ADVERTISEMENT

ಕೀಲು ಕುದುರೆ ಕಲಾರಾಧಕ ಜಯಣ್ಣ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 9:55 IST
Last Updated 20 ಮಾರ್ಚ್ 2011, 9:55 IST

ಮದ್ದೂರು: ಯಾವುದೇ ಜಾನಪದ ಕಲಾ ಮೆರವಣಿಗೆಯಲ್ಲಿ ತಟ್ಟನೇ ಸೆಳೆಯುವ ‘ಕೀಲು ಕುದುರೆ’ ಜಾನಪದ ಕಲೆಯು ಈಚೆಗೆ ಪ್ರೋತ್ಸಾಹಿಸುವವರ ಉಪೇಕ್ಷೆಯಿಂದ ಹಾಗೂ ಕಲಿಯುವವರ ನಿರ್ಲಕ್ಷ್ಯದಿಂದ ಅಳವಿನಂಚಿನತ್ತ ಸಾಗುತ್ತಿದೆ. 

ಜಿಲ್ಲೆಯ ಏಕೈಕ ಮರಗಾಲು ಕೀಲು ಕುದುರೆ ಕಲಾವಿದರಾಗಿ ‘ರಾಜ’ ಪಾತ್ರದ ಭೀಮನಕೆರೆ ಜಯಣ್ಣ ಕಲೆಯ ಉಳಿವಿಗೆ ಶ್ರಮಿಸುತ್ತಿದ್ದಾರೆ. ಇವರ ತಂಡದಲ್ಲಿ ಹಂಗರಪುರ ಪ್ರಭು ‘ರಾಣಿ’ ಪಾತ್ರದಲ್ಲಿ, ಗೊಲ್ಲರದೊಡ್ಡಿ ಮರಂಗಯ್ಯ ಹಾಗೂ ರಂಗಯ್ಯ ‘ಕೋಡಂಗಿ’ ಪಾತ್ರ ನಿರ್ವಹಿಸುತ್ತಿದ್ದಾರೆ.

ಕೀಲು ಕುದುರೆ ವೇಷ, ಹಾಕಿದ ಬಣ್ಣಕ್ಕೆ ಮೋಸವಿಲ್ಲ. ಮೂರು ಹೊತ್ತಿನ ತುತ್ತಿಗೆ ಕಷ್ಟವಾಗಿಲ್ಲ. ಜಯಣ್ಣ ಅವರಿಗೆ ಇದೀಗ 42 ಹರೆಯ. ತಂದೆ ಪೂಜಾರಿ ಕೆಂಪಯ್ಯ ಅವರು ಸ್ವತಃ ಪೂಜಾ ಕುಣಿತದ ಕಲಾವಿದರು. ಇವರಿಂದ ಪ್ರೇರಣೆ ಪಡೆದ ಜಯಣ್ಣ 12ವಯಸ್ಸಿಗೆ ಜಾನಪದ ಕಲೆಯತ್ತ ಆಕರ್ಷಿತರಾದರು. ಆರಂಭದಲ್ಲಿ ಕೋಲಾಟ, ಪೂಜಾಕುಣಿತ ಕಲೆ ಕಲಿತ ಭೀಮಣ್ಣ ಅವರಿಗೆ ಕೈಹಿಡಿದಿದ್ದು ಮರಗಾಲು ಕೀಲು ಕುದುರೆ ಕಲೆ. ಗುರು ಯಡಹಳ್ಳಿಸಿದ್ದಪ್ಪ ಅವರಿಂದ ಕಲಿತ ಈ ಕಲೆ ಇದೀಗ ಇವರ ಬದುಕಿಗೆ ಆಸರೆ.

ಕಾಲಿಗೆ ಮರಗಾಲು ಕಟ್ಟಿಕೊಂಡು ಬೆಳಿಗ್ಗೆಯಿಂದ ಸಂಜೆಯವರೆಗೆ ಕುಣಿಯಬಲ್ಲ ಶಕ್ತಿ ಇದೆ. ಮೈಸೂರು ದಸರಾ ಮೆರವಣಿಗೆ ಸೇರಿದಂತೆ ರಾಜ್ಯ ದಲಿತ ಸಂಗೀತ ಕಲೋತ್ಸವ ಸೇರಿದಂತೆ ಪಕ್ಕದ ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲೂ ಇವರು ತಮ್ಮ ಪ್ರತಿಭೆ ಮೆರೆದಿದ್ದಾರೆ. ಪ್ರತಿವರ್ಷ ನಡೆಯುವ ಜಾನಪದ ಲೋಕೋತ್ಸವ, ಆದಿಚುಂಚನಗಿರಿ ಜಾನಪದ ಕಲಾ ಉತ್ಸವದಲ್ಲಿ ಭಾಗಿಯಾಗುತ್ತಾರೆ. ಇದುವರೆಗೆ 300ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ.

‘ನಮ್ಮ ಬಳಿ ಇರುವ ಕೀಲು ಕುದುರೆ ಆಕರ್ಷಕವಾಗಿಲ್ಲ. ಆಕರ್ಷಕವಾಗಿರುವ ಕುದುರೆ ಸಿದ್ಧಪಡಿಸುವಷ್ಟು ಆರ್ಥಿಕ ಶಕ್ತಿ ನನಗಿಲ್ಲ. ಇದಕ್ಕಾಗಿ  ಕನ್ನಡ ಸಂಸ್ಕೃತಿ ಇಲಾಖೆ, ಜಾನಪದ ಆಕಾಡೆಮಿಗೆ ಮನವಿಮಾಡಿದರೂ ಪ್ರಯೋಜನವಾಗಿಲ್ಲ. ಮುರಿದಿರುವ ಕುದುರೆಗೆ ತೇಪೆ ಹಚ್ಚಿ ಪ್ರದರ್ಶನ ನೀಡುತ್ತಿದ್ದೇವೆ’ ಎಂದು ನೋವು ತೋಡಿಕೊಳ್ಳುತ್ತಾರೆ.

ತಾಯಿ ಮರಮ್ಮ, ಪತ್ನಿ ಶಶಿಕಲಾ, ಇಬ್ಬರು ಪುತ್ರರ ಪುಟ್ಟ ಸಂಸಾರ. ತಾವು ಕಲಿತ ಕಲೆಯನ್ನು ಕಿರಿಯರಿಗೆ ಧಾರೆಯೆರೆಯುವ ಧಾವಂತದಲ್ಲಿದ್ದಾರೆ. ಆದರೆ ಯಾರು ಮುಂದೆ ಬಾರದಿರುವುದು ಅವರನ್ನು ಬಾಧಿಸುತ್ತಿದೆ.  ಸರ್ಕಾರ ಇಂಥ ಕಲಾವಿದರನ್ನು ಗೌರವಿಸುವ ಕೆಲಸಕ್ಕೆ ಮುಂದಾಗ ಬೇಕು. ಇದು, ಕಲೆಯ ಉಳಿವಿಗೂ ನೆರವಾದಿತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.