ADVERTISEMENT

ಕಾನ್ವೆಂಟ್‌ಗೂ ಮಿಗಿಲು ಈ ಅಂಗನವಾಡಿ!

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 7:55 IST
Last Updated 21 ಜುಲೈ 2012, 7:55 IST

ಶ್ರೀರಂಗಪಟ್ಟಣ: `ಸೂ.. ಸೂ.. ಸುಳಿಯಿತು ತಂಗಾಳಿ, ಕೊಕ್ಕೋ ಕೂಗಿತು ಮುಂಗೋಳಿ...~- ಬೆಳಗೊಳ ಗ್ರಾಮದ ಹಿರಿದೇವಿ ಬಡಾವಣೆಯಲ್ಲಿರುವ 3ನೇ ಅಂಗನವಾಡಿ ಕೇಂದ್ರದ ಮಕ್ಕಳು ನಲಿಯುತ್ತಾ ಏಕ ಸ್ವರದಲ್ಲಿ ಈ ಹಾಡು ಹಾಡುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ.

 ಹಾಡು ಹೇಳಿಕೊಡುವುದು, ಅ ಆ ಇ ಈ ತಿದ್ದಿಸುವುದು ಎಲ್ಲೆಡೆ ಸಾಮಾನ್ಯ. ಆದರೆ ಬೆಳಗೊಳದ ಈ ಅಂಗನವಾಡಿ ಕೇಂದ್ರದಲ್ಲಿ ಇಷ್ಟು ಮಾತ್ರವಲ್ಲ; ಕಾನ್ವೆಂಟ್‌ಗಳಲ್ಲಿ ಹೇಳಿಕೊಡುವ ಮಾದರಿಯಲ್ಲಿ ಶಿಶು ಕೇಂದ್ರಿತ ಶಿಕ್ಷಣ ನೀಡಲಾಗುತ್ತಿದೆ. ಇಂಗ್ಲಿಷ್ ಅಕ್ಷರಾಭ್ಯಾಸ, ಚಿತ್ರ ಬರೆಸುವುದು, ಸರಳ ವ್ಯಾಯಾಮ ಮಾಡಿಸುವುದು, ಶೌಚಕಾರ್ಯ, ಬಟ್ಟೆ ತೊಡುವುದನ್ನೂ ಕಲಿಸಲಾಗುತ್ತದೆ.

ಸಮವಸ್ತ್ರ ಕಡ್ಡಾಯ: ಅಂಗನವಾಡಿ ಕೇಂದ್ರ ಎಂದರೆ ಬಡವರ ಮಕ್ಕಳಿಗೆ ಮೀಸಲು ಎಂಬ ಭಾವನೆ ಇದೆ. ಬೆಳಗೊಳದ 3ನೇ ಅಂಗನವಾಡಿ ಕೇಂದ್ರದ ಭೌತಿಕ ಪರಿಸರ ಮತ್ತು ಶಿಕ್ಷಣ ಪದ್ಧತಿ ಕಾನ್ವೆಂಟ್‌ಗಳನ್ನೂ ಮೀರಿಸುವಂತಿದೆ. ಇಲ್ಲಿಗೆ ಬರುವ ಪ್ರತಿ ಮಗುವೂ ಸಮವಸ್ತ್ರ ತೊಡಲೇಬೇಕು. ಕಾಲಿಗೆ ಪಾದರಕ್ಷೆ ಹಾಕಬೇಕು.

ಮಗುವಿಗೂ ಹಾಕಿಸುವ ಟೈ ಬಟ್ಟೆಯದ್ದಲ್ಲ. ಪ್ರಾಣಿ, ಪಕ್ಷಿ, ಗಿಡ, ಮರಗಳ ಚಿತ್ರಗಳುಳ್ಳ ಮಕ್ಕಳ ಮನಸ್ಸು ಅರಳಿಸುವ ಟೈ ಹಾಕಿಸುತ್ತಾರೆ. ಮಕ್ಕಳನ್ನು ನೆಲದ ಮೇಲೆ ಕೂರಿಸುವ ಬದಲು ಕುರ್ಚಿಗಳನ್ನು ಹಾಕಿಸಿದ್ದಾರೆ. ಭಾಗ್ಯಲಕ್ಷ್ಮಿ ಯೋಜನೆ ಫಲಾನುಭವಿಗಳು ಈ ಮಕ್ಕಳಿಗಾಗಿ ಪ್ರೀತಿಯಿಂದ ಖುರ್ಚಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಮಕ್ಕಳ ಮನೋ ವಿಕಾಸಕ್ಕೆ ಪೂರಕವಾದ ಚಿತ್ರಗಳು ಹಾಗೂ ಪ್ಲ್ಯಾಶ್ ಕಾರ್ಡ್‌ಗಳು ಗಮನ ಸೆಳೆಯುತ್ತವೆ. ಪ್ರತಿ ಪ್ಲ್ಯಾಶ್ ಕಾರ್ಡ್‌ಗೆ ಕನ್ನಡ ಭಾಷೆಯ ಮೂಲಾಕ್ಷರ, ಮರ, ಗಿಡ, ಪಕ್ಷಿ, ಪ್ರಾಣಿಗಳ, ಆಟೋಟಗಳ ಚಿತ್ರಗಳನ್ನು ಬರೆದು ತೂಗುಹಾಕಲಾಗಿದೆ. ತರಕಾರಿಗಳು, ವಿವಿಧ ಧರ್ಮಗಳ ಪ್ರಾರ್ಥನಾ ಮಂದಿರಗಳು, ಹೊಲ ಉಳುವ ರೈತ, ಸರ್ಕಾರಿ ಆಸ್ಪತ್ರೆ, ಅಂಬ್ಯುಲೆನ್ಸ್ ಇತರ ಚಿತ್ರಗಳು ಆಕರ್ಷಕವಾಗಿವೆ.

ಕಳೆದ 24 ವರ್ಷಗಳಿಂದ ಈ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಸಿ.ಪದ್ಮಾ ಪೋಷಕರ ಆಶಯದಂತೆ ಅಂಗನವಾಡಿ ರೂಪಿಸಿದ್ದಾರೆ. ಅದಕ್ಕಾಗಿ ಹತ್ತಾರು ಸಾವಿರ ಸ್ವಂತ ಹಣ ಖರ್ಚು ಮಾಡಿದ್ದಾರೆ. `ಕಾನ್ವೆಂಟ್‌ಗಳು ಹಣ ಮಾಡುವ ಕೇಂದ್ರಗಳಾಗಿವೆ. ಬಡ ಪೋಷಕರು ತಮ್ಮ ಮಕ್ಕಳನ್ನು ಅಲ್ಲಿಗೆ ಸೇರಿಸಿ ಓದಿಸುವುದು ಅಸಾಧ್ಯ. ಲಭ್ಯ ಸಂಪನ್ಮೂಲ ಸಂಗ್ರಹಿಸಿ ಖಾಸಗಿ ಶಾಲೆಗೇನೂ ಕಮ್ಮಿ ಇಲ್ಲದಂತೆ ಮಕ್ಕಳಿಗೆ ಕಲಿಸಬೇಕು ಎಂಬುದು ನನ್ನ ಆಸೆ~ ಎಂಬುದು ಪದ್ಮ ಅವರ ಮಾತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.