ADVERTISEMENT

ಕಾವೇರಿ ದಡದಲ್ಲಿ ವಿದೇಶಿ ರೈತರ ದಂಡು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2011, 6:40 IST
Last Updated 5 ನವೆಂಬರ್ 2011, 6:40 IST
ಕಾವೇರಿ ದಡದಲ್ಲಿ ವಿದೇಶಿ ರೈತರ ದಂಡು
ಕಾವೇರಿ ದಡದಲ್ಲಿ ವಿದೇಶಿ ರೈತರ ದಂಡು   

ಶ್ರೀರಂಗಪಟ್ಟಣ: ಶುಕ್ರವಾರ ಇಲ್ಲಿಗೆ ಸಮೀಪದ ಚಂದ್ರವನ ಆಶ್ರಮದಲ್ಲಿ, ಕಾವೇರಿ ನದಿ ದಡದಲ್ಲಿ ದೇಶ, ವಿದೇಶಗಳ ನೂರಾರು ರೈತರ ದಂಡೇ ನೆರೆದಿತ್ತು.

ಕಾಂಬೋಡಿಯಾ, ದಕ್ಷಿಣ ಕೊರಿಯಾ, ಕೊಲಂಬಿಯಾ, ಇಂಡೊನೇಶಿಯಾ, ಥೈಲ್ಯಾಂಡ್, ಫಿಲಿಫೈನ್ಸ್, ಮೆಕ್ಷಿಕೊ, ಶ್ರೀಲಂಕಾ, ನೇಪಾಳ ತಿಮೋರ್ ಸೇರಿದಂತೆ ಒಂಬತ್ತು ದೇಶಗಳ ರೈತರು ಒಂದೆಡೆ ಕುಳಿತು ರೈತ ಮತ್ತು ಕೃಷಿ ಪದ್ಧತಿಯ ಸ್ಥಿತಿಗತಿ ಕುರಿತು ಗಹನ ಚರ್ಚೆ ನಡೆಸಿದರು.

ಮೆಕ್ಸಿಕೊ ಕೃಷಿ ವಿಜ್ಞಾನಿ ಪೀಟರ್ ರೊಸೆಟ್ ಸಭೆಯಲ್ಲಿ ಗಮನ ಸೆಳೆದರು. ಕಾಂಬೋಡಿಯಾ, ಜಾಗತೀಕರಣ, ಉದಾರೀಕರಣ ಮತ್ತು ಅವುಗಳಿಂದ ಕೃಷಿ ಕ್ಷೇತ್ರದ ಮೇಲೆ ಉಂಟಾಗಿರುವ ದುಷ್ಪರಿಣಾಮ ಕುರಿತು ಸಂವಾದ ನಡೆಯಿತು. `90ರ ದಶಕದ ನಂತರ ಕೃಷಿ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ರೈತ ಕೃಷಿಯೆಡೆಗೆ ಬೆನ್ನು ಮಾಡಿದ್ದಾನೆ. ವೈಜ್ಞಾನಿಕ ಬೆಲೆಗೆ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ~ ಎಂದು ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.

  ಲಾ-ವಿಯಾ-ಕ್ಯಾಂಪಸೀನಾ (ರೈತ ಮಾರ್ಗ) ಎಂಬ ಅಂತರರಾಷ್ಟ್ರೀಯ ಒಕ್ಕೂಟ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಜಾಗತಿಕ ತಾಪಮಾನ ಏರಿಕೆ ಪರಿಣಾಮ ಕೃಷಿ ಕ್ಷೇತ್ರದ ಮೇಲೆ ಅಗಾಧ ಪರಿಣಾಮ ಬೀರುತ್ತಿದೆ. ಅತಿವೃಷ್ಟಿ, ಅನಾವೃಷ್ಟಿಗಳು ಸಂಭವಿಸುತ್ತಿವೆ. ಓಜೋನ್ ಪದರ ಅಪಾಯದ ಅಂಚಿನಲ್ಲಿದೆ. ಈ ಎಲ್ಲ ದುಷ್ಪರಿಣಾಮಗಳ ತಡೆಗೆ ತುರ್ತು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದರು.

ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ರೈತಕುಲ ಸಂಕಷ್ಟಕ್ಕೆ ಸಿಲುಕಿದೆ. ಆಹಾರ ಭದ್ರತೆಗಾಗಿ ಎಲ್ಲೆಡೆ ಹೊಸ ಆಲೋಚನೆ ನಡೆಸಬೇಕಾದ ಅಗತ್ಯವಿದೆ. ರೈತರಿಗೆ ಮಾರಕವಾಗಿರುವ ಸರ್ಕಾರದ ಭೂಸ್ವಾಧೀನ ಕಾಯಿದೆ ಕುರಿತು ಸುಪ್ರೀಂ ಕೋರ್ಟ್ ರೈತ ಕುಲದ ಪರ ತೀರ್ಪು ನೀಡಿದೆ.
 
ರೈತರ ಜಮೀನು ಕಸಿದುಕೊಂಡು ನಗರೀಕರಣಕ್ಕೆ ಬಳಸುವ ವ್ಯವಸ್ಥೆ ವಿರುದ್ಧ ರೈತಸಂಘ ದನಿ ಎತ್ತುತ್ತಿದೆ. ಜಾಗತಿಕ ಮಟ್ಟದಲ್ಲಿ ರೈತರು ಒಗ್ಗೂಡಿ ಹೋರಾಟ ನಡೆಸದಿದ್ದರೆ ಪರಿಸ್ಥಿತಿ ಮತ್ತಷ್ಟು ಅಧೋಗತಿಗೆ ತಲುಪಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

  ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, `ರೈತ ಈ ನೆಲದ ಸಂಸ್ಕೃತಿ, ಪರಂಪರೆಯ ಪ್ರತೀಕ. ಅನ್ನ ನೀಡುವ ರೈತನನ್ನು ಕೈ ಹಿಡಿದು ಎತ್ತಬೇಕು ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಕೋಣಸಾಲೆ ನರಸರಾಜು, ಮುಖಂಡ ಕೆ.ಎಸ್.ನಂಜುಂಡೇಗೌಡ, ನಂದಿನಿ ಜಯರಾಂ, ಶೈಲಜಾ ನಂಜುಂಡೇಗೌಡ, ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಲಿಂಗಣ್ಣ, ಪಚ್ಚೆ ನಂಜುಂಡಸ್ವಾಮಿ, ಪಿ.ಕೆಂಪೇಗೌಡ, ಹನಿಯಂಬಾಡಿ ನಾಗರಾಜು, ಮಂಜೇಶ್‌ಗೌಡ, ಪಾಂಡು, ನಾಗೇಂದ್ರಸ್ವಾಮಿ ಇತರರು ಇದ್ದರು.

`ರೈತ ಸಂಘಕ್ಕೆ ರಾಜಕಾರಣ ಅನಿವಾರ್ಯ~
ಶ್ರೀರಂಗಪಟ್ಟಣ: ಜನತಂತ್ರ ವ್ಯವಸ್ಥೆಯಲ್ಲಿ ಚಳವಳಿ ಮತ್ತು ರಾಜಕಾರಣ ಒಂದೇ ಆಗಿರುವುದರಿಂದ ರೈತ ಚಳವಳಿಗಾರರು ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ವಹಿಸುವ ಅನಿವಾರ್ಯತೆ ಇದೆ ಎಂದು ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಪ್ರತಿಪಾದಿಸಿದರು.

ಶುಕ್ರವಾರ ಇಲ್ಲಿಗೆ ಸಮೀಪದ ಚಂದ್ರವನ ಅಶ್ರಮದಲ್ಲಿ `ಲಾ-ವಿಯಾ-ಕ್ಯಾಂಪಸೀನಾ~ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಅಂತರರಾಷ್ಟ್ರೀಯ ರೈತ ಚಳವಳಿಗಳ ಒಕ್ಕೂಟದಲ್ಲಿ ಕೂಡ ಈ ಚರ್ಚೆ ನಡೆದಿದೆ. ಸಹಜ ಮತ್ತು ಸುಸ್ಥಿರ ಕೃಷಿ ಪದ್ಧತಿ, ಬೀಜ ಸ್ವಾತಂತ್ರ್ಯ ಇತರ ರೈತರ ಹಕ್ಕುಗಳಿಗೆ ಹೋರಾಟ ನಡೆಸಬೇಕಾದರೆ ರಾಜಕೀಯ ಶಕ್ತಿಯೂ ಬೇಕು. ಆದರೆ ಇಂದಿನ ಹಣಬಲ ತೋಳ್ಬಲದ ರಾಜಕಾರಣದಲ್ಲಿ ನೈಜ ಹೋರಾಟಗಾರರಿಗೆ ಹಿನ್ನಡೆ ಆಗುತ್ತಿದೆ ಎಂದು ವಿಷಾದಿಸಿದರು.

ಮುಂದಿನ ತಲೆಮಾರಿಗಾದರೂ ಸತ್ಯದ ಅರಿವಾಗಿ ರಾಜಕೀಯವಾಗಿ ರೈತ ಸಂಘಟನೆ ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.