ADVERTISEMENT

ಕುಡಿಯುವ ನೀರು ಕಾಮಗಾರಿ ಪೂರ್ಣಗೊಳಿಸಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 5:40 IST
Last Updated 4 ಜುಲೈ 2012, 5:40 IST
ಕುಡಿಯುವ ನೀರು ಕಾಮಗಾರಿ ಪೂರ್ಣಗೊಳಿಸಿ
ಕುಡಿಯುವ ನೀರು ಕಾಮಗಾರಿ ಪೂರ್ಣಗೊಳಿಸಿ   

ಮಂಡ್ಯ: ಕುಡಿಯುವ ನೀರಿನ ಕಾಮಗಾರಿಗಳನ್ನು ಪ್ರಥಮ ಆದ್ಯತೆ ಮೇಲೆ ಪೂರ್ಣಗೊಳಿಸಬೇಕು ಎಂದು ಸಂಸದ ಎನ್. ಚಲುವರಾಯ ಸ್ವಾಮಿ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೇಂದ್ರ ಗ್ರಾಮೀಣಾಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಯೋಜನೆಗಳಿಗೆ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಲ್ಲ ತಾಲ್ಲೂಕುಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಹಾಗೂ ಸಂಬಂಧಿಸಿದ ಜನಪ್ರತಿನಿಧಿಗಳೊಂದಿಗೂ ಚರ್ಚೆ ನಡೆಸಬೇಕು ಎಂದು ಸಲಹೆ ಮಾಡಿದರು.

ಜಲಾನಯನ: ಈ ಯೋಜನೆಯಡಿ 34 ಯೋಜನೆಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಅದರಲ್ಲಿ 67.38 ಕೋಟಿ ರೂಪಾಯಿ ವೆಚ್ಚದಲ್ಲಿ 13 ಯೋಜನೆಗಳಿಗೆ ಮಂಜೂರಾತಿ ಸಿಕ್ಕಿದೆ. ಕಾಮಗಾರಿಗಳನ್ನು ಆರಂಭಿಸಲಾಗಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯಡಿ ಈ ಬಾರಿ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿ ಮಹಾಂತೇಶ ವಿವರಿಸಿದರು.

ಮಳೆ ಆಶ್ರಿತ ಪ್ರದೇಶಗಳಲ್ಲಿ ಚೆಕ್ ಡ್ಯಾಂ ಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಿರಿ. ಗುಣಮಟ್ಟ ಕಾಯ್ದುಕೊಳ್ಳಬೇಕು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸಂಸದ ಎನ್. ಚಲುವರಾಯ ಸ್ವಾಮಿ ಸೂಚಿಸಿದರು.

ಕೇಂದ್ರದ ಗ್ರಾಮೀಣಾಭಿವೃದ್ಧಿ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸದಸ್ಯ ಕಾರಸವಾಡಿ ಮಹದೇವ್ ಮಾತನಾಡಿ, ನೈರ್ಮಲ್ಯ ಮಳಿಗೆಗಳನ್ನು ನಿರ್ಮಿಸಿಯೇ ಇಲ್ಲ. ಕಳೆದ ಸಭೆಯಲ್ಲೂ ಈ ಕುರಿತು ಕೇಳಿದ್ದೆ. ಇಲ್ಲಿಯವರೆಗೆ ಮಾಹಿತಿ ನೀಡಿಲ್ಲ. ಹಣ ದುರುಪಯೋಗ ಆಗಿದೆ ಎಂದು ದೂರಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಸಿ. ಜಯಣ್ಣ ಮಾತನಾಡಿ, ಕಾಮಗಾರಿಗಳ ಪರಿಶೀಲನೆ ಮಾಡಲಾಗುವುದು. ನಿರ್ಮಾಣ ಮಾಡಿರದಿದ್ದರೆ ಹಣ ವಸೂಲಿ ಮಾಡಲಾಗುವುದು ಎಂದು ಹೇಳಿದರು.

ಸಂಸದ ಚಲುವರಾಯ ಸ್ವಾಮಿ ಮಾತನಾಡಿ, ಇಂದಿರಾ ಆವಾಸ್ ಯೋಜನೆಯಡಿ ಏಕೆ ಮನೆಗಳು ನಿರ್ಮಾಣವಾಗಿಲ್ಲ. ಫಲಾನುಭವಿಗಳಿಗೆ ಆಸಕ್ತಿ ಇಲ್ಲವೇ ಎಂಬುದನ್ನು ಪರಿಶೀಲಿಸಿ, ಅವರಿಗೆ ಬೇಡದಿದ್ದರೆ ಬೇರೆಯವರಿಗೆ ಹಂಚಲು ಕ್ರಮಕೈಗೊಳ್ಳಿ ಎಂದು ಸೂಚಿಸಿದರು. ಸ್ವರ್ಣಜಯಂತಿ ರೋಜಗಾರ್, ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು.

ಶಾಸಕರಾದ ಎಂ.ಶ್ರೀನಿವಾಸ್, ಬಿ. ರಾಮಕೃಷ್ಣ, ರಮೇಶಬಾಬು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಟಿ. ಸುರೇಶ್, ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಮತ್ತಿತರರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.