ADVERTISEMENT

ಒಲುಮೆಯ ಕವಿ ಊರಲ್ಲಿ ಕವಿತೆಗಳ ಮೆರವಣಿಗೆ...!

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 5:23 IST
Last Updated 10 ಜೂನ್ 2013, 5:23 IST

ವೀರಯೋಧ ಆಲಂಬಾಡಿ ಸತೀಶ್ ವೇದಿಕೆ (ಕೃಷ್ಣರಾಜಪೇಟೆ): ಸಂಜೆ ಐದರ ಸಮಯ. ನೇಸರ ತನ್ನ ದಿನಚರಿ ಮುಗಿಸಿದ್ದ. ಮುಗಿಲಲ್ಲಿ ಕಪ್ಪು ತಿಳಿ ಮೋಡ ಹೆಪ್ಪುಗಟ್ಟಿತ್ತು. ಹಕ್ಕಿಗಳು ಗೂಡು ಸೇರಲು ಹೊರಟ್ಟಿದ್ದವು. ಅದೇ ವೇಳೆ ಕವಿತೆಗಳು ಗರಿಬಿಚ್ಚತೊಡಗಿದವು..!

`ಒಲುಮೆಯ ಕವಿ' ಕೆ.ಎಸ್.ನರಸಿಂಹಸ್ವಾಮಿ ಊರಲ್ಲಿ ಗರಿಬಿಚ್ಚಿದ ಕೆಲ ಕವಿತೆಗಳು ರಸಪೂರ್ಣವೂ, ಧ್ವನಿಪೂರ್ಣವಾಗಿದ್ದು, ಕವಿತೆಯ ಸೊಗಸು ಹೆಚ್ಚಿಸಿ ಮನಸ್ಸಿಗೆ ಕಚಗಳಿ ಇಟ್ಟವು.

ಆದರೆ, ಬಹುತೇಕ ಕವಿತೆಗಳಲ್ಲಿ ಧ್ವನಿ ಮತ್ತು ರಸದಲ್ಲಿ ಕೊರತೆ ಕಾಣಿಸಿತು. ಕವನಗಳನ್ನು ವಾಚಿಸುವಲ್ಲಿಯೂ ಕೆಲವರು ಸೋತರು. ಕೆಲವರು ಪಾಠದಂತೆಯೂ, ಕೆಲವರು ಸಂಗೀತದ ಹಾಡುಗಾರಿಕೆಯಂತೆಯೂ ವಾಚಿಸಿದರು.

ಕೆ.ವಿ.ರಮೇಶ್ ಅವರು ವಾಚಿಸಿದ ಮನಸು..ಮನಸುಗಳ ನಡುವೆ ಗೋಡೆ ಎದ್ದಿದೆ, ಪ್ರೀತಿ ಹುಟ್ಟುವುದು ಹೇಗೆ.. ಎನ್ನುವ ಸಾಲಿರುವ `ಯಕ್ಷಪ್ರಶ್ನೆ' ಶೀರ್ಷಿಕೆಯ ಕವಿತೆ; ಈಶ್ವರ್ ಅವರ `ಹುಟ್ಟಬಾರದಿತ್ತು'; ಗಣಂಗೂರು ನಂಜೇಗೌಡರ `ಕಂದನೂರಿನ' ಹಾಡು' ಕವಿತೆಗಳು ಗಮನ ಸೆಳೆದವು.

ಜಲಕ್ಷಾಮ ತಂದೊಡ್ಡುವ ಸಮಸ್ಯೆಗಳು, ಜೀವ ಕಳೆದುಕೊಳ್ಳುವ ಪರಿಸರ ಕುರಿತಂತೆ `ಭಾಗೀರಥ ಜೀವರಥ, ಧರೆಗೆ ನೀ ಬಾರದಿರಲು, ನೇಸರ ಕೆಂಡ ಕಾರುತ್ತಿರಲು, ಬಾಯ್ತೆರೆದ ಭೂತಾಯಿ, ಸುಟ್ಟು ಸುಣ್ಣವಾಗಿದೆ...' ಎಂಬ ಸಾಲಿರುವ ಪ್ರಕಾಶ್ ಹಾರೋಹಳ್ಳಿ ಅವರ `ಭಗೀರಥನಿಗೆ' ಕವನ ಚಿಂತನೆಗೆ ಒಳಪಡಿಸಿತು.

ಬಲ್ಲೇನಹಳ್ಳಿ ಮಂಜುನಾಥ್ ಅವರ `ಬಾಂಬೂ'; ಪರಿಸರ ಸಂರಕ್ಷಣೆ ಮಹತ್ವ ಕುರಿತ ಹರವು ದೇವೇಗೌಡರ `ಸಾಕ್ಷಿಗಾಗಿ'; ಸರಳ ವಿವಾಹದ ಮಹತ್ವ, ಆಡಂಬರ ತಂದೊಡ್ಡುವ ಸಮಸ್ಯೆಗಳು ಕುರಿತು ಸವಿತಾ ರಮೇಶ್, ಬೆಳಕು ಚೆಲ್ಲಿದ `ನಮ್ಮೆಲ್ಲರ ನಡಿಗೆ; ಹೆರಗನಹಳ್ಳಿ ದಿನೇಶ್‌ರ `ಇನ್ನೂ ಬೆಳಕಿದೆ' ಕವಿತೆಗಳು ಅರ್ಥಪೂರ್ಣವಾಗಿದ್ದವು.

ಉಳಿದಂತೆ, ಕಾವೇರಿ ಸಮಸ್ಯೆ, ಹೆಣ್ಣಿನ ಕುರಿತ ಸಮಾಜದ ವಕ್ರನೋಟ, ಹಳ್ಳಿ ಕಟ್ಟೆಯಲ್ಲಿ ನಡೆಯುವ ಚರ್ಚೆ, ಭಾಷೆ ಸೇರಿದಂತೆ ಅನೇಕ ವಿಷಯ ಮೇಲೆ ಬೆಳಕು ಚೆಲ್ಲುವ ಕವಿತೆಗಳ ವಾಚನ ನಡೆಯಿತು.

ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕ ಮ.ರಾಮಕೃಷ್ಣ ಮಾತನಾಡಿ, ಕವಿಯಾಗಬೇಕಾದರೆ, ನಾವು ಮಗುವಾಗಬೇಕು. ನಗುವ ಮನಸು ನಮ್ಮದಾಗಬೇಕು. ಕವಿ ಜಗತ್ತನ್ನು ನೋಡಿ ನಗುವುದಲ್ಲ. ಯಾರು ತನ್ನನ್ನು ನೋಡಿ ನಗುತ್ತಾರೋ ಅವರು ಉತ್ತಮ ಕವಿಗಳಾಗುತ್ತಾರೆ ಎಂದು ಹೇಳಿದರು.

ಕವಿತೆ ಬರೆಯುವವರು ಹೃದಯದ ಆಳಕ್ಕೆ ಇಳಿಯಬೇಕು. ಮರುಗುವ, ಸ್ಪಂದಿಸುವ ಗುಣವಿರಬೇಕೆಂದರು. ಕವಿತೆ ತನ್ನ ಸುತ್ತ ಸುತ್ತಬೇಕು. ನಂತರ ಪ್ರಪಂಚ ಸುತ್ತಬೇಕು. ಅದು, ಸದಾ ಚಲನಶೀಲ ಆಗಿರಬೇಕು ಎಂದರು. ಕವಿತೆಯಲ್ಲಿನ ಧ್ವನಿ, ರಸವನ್ನು ಗುರುತಿಸುವುದನ್ನು ಕಲಿತಾಗಲೇ, ಉತ್ತಮ ಕವಿತೆಗಳು ಒಡಮೂಡಲು ಸಾಧ್ಯವಾಗುತ್ತದೆ. ಈ ಬಗೆಗೆ ಯುವಕವಿಗಳು ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.

ಪತ್ರಕರ್ತ ಬಿ.ಚಂದ್ರೇಗೌಡ ಮಾತನಾಡಿ, ಕಲೆ, ಸಾಹಿತ್ಯ, ಸಂಗೀತಕ್ಕೆ ಮೀಸಲಾತಿ ಎನ್ನುವುದಿಲ್ಲ. ಇಲ್ಲಿ ಶ್ರೇಷ್ಠತೆಯೇ ಪ್ರಧಾನ. ಇದನ್ನು ಗಮನಿಸಿ ಯುವ ಸಾಹಿತಿಗಳು ಮುಂದುವರೆಯಬೇಕು ಎಂದು ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.