ADVERTISEMENT

ಕೆಆರ್‌ಎಸ್‌ನಿಂದ ನದಿಗೆ ನೀರು ಬಿಡಲು ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 10:25 IST
Last Updated 8 ಫೆಬ್ರುವರಿ 2011, 10:25 IST

ಶ್ರೀರಂಗಪಟ್ಟಣ: ಫೆ.18ರಂದು ನಡೆಯುವ ಮಾಘ ಹುಣ್ಣಿಮೆಯಂದು ಗಂಜಾಂ ನಿಮಿಷಾಂಬ ದೇವಾಲಯಕ್ಕೆ ಅಪಾರ ಭಕ್ತರು ಅಗಮಿಸುವ ನಿರೀಕ್ಷೆ ಇದ್ದು ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿಗೆ ನೀರು ಹರಿಸುವಂತೆ ಶಾಸಕ ರಮೇಶ ಬಂಡಿಸಿದ್ದೇಗೌಡ ಕಾವೇರಿ ನೀರಾವರಿ ನಿಗಮದ ಕಾರ್ಯ ಪಾಲಕ ಎಂಜಿನಿಯರ್ ವಿಜಯ ಕುಮಾರ್ ಅವರಿಗೆ ದೂರವಾಣಿ ಮೂಲಕ ಸೂಚಿಸಿದರು.

ಸೋಮವಾರ ದೇವಾಲಯದ ಆವರಣದಲ್ಲಿ ನಡೆದ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ನಾಗರಾಜಯ್ಯ, ‘ಕಾವೇರಿ ನದಿಯಲ್ಲಿ ಕೊಳಚೆ ತುಂಬಿಕೊಂಡಿದೆ. ನದಿಯಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾಗಿದ್ದು ಕೆಆರ್‌ಎಸ್‌ನಿಂದ ನದಿಗೆ ನೀರು ಹರಿಸಿದರೆ ಕೊಳಕು ಹೋಗುತ್ತದೆ ಎಂದು ಹೇಳಿದರು. ಈ ಮಾತಿಗೆ ತಲೆದೂಗಿದ ಶಾಸಕರು ವಿಜಯಕುಮಾರ್ ಅವರನ್ನು ಸಂಪರ್ಕಿಸಿ ಫೆ.16ರಿಂದ ಮೂರು ದಿನ ಕಾವೇರಿ ನದಿಗೆ ನೀರು ಹರಿಸಿ ಎಂದು ಹೇಳಿದರು. ಸಿಡಿಎಸ್ ಇತರ ನಾಲೆಗಳಿಗೆ ಹರಿಯುವ ನೀರನ್ನು ನದಿಗೆ ಹರಿಯಬಿಡಬೇಕು ಎಂದು ತಾಕೀತು ಮಾಡಿದರು. ಕುಡಿಯುವ ನೀರು, ಮಹಿಳೆಯರು ಬಟ್ಟೆ ಬದಲಿಸಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಶೌಚಕ್ಕೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ದೇವಾಲಯದಲ್ಲಿ ಫೆ.18ರ ಮುಂಜಾನೆ 12.30ಕ್ಕೆ ಪೂಜಾ ಕೈಂಕರ್ಯಗಳು ಶುರುವಾಗಲಿವೆ. ಅಂದು ರಾತ್ರಿವರೆಗೆ ಭಕ್ತರ ಜಂಗುಳಿ ಇರುತ್ತದೆ. ಎಲ್ಲ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ. ಸ್ವಚ್ಛತೆ ಬಗ್ಗೆ ಸ್ಥಳೀಯ ಪುರಸಭೆ ನಿಗಾ ವಹಿಸಬೇಕು ಎಂದರು. ವಿಐಪಿ, ವಿವಿಐಪಿಗಳಿಗೆ ಉತ್ತರ ದ್ವಾರದ ಮೂಲಕ ವಿಶೇಷ ದರ್ಶನ ವ್ಯವಸ್ಥೆ ಕಲ್ಪಿಸುವಂತೆ ಶಾಸಕರು ಪೊಲೀಸರಿಗೆ ಸೂಚಿಸಿದರು.

ನಿಮಿಷಾಂಬ ದೇವಾಲಯ ಸೇರಿದಂತೆ ಸಂಗಂ, ಗೋಸಾಯಿ ಘಾಟ್‌ಗಳಿಗೆ ಜನರು ಭೇಟಿ ನೀಡುವು ದರಿಂದ ದೀಪದ ವ್ಯವಸ್ಥೆ ಮಾಡುವಂತೆ ದೇವಾಲಯದ ರಾಜೂ ಭಟ್ ಮನವಿ ಮಾಡಿದರು. ಪುರಸಭೆ ಅಧ್ಯಕ್ಷ ಎಲ್.ನಾಗರಾಜು, ಸದಸ್ಯ ದಿನೇಶ್, ಜಿ.ಪಂ. ಸಿಇಓ ಜಯರಾಂ, ಉಪ ವಿಭಾಗಾಧಿಕಾರಿ ಜಿ.ಪ್ರಭು, ತಹಶೀ ಲ್ದಾರ್ ಅರುಳ್ ಕುಮಾರ್, ಸಿಪಿಐ ಪ್ರಭಾಕರ ಸಿಂಧೆ, ಮುಜರಾಯಿ ತಹಶೀಲ್ದಾರ್ ರಾಮು, ಸೂರ್ಯ ನಾರಾಯಣ ಭಟ್, ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.