ADVERTISEMENT

ಕಲಾ ಪ್ರದರ್ಶನಕ್ಕೊಂದು ಸುಸಜ್ಜಿತ ವೇದಿಕೆ ಕೊರತೆ

ಕಲಾವಿದ ಜನಪ್ರತಿನಿಧಿಗಳಿಂದಲೇ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 5:12 IST
Last Updated 10 ಜನವರಿ 2014, 5:12 IST

ಮಂಡ್ಯ: ಇಲ್ಲಿನ ಲೋಕಸಭೆ ಹಾಗೂ ವಿಧಾನಸಭೆ ಜನಪ್ರತಿನಿಧಿಗಳಿಬ್ಬರೂ ದೊಡ್ಡ ಕಲಾವಿದರು. ಮಂಡ್ಯದಲ್ಲಿಯೂ ಸಾಕಷ್ಟು ಚಟುವಟಿಕೆಗಳು ನಡೆಯುತ್ತಿವೆ. ಆದರೆ ಅವರೊಂದಿಗೆ ಸುಜ್ಜಜಿತ ರಂಗ ಮಂದಿರದ ಕೊರತೆ ಇದೆ.

ಪೌರಾಣಿಕ, ಸಾಮಾಜಿಕ ಸೇರಿದಂತೆ ಹಲವಾರು ನಾಟಕಗಳನ್ನು ಆಯೋಜಿಸಲಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತವೆ. ಅವುಗಳ ಪ್ರದರ್ಶನಕ್ಕೆ ಬೇಕಾದ ವೇದಿಕೆಯೊಂದರ ಕೊರತೆ ಅವರನ್ನು ಕಾಡುತ್ತಿದೆ. ಇದು ಹಲವಾರು ಬಾರಿ ಪ್ರೇಕ್ಷಕರಿಗೂ ಕಿರಿಕಿರಿಯುಂಟು ಮಾಡಿದೆ.

ನಗರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಹೆಸರಿನಲ್ಲಿ ಕಲಾ ಮಂದಿರವಿದೆ. 650 ಜನರು ಕೂಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಧ್ವನಿ ಹಾಗೂ ಬೆಳಕಿನ ವ್ಯವಸ್ಥೆ ಸರಿಯಾಗಿಲ್ಲ. ವೇದಿಕೆಯ ಪರದಾ ವ್ಯವಸ್ಥೆಯೂ ಚೆನ್ನಾಗಿಲ್ಲ. ಕೆಲವು ಆಸನಗಳು ಹಾಳಾಗಿದ್ದು, ಅವುಗಳೂ ರಿಪೇರಿ ಕಂಡಿಲ್ಲ.

650 ರಷ್ಟು ಜನರು ಸೇರುವ ಕಲಾ ಮಂದಿರಕ್ಕೆ ಸಣ್ಣದಾದ (ಮಹಿಳೆಯರು ಹಾಗೂ ಪುರುಷರಿಗೆ) ಎರಡು ಶೌಚಾಲಯಗಳಿವೆ. ಅವುಗಳ ಸಾಲುವುದಿಲ್ಲವಾದ್ದರಿಂದ ಗೋಡೆಯ ಮೊರೆ ಹೋಗುವಂತಾಗಿದೆ.

ಅತಿಕ್ರಮಣ: ಕಲಾ ಮಂದಿರದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಆಗಮಿಸುವ ಅತಿಥಿಗಳನ್ನು ಕೂಡಿಸಲು ಎರಡು ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಅವುಗಳನ್ನು ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಗಾಗಿ ಅತಿಕ್ರಮಿಸಿಕೊಳ್ಳಲಾಗಿದೆ. ಹೀಗಾಗಿ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳನ್ನೂ ಕಾರ್ಯಕ್ರಮ ಆರಂಭವಾಗುವವರೆಗೆ ವೇದಿಕೆ ಮುಂಭಾಗದಲ್ಲಿ ಕೂಡಿಸಬೇಕಾದ ಸ್ಥಿತಿ ಇದೆ. ಮಳೆ ಬಂದರೆ ಕೆಲವು ಕಡೆಗಳಲ್ಲಿ ಸೋರುತ್ತದೆ.

ಕಲಾವಿದರ ನಿರ್ಲಕ್ಷ್ಯ: ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅಂಬರೀಷ್‌್್ ಅವರು ತಳಮಟ್ಟದಿಂದ ಕಲಾವಿದರಾಗಿ ಬೆಳೆದವರು. ಇನ್ನು ಸಂಸದೆಯಾಗಿರುವ ರಮ್ಯಾ ಕೂಡಾ ಕಲಾವಿದೆ. ಆದರೂ ಜಿಲ್ಲೆಯಲ್ಲೊಂದು ಸುಸಜ್ಜಿತ ಕಲಾ ಮಂದಿರವಿಲ್ಲ.

ಕಲಾ ಮಂದಿರದಲ್ಲಿ ಕಾರ್ಯಕ್ರಮ ಮಾಡಿದರೆ, ಮಂದಿರದ ಶುಲ್ಕದ ಜತೆಗೆ ಹತ್ತಾರು ಸಾವಿರ ರೂಪಾಯಿಯನ್ನೂ ಖರ್ಚು ಮಾಡಬೇಕಾದ ಸ್ಥಿತಿ ಇದೆ. ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೇಕಾಗುವಂತಹ ಲೈಟಿಂಗ್‌ ಹಾಗೂ ಸೌಂಡ್‌ ಸಿಸ್ಟಮ್‌ ಇಲ್ಲಿಲ್ಲ. ಹಾಗಾಗಿ ಅವುಗಳನ್ನು ಹೊರಗಿನಿಂದಲೇ ತರಿಸಿಕೊಳ್ಳಬೇಕು ಎನ್ನುತ್ತಾರೆ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್‌ಗೌಡ.

ಆಸನಗಳು ಸಾಕಷ್ಟು ಹಾಳಾಗಿವೆ. ಜೊತೆಗೆ ಅತಿಥಿಗಳಿಗೆ ಕೂಡಿಸಲು ಬೇಕಾದ ಕೊಠಡಿಗಳಿಲ್ಲ. ಕಲಾವಿದರ ವಿಶ್ರಾಂತಿಗೂ ಸೂಕ್ತವ್ಯವಸ್ಥೆ ಇಲ್ಲ. ಶೌಚಾಲಯದ ಕೊರತೆಯೂ ಕಾಡುತ್ತಿದೆ. ಕಲಾವಿದರೇ ಆಗಿರುವ ಇಬ್ಬರೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕು ಎಂದು ಅವರು ಆಗ್ರಹಿಸುತ್ತಾರೆ.

ಶುಲ್ಕ ವಿವರ: ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ₨3 ಸಾವಿರ, ಸಾಂಸ್ಕ್ರತಿಕೇತರ ಕಾರ್ಯಕ್ರಮಗಳಿಗೆ 5 ಸಾವಿರ ರೂ, ರಾಜಕೀಯ ಹಾಗೂ ಧಾರ್ಮಿಕ ಕಾಯ್ರಕಮಗಳಿಗೆ ₨10 ಸಾವಿರ ಶುಲ್ಕ ವಿಧಿಸಲಾಗುತ್ತದೆ.

ನಾಲ್ಕು ವರ್ಷದ ಹಿಂದೆ ₨17 ಲಕ್ಷ  ಖರ್ಚು ಮಾಡಿ ಸೌಂಡ್‌, ಲೈಟ್‌್ ಹಾಗೂ ವೇದಿಕೆಯನ್ನು ಆಧುನೀಕರಣಗೊಳಿಸಲಾಗಿದೆ. ಆದರೆ, ಅದರ ಪ್ರಯೋಜನ ಕಲಾವಿದರಿಗೆ ದಕ್ಕಿದಂತೆ ಕಾಣುತ್ತಿಲ್ಲ.

ಕಲಾ ಮಂದಿರ ಆವರಣದಲ್ಲಿ 10 ಶೌಚಾಲಯ, ಒಂದು ಗ್ರಂಥಾಲಯ ಹಾಗೂ ಕಲಾವಿದರಿಗೆ ತಂಗಲು ಎರಡು ಕೊಠಡಿ ಕಾಮಗಾರಿ ಕೈಗೊಳ್ಳಲು ಅಂದಾಜು ಪಟ್ಟಿಯನ್ನು ತಯಾರಿಸಿಕೊಡುವಂತೆ ಲೋಕೋಪ ಯೋಗಿ ಇಲಾಖೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪತ್ರ ಬರೆಯಲಾಗಿದೆ.

ಜತೆಗೆ ಸೌಂಡ್‌್ ಹಾಗೂ ಲೈಟ್‌ ದುರಸ್ತಿಯನ್ನು ಮಾಡಬೇಕಾಗಿದೆ. ಕಲಾ ಮಂದಿರದ ಮೇಲ್ಚಾವಣಿ ಮಳೆ ಬರುವ ಸಂದರ್ಭದಲ್ಲಿ ಸೋರುತ್ತಿದೆ. ಪರಿಣಾಮ ಕಟ್ಟಡ ಹಾಗೂ ಪೀಠೋಪಕರಣಗಳು ಹಾಳಾಗುತ್ತಿವೆ. ಕೂಡಲೇ ಅಂದಾಜುಪಟ್ಟಿ ನೀಡಬೇಕು ಎಂದು ಕೋರಲಾಗಿದೆ.

ಇಲ್ಲಿನ ಜನಪ್ರತಿನಿಧಿಗಳಿಬ್ಬರೂ ಕಲಾವಿದರಿದ್ದಾರೆ. ಕಲಾ ಮಂದಿರದಲ್ಲಿ ಕಾರ್ಯಕ್ರಮಗಳಿಗೂ ಹಾಜರಾಗಿದ್ದಾರೆ. ಆದರೆ, ಕಲಾ ಮಂದಿರದ ಅಭಿವೃದ್ಧಿ ಬಗ್ಗೆ ಮಾತ್ರ ಚಿಂತಿಸದಿರುವುದು ವಿಪರ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.