ADVERTISEMENT

ಕೃಷಿ ಪದವೀಧರರು ಸ್ವ–ಉದ್ದಿಮೆ ಆರಂಭಿಸಿ

ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ: ವಿ.ಸಿ ಫಾರಂನ ಡೀನ್ ಡಾ.ಶಿವಶಂಕರ್ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಮೇ 2018, 9:17 IST
Last Updated 19 ಮೇ 2018, 9:17 IST

ಮಂಡ್ಯ: ಕೃಷಿ ಪದವೀಧರರು ಇನ್ನೊಬ್ಬರಲ್ಲಿ ಕೆಲಸ ಬೇಡದೇ ಸ್ವಂತ ಉದ್ದಿಮೆ ಆರಂಭಿಸಿ ಇತರರಿಗೆ ಕೆಲಸ ನೀಡುವಂತಾಗಬೇಕು ಎಂದು ಕೃಷಿ ಮಹಾವಿದ್ಯಾಲಯ ವಿ.ಸಿ ಫಾರಂನ ಡೀನ್ ಡಾ.ಶಿವಶಂಕರ್ ಹೇಳಿದರು.

ಮಂಡ್ಯ ಕೃಷಿ ಮಹಾವಿದ್ಯಾಲಯ ವಿ.ಸಿ ಫಾರಂನಲ್ಲಿ ನಡೆದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಅವರು ಮಾತನಾಡಿದರು.

ಕೃಷಿ ಪದವಿ ಪಡೆದ ನಂತರ ವಿದ್ಯಾರ್ಥಿಗಳು ಸ್ವಯಂ ಉದ್ದಿಮೆ ಆರಂಭಿಸಿ ಬೇರೆಯವರಿಗೆ ಉದ್ಯೋಗ ನೀಡಬೇಕು. ಆಗ ವಿದ್ಯಾರ್ಥಿಗಳು ಪದವಿ ಪಡೆದಿದ್ದಕ್ಕೂ ಸಾರ್ಥಕತೆ ದೊರೆಯುತ್ತದೆ. ಪದವಿ ಪಡೆದ ಎಲ್ಲ ವಿದ್ಯಾರ್ಥಿಗಳು ಸ್ವ ಉದ್ದಿಮೆ ಪ್ರಾರಂಭಿಸಿದರೆ, ತಮ್ಮ ಉದ್ದಿಮೆ ಬೆಳವಣಿಗೆ ಜೊತೆಗೆ ಇತರರ ಬೆಳವಣಿಗೆಗೂ ಸಹಕಾರ ನೀಡಿದಂತಾಗುತ್ತದೆ ಎಂದರು.

ADVERTISEMENT

ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಷಿ ಕಾರ್ಯಾನುಭವ ನೀಡುವುದಕ್ಕಾಗಿ ಕೇಂದ್ರ ಸರ್ಕಾರವು ಅವರ ಪಠ್ಯಕ್ರಮದಲ್ಲಿ ಬದಲಾವಣೆ ಮಾಡಿ ‘ಸ್ಟೂಡೆಂಟ್ ರೆಡಿ’ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಅನುಸಾರ ಕೃಷಿ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಮೂರು ತಿಂಗಳ ಕಾಲ ಗ್ರಾಮೀಣ ವಾಸ್ತವ್ಯದೊಂದಿಗೆ ಕೃಷಿ ತಾಂತ್ರಿಕ ಕೌಶಲಗಳನ್ನು ರೈತರಿಗೆ ತಲುಪಿಸುವ ಕೆಲಸ ಮಾಡಬೇಕು. ಜೊತೆಗೆ ರೈತರ ಅನುಭವಗಳನ್ನು ವಿದ್ಯಾರ್ಥಿಗಳು ಸಲಹೆಯಾಗಿ ಪಡೆಯಬಹುದು’ ಎಂದು ಹೇಳಿದರು.

ಕೃಷಿ ವಿವಿ ಉಪಕುಲಪತಿ ಡಾ.ಎಂ.ಎಸ್.ನಟರಾಜು, ಡಾ.ಕೆ.ಪಿ.ಚಿನ್ನಸ್ವಾಮಿ, ಡಾ.ವೆಂಕಟೇಶ್, ಡಾ.ರಘುಪತಿ, ಡಾ.ಎಚ್.ಟಿ.ನಾಗರಾಜು, ವಿಜಯ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.