರೆ. ತಮ್ಮಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.