ADVERTISEMENT

ಕೆಲಸ ಆರಂಭಿಸಿದ ಪುಟ್ಟರಾಜು, ತಮ್ಮಣ್ಣ

ಸಚಿವರಿಗೆ ಮೊದಲ ದಿನ ಅಧಿಕಾರಿಗಳ ಸ್ವಾಗತ, ಇಲಾಖಾ ಕಡತ ಪರಿಶೀಲಿಸಿದ ಸಚಿವರು

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 8:59 IST
Last Updated 12 ಜೂನ್ 2018, 8:59 IST

ಮಂಡ್ಯ: ಖಾತೆ ತಗಾದೆ, ಅಸಮಾಧಾನ, ಸಂಧಾನ ಮುಂತಾದ ಸಮಸ್ಯೆಗಳ ನಂತರ ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಹಾಗೂ ಡಿ.ಸಿ.ತಮ್ಮಣ್ಣ ಅವರು ಸೋಮವಾರ ಮೊದಲ ದಿನ ತಮ್ಮ ಕಚೇರಿಗಳಿಗೆ ಹಾಜರಾಗಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಆಯಾ ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ನೂತನ ಸಚಿವರಿಗೆ ಹೂಗುಚ್ಛ ನೀಡಿ ಸ್ವಾಗತ ಕೋರಿದರು. ವಿಧಾನಸೌಧ 3ನೇ ಮಹಡಿಯ ಕೊಠಡಿ ಸಂಖ್ಯೆ 343ರಲ್ಲಿ ಪುಟ್ಟರಾಜು ಮೊದಲ ದಿನ ಕಾರ್ಯ ಆರಂಭಿಸಿದರು. ಡಿ.ಸಿ.ತಮ್ಮಣ್ಣ ಕೊಠಡಿ ಸಂಖ್ಯೆ 329ಕ್ಕೆ ಹಾಜರಾದರು.

ಭಾನುವಾರ ರಾತ್ರಿಯೇ ಬೆಂಗಳೂರಿಗೆ ತೆರಳಿದ ಅವರು ಸೋಮವಾರ ಬೆಳಿಗ್ಗೆ ಕಚೇರಿಗೆ ಹಾಜರಾದರು. ಇಲಾಖೆಯ ಬಗ್ಗೆ ಮಾಹಿತಿ ಪಡೆದ ಅವರು ಮಂಗಳವಾರ ಮಧ್ಯಾಹ್ನ 2.30ಕ್ಕೆ ಅಧಿಕಾರಿಗಳ ಸಭೆ ಕರೆಯುವಂತೆ ಕಾರ್ಯದರ್ಶಿಗೆ ಸೂಚನೆ ನೀಡಿದರು.

ADVERTISEMENT

‘ಸಣ್ಣ ನೀರಾವರಿ ಇಲಾಖೆ ನೀಡಿರುವ ಬಗ್ಗೆ ನನಗೆ ಯಾವುದೇ ಅಸಮಾಧಾನವಿಲ್ಲ. ಕಚೇರಿಗೆ ಹಾಜರಾಗಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಮಂಗಳವಾರ ಇಲಾಖೆಯ ಬಗ್ಗೆ ಎಲ್ಲ ಮಾಹಿತಿ ಪಡೆಯುತ್ತೇನೆ. ಸಣ್ಣ ನೀರಾವರಿ ಇಲಾಖೆಯಿಂದ ರೈತ ಸಮುದಾಯಕ್ಕೆ ಅನುಕೂಲವಾಗುವ ಎಲ್ಲಾ ಕೆಲಸ ಮಾಡುತ್ತೇನೆ. ಇಲಾಖೆಯನ್ನು ಮುಖ್ಯ ವಾಹಿನಿಗೆ ತಂದು ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ. ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಿದರೆ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಪುಟ್ಟರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾ ಉಸ್ತುವಾರಿಗಾಗಿ ಪೈಪೋಟಿ : ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ಸಚಿವರಾದ ಸಿ.ಎಸ್‌.ಪುಟ್ಟರಾಜು ಹಾಗೂ ಡಿ.ಸಿ.ತಮ್ಮಣ್ಣ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ. ಈಗಾಗಲೇ ಮುಖ್ಯಮಂತ್ರಿ ಪುಟ್ಟರಾಜು ಅವರಿಗೆ ಉಸ್ತುವಾರಿ ಭರವಸೆ ನೀಡಿದ್ದಾರೆ. ಆದರೆ ತಮ್ಮಣ್ಣ ಅವರೂ ಈ ಸ್ಥಾನ ಪಡೆಯಲು ಯತ್ನಿಸುತ್ತಿದ್ಧಾರೆ. ಎಚ್‌.ಡಿ.ದೇವೇಗೌಡರ ಬೀಗರೂ ಆಗಿರುವ ಅವರು ತಮ್ಮ ಪ್ರಭಾವ ಬಳಸಿ ಸಾರಿಗೆ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈಗಲೂ ಅದೇ ಪ್ರಭಾವದಿಂದ ಸ್ಥಾನ ಪಡೆಯಲು ಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಜಿಲ್ಲೆಯಲ್ಲಿ ಇದೆ.

ಮಾಜಿ ಶಾಸಕ ಅಂಬರೀಷ್‌, ತಮ್ಮಣ್ಣ ಅವರಿಗೆ ಸಾರಿಗೆ ಖಾತೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅದೇ ರೀತಿ ಈಗಲೂ ಅವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಲು ದೇವೇಗೌಡರ ಜೊತೆ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಮುಖ್ಯಮಂತ್ರಿ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ. ಉಸ್ತುವಾರಿ ಬೇಕೇ ಬೇಕು ಎಂದು ಹಠ ಹಿಡಿದಿಲ್ಲ. ಸ್ಥಾನ ನೀಡಿದರೆ ನಿಭಾಯಿಸುತ್ತೇನೆ. ಸೋಮವಾರ ಸಾರಿಗೆ ಅಧಿಕಾರಿಗಳೊಂದಿಗೆ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2.30ರವರೆಗೆ ಸಭೆ ನಡೆಸಿದ್ದೇನೆ. ಇಲಾಖೆಯಲ್ಲಿ ನಡೆಯುತ್ತಿರುವ ಚುಟುವಟಿಕೆಗಳ ಬಗ್ಗೆ ಮಾಹಿಡಿ ಪಡೆದಿದ್ದೇನೆ’ ಎಂದು ಡಿ.ಸಿ.ತಮ್ಮಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.