ADVERTISEMENT

ಕಬ್ಬು: ಮುಂಗಡ ಹಣ ನಿಗದಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 4:30 IST
Last Updated 22 ಅಕ್ಟೋಬರ್ 2012, 4:30 IST

ಕೃಷ್ಣರಾಜಪೇಟೆ: ಪ್ರತಿ ಟನ್ ಕಬ್ಬಿಗೆ ರೂ.2,400 ಮುಂಗಡ ಹಣ ನಿಗದಿಪಡಿಸಬೇಕು. ಕಳೆದ ವರ್ಷ ಬಾಕಿ ಉಳಿಸಿಕೊಂಡಿರುವ ಹಣವನ್ನು ಮರುಪಾವತಿಸಬೇಕು. ಇಲ್ಲವಾದರೆ ಅ.24 ರಂದು ರಸ್ತೆ ತಡೆ ಚಳವಳಿ ಹಮ್ಮಿಕೊಂಡು ಮೈಸೂರು ದಸರಾ ಮಹೋತ್ಸವಕ್ಕೆ ಅಡ್ಡಿಪಡಿಸಲಾಗುವುದು ಎಂದು ತಾಲ್ಲೂಕಿನ ರೈತ ಮುಖಂಡರು ಎಚ್ಚರಿಸಿದರು.

ಪಟ್ಟಣದಲ್ಲಿ ಭಾನುವಾರ ಸಭೆ ನಡೆಸಿದ ರೈತ ಮುಖಂಡರು, ಡೀಸೆಲ್ ಬೆಲೆ ಹೆಚ್ಚಾದರೆ ಮಧ್ಯರಾತ್ರಿಯಲ್ಲೇ ಬಸ್ ಪ್ರಯಾಣ ದರ ಹೆಚ್ಚಿಸಲು ಸರ್ಕಾರ ಆಸಕ್ತಿ ತೋರುತ್ತದೆ. ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಹೆಚ್ಚಾದರೂ ಕಬ್ಬಿಗೆ ಉತ್ತಮ ಬೆಲೆ ನೀಡುತ್ತಿಲ್ಲ. ಈಗಾಗಲೇ ಸುಮಾರು ಐದು ಬಾರಿ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿರುವ ಸರ್ಕಾರ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡುವುದಾಗಿ ಹೇಳುತ್ತಲೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಪ್ರಸಕ್ತ ಸಾಲಿನ ಕಬ್ಬಿಗೆ ಮುಂಗಡವಾಗಿ ರೂ. 2,500 ಕೊಡಲು ಒಪ್ಪಿದ್ದಾರೆ. ಆದರೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿಲ್ಲ. ಸೋಮವಾರ ಸಂಜೆಯ ಒಳಗೆ ರೈತರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಇಲ್ಲದಿದ್ದಲ್ಲಿ ಅ.24 ರಂದು ನಡೆಯಲಿರುವ ದಸರಾ ಮಹೋತ್ಸವಕ್ಕೆ ಅಡ್ಡಿಪಡಿಸಲಾಗುವುದು ಎಂದರು. 

ಎಂ.ವಿ.ರಾಜೇಗೌಡ, ಮಂಚನಹಳ್ಳಿ ನಾಗಣ್ಣ, ಮರುವನಹಳ್ಳಿ ಶಂಕರ್, ಮುದ್ದುಕುಮಾರ್, ಚುಜ್ಜಲ ಕ್ಯಾತನಹಳ್ಳಿ ಯತಿರಾಜು, ಮುರುಗೇಶ್, ಅಕ್ಕಿಮಂಚನನಹಳ್ಳಿ ಮಹೇಶ್, ಶೆಟ್ಟಿನಾಯಕನಕೊಪ್ಪಲು ಚಂದ್ರಣ್ಣ, ಚಿನ್ನೇನಹಳ್ಳಿ ದೇವರಾಜು ಸಭೆಯಲ್ಲಿದ್ದರು.

ಸಂತಾಪ: ರಾಜ್ಯ ರೈತಸಂಘದ ಮಾಜಿ ಉಪಾಧ್ಯಕ್ಷ ಚಿಕ್ಕಬಳ್ಳಾಪುರ ಡಾ.ವೆಂಕಟರೆಡ್ಡಿ ಅವರ ನಿಧನಕ್ಕೆ ರೈತ ಮುಖಂಡರು ಸಂತಾಪ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.