ADVERTISEMENT

ಕೃಷಿ ತಂತ್ರಜ್ಞಾನದ ಮಂಗಳಗೌರಮ್ಮ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2017, 5:38 IST
Last Updated 23 ಡಿಸೆಂಬರ್ 2017, 5:38 IST
ಹಿಪ್ಪುನೇರಳೆ ಗಿಡದ ಜೊತೆ ಬೇವುಕಲ್ಲು ಗ್ರಾಮದ ಮಹಿಳೆ ಮಂಗಳಗೌರಮ್ಮ
ಹಿಪ್ಪುನೇರಳೆ ಗಿಡದ ಜೊತೆ ಬೇವುಕಲ್ಲು ಗ್ರಾಮದ ಮಹಿಳೆ ಮಂಗಳಗೌರಮ್ಮ   

ಮಂಡ್ಯ: ಮೇಲುಕೋಟೆ ರಸ್ತೆಯಲ್ಲಿರುವ ಬೇವುಕಲ್ಲು ಗ್ರಾಮದ ‘ಮಂಗಳಗೌರಮ್ಮ’ ಈ ವರ್ಷದ ಅತ್ಯತ್ತಮ ರೈತ ಮಹಿಳೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತೋಟಗಾರಿಕೆ ಬೆಳೆ, ರಸಾವರಿ ಬೇಸಾಯ, ಹಿಪ್ಪುನೇರಳೆ ಬೆಳೆಯಲ್ಲಿ ಮರಬೇಸಾಯ ಪದ್ಧತಿ ಅಳವಡಿಕೆ, ಕೃತಿ ತಂತ್ರಜ್ಞಾನ ಬಳಕೆಯಲ್ಲಿ ಪ್ರಸಿದ್ಧಿ ಪಡೆದಿರುವ ಅವರು ಜಿಲ್ಲೆಯ ಮಾದರಿ ರೈತ ಮಹಿಳೆಯಾಗಿದ್ದಾರೆ.

ಪಿಯುಸಿ ಕಲಿತಿರುವ ಮಂಗಳಗೌರಮ್ಮ ತಮ್ಮ ವಿದ್ಯೆಯನ್ನು ಕೃಷಿಗೆ ಬಳಸಿಕೊಂಡಿದ್ದಾರೆ. ಜೊತೆಗೆ ಎಂ.ಎ ಓದಿ ಕೆಲಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಈಗ ಸಂಪೂರ್ಣ ಕೃಷಿಕರಾಗಿರುವ ಪತಿ ಶಿವಪ್ರಸಾದ್‌ ಬೆಂಬಲ ಅವರಿಗಿದೆ. ತೋಟಗಾರಿಕೆ ಬೆಳೆಯನ್ನು ತಂತ್ರಜ್ಞಾನ ಬಳಸಿ ಕೃಷಿ ಮಾಡುತ್ತಿರುವ ಇವರು ಮಾದರಿ ರೈತ ದಂಪತಿಯಾಗಿ ಹೊರಹೊಮ್ಮಿದ್ದಾರೆ.

ಕಬ್ಬು ಹಾಗೂ ಭತ್ತವನ್ನು ಹೊರತುಪಡಿಸಿ ಮಿಕ್ಕೆಲ್ಲಾ ಬೆಳೆ, ತರಕಾರಿ ಬೆಳೆದಿದ್ದಾರೆ. ಟ್ರ್ಯಾಕ್ಟರ್‌ ತಿರುಗಲು ಅನುಕೂಲವಾಗಲು 8X5 ಅಡಿ ಅಳತೆಯಲ್ಲಿ ಬಾಳೆ ಬೆಳೆದಿದ್ದಾರೆ. ಅಂತರಬೆಳೆಯಾಗಿ ಕಲ್ಲಂಗಡಿ, ಟೊಮೆಟೊ ಬೆಳೆದಿದ್ದಾರೆ. ನೂರು ತೆಂಗಿನ ಮರಗಳ ತೋಟದಲ್ಲಿ ಮಿಶ್ರಬೆಳೆ ಬೆಳಿದಿದ್ದಾರೆ. ಮರ ಹತ್ತುವ ಯಂತ್ರ, ಕೀಟ ನಾಶವನ್ನು ಸಿಂಪಡಣೆ ಯಂತ್ರ, ತೋಟಗಾರಿಕೆ ಇಲಾಖೆ ನೀಡುವ ಪ್ಯಾಕ್‌ ಹೌಸ್‌ನಿಂದ ಅವರು ಕೃಷಿ ಕಾರ್ಯ ಮುಂದುವರಿಸಿದ್ದಾರೆ.

ADVERTISEMENT

ಮರ ಬೇಸಾಯ: ರೇಷ್ಮೆ ಇಲಾಖೆ ಹಿಪ್ಪುನೇರಳೆ ಬೆಳೆಯಲು ಹೊಸದಾಗಿ ಆವಿಷ್ಕಾರ ಮಾಡಿರುವ ‘ಮರಬೇಸಾಯ’ ಪದ್ಧತಿಯನ್ನು ಮಂಗಳಗೌರಮ್ಮ– ಶಿವಪ್ರಸಾದ್‌ ದಂಪತಿ ಅಳವಡಿಸಿಕೊಂಡಿದ್ದಾರೆ.

ನಾಲ್ಕು ಅಡಿ ಎತ್ತರದ ಗಿಡ ಬೆಳೆಸಿ, ಹಿಪ್ಪು ನೇರಳೆ ಮರವಾಗುವವರೆಗೆ ಪೋಷಿಸಿದ್ದಾರೆ. ನೆಲದಲ್ಲೇ ಹಿಪ್ಪುನೇರಳೆ ಇದ್ದರೆ ರೋಗ ಹರಡುವ ಅಪಾಯ ಇರುತ್ತದೆ. ಹೀಗಾಗಿ ಅದನ್ನು ತಪ್ಪಿಸಲು ಮರಬೇಸಾಯ ಪದ್ಧತಿ ಅಳವಡಿಸಿಕೊಂಡು ಕೃಷಿ ಮಾಡುತ್ತಿದ್ದಾರೆ.

ರಸಾವರಿ ಪದ್ಧತಿ : ಜಮೀನಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿರುವ ಅವರು ರಸಾವರಿ ಪದ್ಧತಿ ಮೂಲಕ ಬೆಳೆಗಳಿಗೆ ಪೋಷಕಾಂಶಗಳನ್ನು ಉಣಬಡಿಸುತ್ತಾರೆ. ಹನಿ ನೀರಾವರಿ ಮೂಲಕವೇ ರಾಸಾಯನಿಕ ಗೊಬ್ಬರ, ಕೀಟನಾಶಕವನ್ನು ಸಿಂಪಡಣೆ ಮಾಡುವುದಕ್ಕೆ ರಸಾವರಿ ಪದ್ಧತಿ ಎಂದು ಕರೆಯುವರು. ಇಂತಹ ನೂತನ ಪದ್ಧತಿಯನ್ನು ಮಂಗಳಗೌರಮ್ಮ ದಂಪತಿ ಅಳವಡಿಸಿಕೊಂಡು ಕೃಷಿ ಮಾಡುತ್ತಿದ್ದಾರೆ. ತಮ್ಮ ನಾಲ್ಕು ಎಕರೆ ಜಮೀನನ್ನು ಸಂಪೂರ್ಣವಾಗಿ ಬಳಸಿಕೊಂಡಿರುವ ಅವರು ಬದುವಿನಲ್ಲಿ ತೇಗ, ತೆಂಗು ಮುಂತಾದ ಮರ ಬಳೆಸಿದ್ದಾರೆ. 100 ತೇಗದ ಮರಗಳನ್ನು ಅವರು ಬೆಳೆಸಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದ ಹೊಸ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳಲು ರೈತರು ಶಿಕ್ಷಣವಂತರಾಗಿಬೇಕು. ಸಮಗ್ರ ಕೃಷಿ ಪದ್ಧತಿ, ಉಪಕಸುಬು, ತಂತ್ರಜ್ಞಾನಗಳನ್ನು ಅರ್ಥ ಮಾಡಿಕೊಳ್ಳಲು ರೈತರು ವಿದ್ಯೆ ಕಲಿತಿರಬೇಕು. ವಿದ್ಯಾವಂತರು ಕೃಷಿ ಕ್ಷೇತ್ರಕ್ಕೆ ಹಿಂದಿರುಗಿ ಬರಬೇಕು’ ಎಂದು ರೈತ ಶಿವ ಪ್ರಸಾದ್‌ ಹೇಳಿದರು.

‘ಕೃಷಿ ಉದ್ಯಮವಾಗಿ ಬೆಳೆಯಬೇಕು. ಸಂಪೂರ್ಣ ಯಾಂತ್ರೀಕೃತ ಕೃಷಿಯಿಂದ ರೈತರಿಗೆ ಆರ್ಥಿಕವಾಗಿ ಅನುಕೂಲವಿದೆ. ಉಪಕಸುಬುಗಳಾದ ಹೈನುಗಾರಿಕೆ, ರೇಷ್ಮೆ, ಕುರಿ, ಮೇಕೆ, ಕೋಳಿ,ಹಂದಿ, ಮೀನು ಸಾಗಣೆ ಬಗ್ಗೆ ರೈತರಿಗೆ ವೈಜ್ಞಾನಿಕ ಅರಿವು ಇರಬೇಕು’ ಎಂದು ಮಂಗಳಗೌರಮ್ಮ ತಿಳಿಸಿದರು.

ಬೇವುಕಲ್ಲು ರಸ್ತೆಯಲ್ಲೇ ವಿ.ಸಿ.ಫಾರಂ ಇರುವ ಕಾರಣ ಅಲ್ಲಿಯ ಕೃಷಿ ವಿಜ್ಞಾನಿಗಳ ಸಹಾಯವನ್ನು ಈ ರೈತದಂಪತಿ ಪಡೆದಿದ್ದಾರೆ. ಪ್ರತಿ ಬಾರಿಯೂ ಹೊಸ ಬೆಳೆ ಬೆಳೆಯುವ ಮೊದಲು ಕೃಷಿ ತಜ್ಞರ ಮಾರ್ಗದರ್ಶನ ಪಡೆಯುತ್ತಾರೆ. ಈಚೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಕೃಷಿ ಮೇಳದಲ್ಲಿ ಮಂಗಳಗೌರಮ್ಮ ಅವರಿಗೆ ಅತ್ಯುತ್ತಮ ರೈತಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.