ನಾಗಮಂಗಲ: ಸಾಂಸ್ಕೃತಿಕ ಸೇವೆ ಸಲ್ಲಿಸಲೆಂದು 43 ವರ್ಷಗಳ ಹಿಂದೆ ಹುಟ್ಟಿಕೊಂಡಿದ್ದ ‘ಕನ್ನಡ ಸಂಘ’ವು ಅಂದಿನಿಂದ ಇಂದಿನವರೆಗೆ ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿದೆ.
1970ರ ದಶಕದಲ್ಲಿ ಪಟ್ಟಣದ ನಾ.ಸು. ನಾಗೇಶ್ ಮತ್ತು ಗೆಳೆಯರು, ಬೇರೆ ಬೇರೆ ನಗರಗಳಲ್ಲಿ ಓದುತ್ತಿದ್ದ ಗೆಳೆಯರು ಬೇಸಿಗೆ ಹಾಗೂ ದಸರಾ ರಜೆಯ ವೇಳೆ ಒಟ್ಟುಗೂಡುತ್ತಿದ್ದರು. ಏನಾದರೂ ಮಾಡಬೇಕು ಎಂಬ ತುಡಿತ ಇವರನ್ನು ಕಾಡುತ್ತಿತ್ತು.
ನಾಗಮಂಗಲದ ಕೆಲವರು ಇದೇ ಸಂದರ್ಭದಲ್ಲಿ ಪ್ರಭಾತ್ ಕಲಾವಿದರ ಅಪರೂಪದ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದರು.
ಇದರಿಂದ ಪ್ರೇರಣೆ ಗೊಂಡ ಇವರು 1972ರಲ್ಲಿ ಕನ್ನಡ ಸಂಘ ಅಸ್ತಿತ್ವಕ್ಕೆ ತಂದರು. ನಾ.ಸು. ನಾಗೇಶ್ ಅವರು ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ.
1972ರಲ್ಲಿ ಸಂಘ ಪ್ರಾರಂಭವಾದಾಗ ಸಂಘದ ಸದಸ್ಯರು ‘ಸಾಂಬ’ ಎಂಬ ನಾಟಕ ಪ್ರದರ್ಶಿಸಿದರು. 1978ರಲ್ಲಿ ಸಂಘದ ಸಂಸ್ಥಾಪ ಅಧ್ಯಕ್ಷ ನಾ.ಸು.ನಾಗೇಶ್ ನಿರ್ದೇಶನದಲ್ಲಿ ‘ದೊರೆ ಈಡಿಪಸ್’ ನಾಟಕ ಮೂಡಿ ಬಂದಿತು. ಹೊಸ ಅಲೆಯ ನಾಟಕಕ್ಕೆ ಇದೇ ಆರಂಭ ಎನ್ನಬಹುದು. ನಂತರದ ದಿನಗಳಲ್ಲಿ ಮಂಡ್ಯ ರಮೇಶ್ ಅವರು ಇಲ್ಲಿನ ಮಕ್ಕಳಿಗೆ ರಂಗಕಲೆ ಬೋಧಿಸಿದರು.
ಕೇವಲ ಪಟ್ಟಣ ಮತ್ತು ನಗರ ಪ್ರದೇಶಗಳಿಗೆ ಸೀಮಿತ ವಾಗಿದ್ದ ರಂಗಭೂಮಿಯನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸುವ ಕೆಲಸವನ್ನು ಸಂಘ ಮಾಡುತ್ತಿದೆ. 23ನೇ ವರ್ಷಾಚರಣೆಗೆ ಡಾ.ಶಿವರಾಮ ಕಾರಂತ ಅವರು ಆಗಮಿಸದ್ದನ್ನು ನನೆದು ಈಗಲೂ ಅಲ್ಲಿನ ಜನರು ಪುಳಕಗೊಳ್ಳುತ್ತಾರೆ.
ಕನ್ನಡ ಸಂಘದ ರಂಗ ಘಟಕವು ಕಳೆದ 10 ವರ್ಷಗಳಿಂದ ಸತತವಾಗಿ ರಾಜ್ಯಮಟ್ಟದ ‘ನಾಗರಂಗ‘ ನಾಟ ಕೋತ್ಸವ ನಡೆಸಿಕೊಂಡು ಬರುತ್ತಿದೆ. ಒಂದು ವಾರ ಕಾಲ ನಡೆಯುವ ನಾಟಕೋತ್ಸವದಲ್ಲಿ ನಾಡಿನ ಹೆಸರಾಂತ ತಂಡಗಳು ಭಾಗವಹಿಸುತ್ತವೆ.
ಉಡುಪಿ ಜಿಲ್ಲೆಯಲ್ಲಿ ಪ್ರತಿ ವರ್ಷ ನಡೆಯುವ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ನಾಗಮಂಗಲ ಪಟ್ಟಣದ ಕನ್ನಡ ಸಂಘ ಸತತವಾಗಿ ಮೂರು ಬಾರಿ ಸೇರಿದಂತೆ ಒಟ್ಟು ನಾಲ್ಕು ಬಾರಿ ಪ್ರಥಮ ಬಹುಮಾನ ಪಡೆದಿದೆ.
ನಾಟಕಗಳು ಅಷ್ಟೇ ಅಲ್ಲದೇ, ಕವಿಗೋಷ್ಠಿ, ವಿಚಾರಸಂಕಿರಣ ಸೇರಿ ದಂತೆ ಕನ್ನಡದ ಹತ್ತು ಹಲವು ಕಾರ್ಯಕ್ರಮ ಆಯೋಜಿಸಲಾಗುತ್ತದೆ.
ಸ್ವಂತ ಕಟ್ಟಡ ಇಲ್ಲ: ಕನ್ನಡ ನಾಡು, ನುಡಿ, ಸಂಸ್ಕೃತಿಗಾಗಿ ಸೇವೆ ಸಲ್ಲಿಸುತ್ತಿರುವ ಕನ್ನಡ ಸಂಘಕ್ಕೆ ಸ್ವಂತ ಕಟ್ಟಡ ಇಲ್ಲ. ಪ್ರಸ್ತುತ ಪಟ್ಟಣ ಪಂಚಾಯಿತಿ ಕಟ್ಟಡವನ್ನು ಬಾಡಿಗೆ ಪಡೆದುಕೊಂಡು ಅಲ್ಲಿಯೇ ಸಂಘದ ಕಚೇರಿ ನಡೆಸಲಾಗುತ್ತಿದೆ. ಸಂಘದ ಎಲ್ಲ ಸದಸ್ಯರು ಸಮ ಪ್ರಮಾಣದ ಹಣ ಹೂಡಿ ಪಟ್ಟಣದ ಹಿರಿಕೆರೆ ಏರಿ ಬಳಿ ನಿವೇಶನ ಖರೀದಿಸಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಕಟ್ಟಡ ನಿರ್ಮಾಣ ಇನ್ನೂ ಸಾಧ್ಯವಾಗಿಲ್ಲ.
ಸದಭಿರುಚಿಯ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದೇವೆ. ಇಂತಹ ಕಾರ್ಯಕ್ರಮಗಳಿಗೆ ಸಂಘದ ಸದಸ್ಯರು ಬೆನ್ನೆಲುಬಾಗಿದ್ದಾರೆ
–ಎಂ.ಎನ್. ಮಂಜುನಾಥ್ ಅಧ್ಯಕ್ಷ, ಕನ್ನಡ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.