ADVERTISEMENT

ಕಡತನಾಳು: ಕುಂಟುತ್ತಿರುವ ಕಾಮಗಾರಿ

ಅಂಬೇಡ್ಕರ್‌ ಭವನ ಪೂರ್ಣಗೊಳ್ಳುವುದೆಂದು?

​ಪ್ರಜಾವಾಣಿ ವಾರ್ತೆ
Published 25 ಮೇ 2018, 5:46 IST
Last Updated 25 ಮೇ 2018, 5:46 IST
ಶ್ರೀರಂಗಪಟ್ಟಣ ತಾಲ್ಲೂಕು ಕಡತನಾಳು ಗ್ರಾಮದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದ ಕಾಮಗಾರಿ ಅಪೂರ್ಣವಾಗಿದೆ
ಶ್ರೀರಂಗಪಟ್ಟಣ ತಾಲ್ಲೂಕು ಕಡತನಾಳು ಗ್ರಾಮದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದ ಕಾಮಗಾರಿ ಅಪೂರ್ಣವಾಗಿದೆ   

ಶ್ರೀರಂಗಪಟ್ಟಣ: ತಾಲ್ಲೂಕಿನ ಕಡತನಾಳು ಗ್ರಾಮದಲ್ಲಿ 8 ವರ್ಷಗಳ ಹಿಂದೆ ಆರಂಭವಾಗಿದ್ದ ಅಂಬೇಡ್ಕರ್‌ ಭವನ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ಗ್ರಾಮದ ಹೃದಯ ಭಾಗದಲ್ಲಿ ಅಂಬೇಡ್ಕರ್‌ ಭವನ ನಿರ್ಮಿಸಲು ಆರಂಭಿಸಲಾಗಿತ್ತು. ಗ್ರಾಮಸ್ಥರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಮೇಲಿಂದ ಮೇಲೆ ಭೇಟಿ ಮಾಡಿ ಭವನ ಪೂರ್ಣಗೊಳಿಸಲು ಮನವಿ ಸಲ್ಲಿಸುತ್ತ ಬಂದಿದ್ದಾರೆ. ಆದರೂ ಕಾಮಗಾರಿ ಕುಂಟುತ್ತಿದೆ. ಇನ್ನೂ ಶೇ 20ರಷ್ಟು ಕೆಲಸ ಬಾಕಿ ಉಳಿದಿದೆ.

ಶಾಸಕರ ಅನುದಾನದಲ್ಲಿ ಈ ಭವನ ನಿರ್ಮಿಸಲು ಅಂದಿನ ಶಾಸಕ ರಮೇಶ ಬಂಡಿಸಿದ್ದೇಗೌಡ ₹ 3.5 ಲಕ್ಷ ಅನುದಾನ ಬಿಡುಗಡೆ ಮಾಡಿದ್ದರು. ನಂತರದ ದಿನಗಳಲ್ಲಿ ₹ 3 ಲಕ್ಷ ಸಂಸದರ ಅನುದಾನ ಕೂಡ ಬಿಡುಗಡೆಯಾಯಿತು. ಆದರೂ ಕೆಲಸ ಪೂರ್ಣಗೊಂಡಿಲ್ಲ. ಭೂ ಸೇನಾ ನಿಗಮಕ್ಕೆ ಕಾಮಗಾರಿಯ ಹೊಣೆ ನೀಡಲಾಗಿದ್ದು, ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ.

ADVERTISEMENT

ಭವನಕ್ಕೆ ಕಿಟಕಿ, ಬಾಗಿಲು ಅಳವಡಿಸಿಲ್ಲ. ಹಾಗಾಗಿ ಕಟ್ಟಡ ನಾಯಿಗಳ ಆವಾಸ ಸ್ಥಾನವಾಗಿದೆ. ಹೊರ ಭಾಗದಲ್ಲಿ ಸಿಮೆಂಟ್‌ ಕೆಲಸ, ವಿದ್ಯುತ್‌ ಸಂಪರ್ಕ ಕೆಲಸ ಬಾಕಿ ಇವೆ.

‘ಅಂಬೇಡ್ಕರ್‌ ಸಂಘ ಮತ್ತು ಮಹಿಳಾ ಸಂಘದ ಸಭೆ, ಸಮಾರಂಭಗಳನ್ನು ಮನೆಗಳಲ್ಲಿ ನಡೆಸುತ್ತಿದ್ದೇವೆ. ವಾಚನಾಲಯ, ಕಂಪ್ಯೂಟರ್‌ ತರಬೇತಿ ಕೇಂದ್ರ ಆರಂಭಿಸಬೇಕು ಎಂಬ ನಮ್ಮ ಕನಸು ಈಡೇರಿಲ್ಲ’ ಎಂದು ಅಂಬೇಡ್ಕರ್‌ ಸಂಘದ ಅಧ್ಯಕ್ಷ ಮಾದೇಶ್‌ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.