ADVERTISEMENT

ಒಕ್ಕಲಿಗರು ಜೆಡಿಎಸ್‌ ಸ್ವತ್ತಲ್ಲ: ಚಲುವರಾಯಸ್ವಾಮಿ

ಕಾಂಗ್ರೆಸ್‌ ಸೇರ್ಪಡೆ ನಂತರ ಜಿಲ್ಲಾ ಕಚೇರಿಗೆ ಭೇಟಿ, ಬೆಂಬಲಿಗರಿಂದ ಸ್ವಾಗತ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 10:02 IST
Last Updated 7 ಏಪ್ರಿಲ್ 2018, 10:02 IST

ಮಂಡ್ಯ: ‘ಒಕ್ಕಲಿಗರೆಲ್ಲರೂ ಜೆಡಿಎಸ್‌ ಪಕ್ಷಕ್ಕೆ ಮತ ಹಾಕಿದ್ದರೆ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಗೆಲ್ಲುತ್ತಿರಲಿಲ್ಲ. ಹೀಗಾಗಿ ಒಕ್ಕಲಿಗ ಸಮುದಾಯ ಜೆಡಿಎಸ್‌ ಸ್ವತ್ತಲ್ಲ’ ಎಂದು ಕಾಂಗ್ರೆಸ್ ಮುಖಂಡ ಎನ್‌.ಚಲುವರಾಯಸ್ವಾಮಿ ಹೇಳಿದರು.ಕಾಂಗ್ರೆಸ್‌ಗೆ ಸೇರ್ಪಡೆಯಾದ ನಂತರ ಇದೇ ಮೊದಲ ಬಾರಿಗೆ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

‘ಒಕ್ಕಲಿಗರೆಲ್ಲರೂ ಕೇವಲ ಜೆಡಿಎಸ್‌ ಸ್ವತ್ತಾಗಿದ್ದರೆ ಕಾಂಗ್ರೆಸ್‌ನಲ್ಲಿರುವ ಒಕ್ಕಲಿಗರು ಗೆಲುವು ಸಾಧಿಸುತ್ತಿರಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಸೋಲುವುದಿಲ್ಲ. ಉಪ ಚುನಾವಣೆಯಲ್ಲಿ ನಾನೂ ಸೇರಿದಂತೆ ಜೆಡಿಎಸ್‌ ಮುಖಂಡರೆಲ್ಲರೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದೆವು. ಆದರೂ ಸಿದ್ದರಾಮಯ್ಯ ಗೆದ್ದೇಬಿಟ್ಟರು. ಮುಖ್ಯಮಂತ್ರಿಗಳು ಕಳೆದ ಐದು ವರ್ಷಗಳಿಂದ ನೀಡಿರುವ ಜನಪರ ಆಡಳಿತ ಅವರ ಕೈ ಹಿಡಿಯುತ್ತದೆ’ ಎಂದು ಹೇಳಿದರು.

‘ಅಂಬರೀಷ್‌ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅಂಬರೀಷ್‌ಗೆ ಜಿಲ್ಲಾ ಕಾಂಗ್ರೆಸ್‌ ನಾಯಕತ್ವ ವಹಿಸಿದರೆ ಯಾವುದೇ ಅಭ್ಯಂತರ ಇಲ್ಲ. ಸಾಮೂಹಿಕ ನಾಯಕತ್ವದಲ್ಲಿ ನಮಗೆ ನಂಬಿಕೆ ಇದೆ. ಎಲ್ಲರೂ ಒಗ್ಗಟ್ಟಿನಿಂದ ವಿಧಾನಸಭಾ ಚುನಾವಣೆ ಎದುರಿಸುತ್ತೇವೆ. ಶೀಘ್ರ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಎಲ್ಲಾ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಸಂಘಟನೆ ಮಾಡಲಾಗುವುದು’ ಎಂದು ಹೇಳಿದರು.

ADVERTISEMENT

ಕುಮಾರಸ್ವಾಮಿಗೆ ಟಾಂಗ್‌: ‘ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಕಾಂಗ್ರೆಸ್‌ಗೆ ಸೇರ್ಪಡೆ ಆಗಿರುವ ಮಾಜಿ ಶಾಸಕರು ಗೆಲ್ಲುವವರೆಗೆ ನಾನು ಕಡುಬು ತಿನ್ನುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಕುಮಾರಸ್ವಾಮಿ ಯಾರ ಹಣೆಬರಹವನ್ನೂ ಬರೆಯುವುದಿಲ್ಲ. ಅವರು ಎಲ್ಲರ ಹಣೆಬರಹ ಬರೆಯುವುದಾದರೆ ನಾವೇಕೆ ರಾಜಕಾರಣ ಮಾಡಬೇಕು? ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಾಗ ಅವರು ಏನು ತಿನ್ನುತ್ತಿದ್ದರು? ಮಾತನಾಡಲು ಎಲ್ಲರಿಗೂ ಬರುತ್ತದೆ. ಆದರೆ ಕೀಳುಮಟ್ಟಕ್ಕೆ ಇಳಿದು ನಾನು ಮಾತನಾಡುವುದಿಲ್ಲ’ ಎಂದು ಕುಮಾರಸ್ವಾಮಿ ಅವರಿಗೆ ಟಾಂಗ್‌ ನೀಡಿದರು.

‘ಕಾಂಗ್ರೆಸ್‌ ಮುಖಂಡ ಜಿ.ಮಾದೇಗೌಡ ಅವರು 1999ರಲ್ಲೇ ನನ್ನನ್ನು ಕಾಂಗ್ರೆಸ್‌ಗೆ ಆಹ್ವಾನಿಸಿದ್ದರು. ಕಾರಣಾಂತರಗಳಿಂದ ಕಾಂಗ್ರೆಸ್‌ ಸೇರಲು ಸಾಧ್ಯವಾಗಲಿಲ್ಲ. ಆಗ ಅವರು, ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡುವ ಅಭ್ಯರ್ಥಿಗೆ ಮತ ನೀಡಿ ಎಂದು ತಿಳಿಸಿದ್ದರು. ಈಗ ಅವರ ಸಲಹೆ, ಸೂಚನೆ ಪಡೆದು ಮುನ್ನಡೆಯುತ್ತೇವೆ. ಜಿಲ್ಲೆಯ ರೈತರು, ಕಾರ್ಮಿಕರು ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಸರ್ಕಾರ ಕೆಲಸ ಮಾಡಿದೆ. ಹೀಗಾಗಿ ನಾನು ಕಾಂಗ್ರೆಸ್‌ ಪಕ್ಷ ಸೇರಿದ್ದೇನೆ’ ಎಂದು ಹೇಳಿದರು.

‘ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಾಗಿ ಹೊರ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಸ್ವಂತ ಜಿಲ್ಲೆಯವರು ಜಿಲ್ಲೆಯ ಜವಾಬ್ದಾರಿ ಹೊರಬೇಕು. ಅವರಿಗೆ ಸ್ಥಳೀಯ ಸಮಸ್ಯೆಗಳ ಅರಿವು ಇರುತ್ತದೆ. ಕೆಲವರು ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಶಕ್ತಿ ಇಲ್ಲ ಎಂದು ಹೇಳುತ್ತಾರೆ. ಆದರೆ ಪಕ್ಷದ ಎಲ್ಲಾ ಕಾರ್ಯಕರ್ತರು ಸಂಘಟಿತವಾಗಿ ಕೆಲಸ ಮಾಡಿದರೆ ಕನಿಷ್ಠ 5 ಕ್ಷೇತ್ರದಲ್ಲಾದರೂ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ’ ಎಂದರು.

‘ವಿವಿಧ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಪಕ್ಷವೇ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುವುತ್ತದೆ ಎಂದು ತಿಳಿಸಿವೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನೆಗಳೇ ಕಾರಣ. ಜನರಿಗೆ ನೀಡಿರುವ ಭಾಗ್ಯ ಯೋಜನೆಗಳಿಂದ ಅವರು ಜನಪ್ರಿಯ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ತಕ್ಕ ಉತ್ತರ ಕೊಡಲು ಸಿದ್ದರಾಮಯ್ಯ ಅವರು ಸಮರ್ಥರಾಗಿದ್ದಾರೆ. ಈ ನಿಟ್ಟಿನಲ್ಲಿ ಅವರು ದೇಶದಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ’ ಎಂದು ಹೇಳಿದರು.

ಮುಖಂಡರಾದ ಜಿ.ಮಾದೇಗೌಡ, ಎಂ.ಎಸ್‌.ಆತ್ಮಾನಂದ, ಪಿ.ಎಂ.ನರೇಂದ್ರಸ್ವಾಮಿ, ಸಿ.ಡಿ.ಗಂಗಾಧರ್‌, ರಮೇಶ್ ಬಂಡಿಸಿದ್ದೇಗೌಡ, ಎಚ್‌.ಬಿ.ರಾಮು, ಮಧು ಮಾದೇಗೌಡ, ರಾಮಲಿಂಗಯ್ಯ, ಅಂಜನಾ ಶ್ರೀಕಾಂತ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.