ADVERTISEMENT

ಕಾವೇರಿ ಒಡಲಿಗೆ ಕಲುಷಿತ ನೀರು!

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 7:55 IST
Last Updated 6 ಫೆಬ್ರುವರಿ 2012, 7:55 IST

ಶ್ರೀರಂಗಪಟ್ಟಣ: ಪಟ್ಟಣದ ಅಂಬೇಡ್ಕರ್ ಭವನ ಮತ್ತು ವೆಲ್ಲೆಸ್ಲಿ ಸೇತುವೆ ಬಳಿ ಕಲುಷಿತ ನೀರು ಅಡೆತಡೆ ಇಲ್ಲದೆ ಕಾವೇರಿ ನದಿಗೆ ಸೇರುತ್ತಿದೆ.

ಪಟ್ಟಣದ ಹೋಟೆಲ್, ವಸತಿಗೃಹ ಇತರೆಡೆಗಳಿಂದ ಚರಂಡಿ ಮೂಲಕ ಹರಿಯುವ ಕೊಳಚೆ ನೀರು ನದಿಗೆ ಸೇರುತ್ತಿದೆ. ತುಸು ದೂರದ ನಿಮಿಷಾಂಬ ದೇವಾಲಯ ಹಾಗೂ ಕಾವೇರಿ ಸಂಗಮ ಸ್ಥಳಗಳಲ್ಲಿ ಜನರು ಇದೇ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಬಟ್ಟೆ ತೊಳೆಯಲು ಮತ್ತು ಕುಡಿಯಲು ಕೂಡ ನದಿಯ ನೀರನ್ನು ಬಳಸಲಾಗುತ್ತಿದೆ.

ಫೆ.7ರಂದು (ಮಂಗಳವಾರ) ಮಾಘ ಹುಣ್ಣಿಮೆ ಇದ್ದು, ಸಹಸ್ರಾರು ಮಂದಿ ನದಿಯಲ್ಲಿ ಸ್ನಾನ ಮಾಡಲು ಬರುತ್ತಾರೆ. ಹಾಗೆ ಬರುವವರು ಕೊಳಚೆ ನೀರು ಮಿಶ್ರಿತ ನದಿ ನೀರಿನಲ್ಲಿ ಮಜ್ಜನ ಮಾಡಬೇಕಾಗಿದೆ.

  ಕೊಳಚೆ ನೀರು ಬಸಿದು ಹೋಗಲು ಸಿಮೆಂಟ್ ಚರಂಡಿ ನಿರ್ಮಿಸಿರುವ ಸ್ಥಳೀಯ ಪುರಸಭೆ ಕಲುಷಿತ ನೀರು ನದಿಗೆ ಸೇರುವುದನ್ನು ತಡೆಯಲು ವಿಫಲವಾಗಿದೆ. ಇಂಗು ಗುಂಡಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂಬ ಮಾತು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ.
 
ಆದರೆ ಅದು ಕಾರ್ಯಗತವಾಗಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ರಮೇಶ ಬಂಡಿಸಿದ್ದೇಗೌಡ `ಪಟ್ಟಣದಲ್ಲಿ ನಡೆಯುತ್ತಿರುವ ಒಳ ಚರಂಡಿ ಕಾಮಗಾರಿ ಪೂರ್ಣಗೊಂಡ ಬಳಿಕ ಕೊಳಚೆ ನೀರು ನದಿಗೆ ಸೇರುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತು ಅಧಿಕಾರಿಗಳ ಜತೆ ಈಗಾಗಲೇ ಚರ್ಚೆ ನಡೆಸಿದ್ದೇನೆ~ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.