ADVERTISEMENT

ಕಾಲೇಜು ಕ್ಯಾಂಪಸ್‌ ನಲ್ಲಿ ಹಸಿರ ಸಿರಿ

ಬಲ್ಲೇನಹಳ್ಳಿ ಮಂಜುನಾಥ
Published 21 ಅಕ್ಟೋಬರ್ 2017, 8:27 IST
Last Updated 21 ಅಕ್ಟೋಬರ್ 2017, 8:27 IST

ಕೆ.ಆರ್.ಪೇಟೆ: ಮನಸ್ಸು ಮತ್ತು ಕ್ರಿಯಾಶೀಲತೆ ಇದ್ದರೆ ಯಾವ ಕಾರ್ಯವೂ ಅಸಾಧ್ಯವಲ್ಲ ಎಂಬುದನ್ನು ಕೆ.ಆರ್.ಪೇಟೆಯ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು ಸಾಧಿಸಿ ತೋರಿಸಿದ್ದಾರೆ. ಬೋರೆ ಮೇಲಿನ ಕಾಲೇಜು ಎಂದು ಹೆಸರಾಗಿದ್ದ ಈ ಕಾಲೇಜು ಕ್ಯಾಂಪಸ್ಸಿಗೆ ಹೋದರೆ ಹಸಿರು ಸಿರಿ ನಳನಳಿಸುತ್ತಿರುವುದು ಕಾಣುತ್ತದೆ. ಉತ್ತಮ ಗಾಳಿ, ಬೆಳಕು ಮತ್ತು ಹಸಿರೀಕರಣದಿಂದ ಉತ್ತಮ ಪರಿಸರ ಸೃಷ್ಟಿಯಾಗುತ್ತದೆ.

ಈ ಕಾರಣ ಇಲ್ಲಿಯ ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರ ಪ್ರೋತ್ಸಾಹ, ಎನ್.ಎಸ್.ಎಸ್ ಘಟಕದ ನಿರಂತರ ಚಟುವಟಿಕೆ, ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಶ್ರಮದಿಂದ ಕಾಲೇಜಿನಲ್ಲಿ ಹಸಿರು ಸಮೃದ್ಧಿ ಉಂಟಾಗಿದೆ.

ಕಾಲೇಜು ಆವರಣದಲ್ಲಿ ವಿವಿಧ ಬಗೆಯ 300ಕ್ಕೂ ಹೆಚ್ಚು ಮರಗಿಡಗಳು ಬೆಳೆದು ನಿಂತಿವೆ. 2 ವರ್ಷಗಳ ಹಿಂದೆ ಬರಗಾಲದ ನಡುವೆಯೂ ವಿದ್ಯಾರ್ಥಿಗಳು ಟ್ಯಾಂಕರ್ ನಲ್ಲಿ ನೀರು ತಂದು ಸಂರಕ್ಷಿಸಿದ ಪರಿಣಾಮ ಹೂವು ಮತ್ತು ಹಣ್ಣಿನ ಮರಗಳು ಈಗ ಕಂಗೊಳಿಸುತ್ತಿವೆ. ಈ ಪರಿಸರ ವಿದ್ಯಾರ್ಥಿಗಳ ಓದಿಗೂ ಆಸರೆಯಾಗಿದೆ.

ADVERTISEMENT

ಬಿಸಿಲಿನಲ್ಲಿ ಬಳಲಿ ಬಂದವರಿಗೆ ತಂಪನ್ನೆರೆಯುತ್ತಿದೆ. ಮರ–ಗಿಡಗಳನ್ನು ಬೆಳೆಸುವಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕೊಡುಗೆ ಅಪಾರ. ಕಾಲೇಜಿನ ಪ್ರಾಂಶುಪಾಲ ಕೆ.ಕಾಳೇಗೌಡ, ಎನ್.ಎಸ್.ಎಸ್ ಅಧಿಕಾರಿ ಚಂದ್ರಶೇಖರ್ ಅವರ ದೂರದೃಷ್ಟಿಯ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ಹಸೀರೀಕರಣ ಬರೀ ಮಾತಾಗಬಾರದು, ಕೃತಿಯಾಗಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಾ.ಎಸ್.ಕೃಷ್ಣಮೂರ್ತಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.