ADVERTISEMENT

ಕ್ಷಯ: ಜಿಲ್ಲೆಯಲ್ಲಿ 1,108 ರೋಗಿಗಳು ಪತ್ತೆ

ಎಂ.ಎನ್.ಯೋಗೇಶ್‌
Published 28 ನವೆಂಬರ್ 2017, 5:48 IST
Last Updated 28 ನವೆಂಬರ್ 2017, 5:48 IST
ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಕ್ಷಯ ರೋಗಿಗಳ ಕಫ ಪರೀಕ್ಷಿಸುವ ಯಂತ್ರ
ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಕ್ಷಯ ರೋಗಿಗಳ ಕಫ ಪರೀಕ್ಷಿಸುವ ಯಂತ್ರ   

ಮಂಡ್ಯ: ಜಿಲ್ಲೆಯಲ್ಲಿರುವ ಕಬ್ಬು ಕಡಿಯುವ ಕಾರ್ಮಿಕರು, ಜೀವನಕ್ಕಾಗಿ ಮುಂಬೈ ಮತ್ತಿತರ ನಗರಗಳಿಗೆ ವಲಸೆ, ಅಪೌಷ್ಟಿಕತೆ, ದುಶ್ಚಟ ಮುಂತಾದ ಕಾರಣಗಳಿಂದ ಜಿಲ್ಲೆಯ 1,108 ಜನರು ಮಹಾಮಾರಿ ಕ್ಷಯ (ಟಿಬಿ–ಟ್ಯೂಬರ್ ಕ್ಯುಲೋಸಿಸ್) ರೋಗದಿಂದ ನರಳುತ್ತಿದ್ದಾರೆ.

2025ರೊಳಗೆ ಕ್ಷಯರೋಗ ನಿರ್ಮೂಲನೆಗಾಗಿ ದೇಶದಾದ್ಯಂತ ಹೋರಾಟ ನಡೆಯುತ್ತಿದೆ. ಅದಕ್ಕಾಗಿ ಹೊಸ ಚಿಕಿತ್ಸಾ ವಿಧಾನ ಅನುಸರಿಸಲಾಗಿದೆ. ಆದರೂ ರಾಜ್ಯದ ಅತಿಹೆಚ್ಚು ಕ್ಷಯರೋಗಿಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಮಂಡ್ಯ ಜಿಲ್ಲೆಯೂ ಒಂದು. ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳಿಂದಾಗಿಯೂ ಜಿಲ್ಲೆಯಲ್ಲಿ ಕ್ಷಯ ರೋಗ ಕಾಣಿಸಿಕೊಂಡಿದೆ.

ಜಿಲ್ಲೆಯ ರೈತರು ಕಬ್ಬಿನ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಿರುವ ಕಾರಣ ಕಬ್ಬು ಕಡಿಯಲು ಹೊರ ರಾಜ್ಯ ಹಾಗೂ ಉತ್ತರ ಕರ್ನಾಟಕದ ಕಾರ್ಮಿಕರು ಇಲ್ಲಿಗೆ ತಂಡೋಪತಂಡವಾಗಿ ಬರುತ್ತಿದ್ದಾರೆ. ಜೊತೆಗೆ ದುಡಿಯಲು ಮುಂಬೈ ಮುಂತಾದೆಡೆ ವಲಸೆ ಹೋಗುತ್ತಿರುವ ಕಾರಣ ಕ್ಷಯರೋಗ ಪೀಡಿತರು ಹೆಚ್ಚಾಗುತ್ತಿದ್ದಾರೆ.

ADVERTISEMENT

ಹೆಚ್ಚು ಕಬ್ಬು ಬೆಳೆಯುವ ಮಂಡ್ಯ, ಮದ್ದೂರು, ಪಾಂಡವಪುರ ಹಾಗೂ ಮಳವಳ್ಳಿ ತಾಲ್ಲೂಕುಗಳಲ್ಲಿ ಅತೀ ಹೆಚ್ಚು ಕ್ಷಯರೋಗ ಪೀಡಿತರು ಇದ್ದಾರೆ. ಈ ತಾಲ್ಲೂಕುಗಳಿಗೆ ಉತ್ತರ ಕರ್ನಾಟಕ ಹಾಗೂ ಹೊರ ರಾಜ್ಯಗಳಿಂದ ಬಂದ ಕಬ್ಬು ಕಡಿಯುವ ಕಾರ್ಮಿಕರು ವಾಸ ಮಾಡುತ್ತಿದ್ದಾರೆ. ಜೊತೆಗೆ ದುಡಿಯಲು ವಲಸೆ ಹೋಗುವ ಜನರು ಕೆ.ಆರ್‌.ಪೇಟೆ ಹಾಗೂ ನಾಗಮಂಗಲ ತಾಲ್ಲೂಕಿನಲ್ಲಿ ಇದ್ದಾರೆ. ಮುಂಬೈಗೆ ತೆರಳುವ ಬಹುತೇಕ ಶ್ರಮಿಕರು ಕ್ಷಯದೊಂದಿಗೆ ಹಿಂದಿರುಗಿ ಬರುತ್ತಿದ್ದಾರೆ ಎಂದು ವೈದ್ಯರು ತಿಳಿಸುತ್ತಾರೆ.

‘ಕ್ಷಯ ವಾಸಿ ಮಾಡಬಹುದಾದ ಕಾಯಿಲೆ. ಆದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು. ಎಚ್‌ಐವಿ ಏಡ್ಸ್‌ನಿಂದ ಬಳಲುವ ರೋಗಿಗಳಲ್ಲಿ ಹೆಚ್ಚಾಗಿ ಕ್ಷಯ ಕಂಡುಬರುತ್ತದೆ. ರೋಗ ನಿರೋಧಕ ಶಕ್ತಿ ಅವರಲ್ಲಿ ಕುಗ್ಗುವ ಕಾರಣ ಬಲುಬೇಗ ಕ್ಷಯ ಬರುತ್ತದೆ. ಜಿಲ್ಲೆಯಲ್ಲಿ ಮೊದಲು 2 ಸಾವಿರಕ್ಕೂ ಹೆಚ್ಚು ರೋಗಿಗಳು ಇದ್ದರು. ಈಗ ಕೊಂಚ ಕಡಿಮೆಯಾಗಿದೆ. ಎರಡು ವಾರಕ್ಕೂ ಹೆಚ್ಚಾಗಿ ಕಾಣಿಸಿಕೊಳ್ಳುವ ಕೆಮ್ಮು, ಸಂಜೆಯಾಗುತ್ತಲೇ ಜ್ವರ, ರಾತ್ರಿ ಬೆವರುವುದು, ಕಫದಲ್ಲಿ ರಕ್ತ ಕ್ಷಯರೋಗದ ಲಕ್ಷಣಗಳಾಗಿವೆ. ಇವು ಕಂಡುಬಂದಾಗ ಕೂಡಲೇ ವೈದ್ಯರ ಬಳಿ ತೋರಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ ಸಿ.ಬಿ.ನಾಟ್‌ ಕಫ ಪರೀಕ್ಷಾ ಯಂತ್ರವಿದ್ದು ಕೆಲವೇ ಗಂಟೆಯಲ್ಲಿ ಕ್ಷಯವನ್ನು ಪತ್ತೆ ಮಾಡಬಹುದು. ಪಾಂಡವಪುರ ಆಸ್ಪತ್ರೆಯಲ್ಲೂ ಈ ಯಂತ್ರ ಅಳವಡಿಸಲಾಗುತ್ತಿದೆ. ಉಚಿತ ಚಿಕಿತ್ಸಾ ಸೌಲಭ್ಯ ರೋಗಿಗಳಿಗೆ ದೊರೆಯುತ್ತದೆ.’ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎಂ.ಸಿ.ರೋಚನಾ ಹೇಳಿದರು.

ಕುಟುಂಬದಿಂದ ಬೇರ್ಪಡಿಸುವ ಪದ್ಧತಿ ಇಲ್ಲ: ಕ್ಷಯರೋಗ ಸಾಂಕ್ರಾಮಿಕ ರೋಗವಾಗಿರುವ ಕಾರಣ ಮೊದಲು ಕ್ಷಯ ಬಂದರೆ ರೋಗಿಯನ್ನು ಕುಟುಂಬದ ಸದಸ್ಯರಿಂದ ಬೇರ್ಪಡಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಈಗ ಕ್ಷಯರೋಗಕ್ಕೆ ಆಧುನಿಕ ಚಿಕಿತ್ಸಾ ವಿಧಾನ ಅಳಡಿಕೆ ಆಗಿರುವ ಕಾರಣ ಕುಟುಂಬದಿಂದ ಬೇರ್ಪಡಿಸದೇ ವೈದ್ಯರು ಚಿಕಿತ್ಸೆ ನೀಡುತ್ತಾರೆ.

‘ಈಗ ಹೊಸ ವಿಧಾನದಲ್ಲಿ ರೋಗಿಗಳನ್ನು ಕುಟುಂಬದಿಂದ ಪ್ರತ್ಯೇಕಿಸುವ ಅಗತ್ಯ ಇಲ್ಲ. ಕೆಲವು ಮಾರ್ಗದರ್ಶನ ಅನುಸರಿಸಿ ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ಕ್ಷಯ ಬಂದವರು ಎಲ್ಲೆಂದರಲ್ಲಿ ಉಗುಳಬಾರದು. ಉಗುಳಿದರೆ ಅದನ್ನು ಮಣ್ಣಿನಿಂದ ಮುಚ್ಚಬೇಕು. ಉಗುಳಿನಲ್ಲಿರುವ ವೈರಸ್‌ ಗಾಳಿಯಲ್ಲಿ ಸೇರಿ ಬೇರೆಯವರಿಗೂ ಹರಡುವ ಅಪಾಯವಿದೆ. ಅಲ್ಲದೆ ರೋಗಿಗಳು ಬಾಯಿ ಕವಚ ಧರಿಸಿಯೇ ಉಸಿರಾಡಬೇಕು’ ಎಂದು ಡಾ.ರೋಚನಾ ತಿಳಿಸಿದರು.

ಆರು ತಿಂಗಳು ಚಿಕಿತ್ಸೆ: ‘ಕ್ಷಯರೋಗಕ್ಕೆ ಆರು ತಿಂಗಳ ಕಾಲ ಕಟ್ಟುನಿಟ್ಟಾಗಿ ಚಿಕಿತ್ಸೆ ಪಡೆಯಬೇಕು. ಆದರೆ ಜಿಲ್ಲೆಯಲ್ಲಿ ಕೆಲವೆಡೆ ರೋಗಿಗಳು ಸರಿಯಾಗಿ ಚಿಕಿತ್ಸೆ ಪಡೆಯದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಈ ಕಾರಣದಿಂದಲೂ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ರೋಗ ಮರುಕಳಿಸಿದರೆ ಮತ್ತೆ ಎಂಟು ತಿಂಗಳ ಚಿಕಿತ್ಸೆ ಅವಶ್ಯಕತೆ ಇದೆ. ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಮಾತ್ರೆ ವಿತರಿಸುತ್ತಾರೆ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಭವಾನಿ ಶಂಕರ್ ಹೇಳಿದರು.

20 ಕುಷ್ಠರೋಗಿಗಳು ಪತ್ತೆ: ‘ಜಿಲ್ಲೆಯಲ್ಲಿ 20 ಕುಷ್ಠರೋಗಿಗಳು ಪತ್ತೆಯಾಗಿದ್ದಾರೆ. ರೋಗ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ವಿವಿಧ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಎಲ್ಲರಿಗೂ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದೇವೆ. ಕುಷ್ಠರೋಗವನ್ನು ಕೆಲವರು ಶಾಪ ಎಂದುಕೊಳ್ಳುವವರು ಇದ್ದಾರೆ. ಆದರೆ ಕುಷ್ಠರೋಗವನ್ನು ಬಹು ಔಷಧಿ ಚಿಕಿತ್ಸಾ ಪದ್ಧತಿಯಿಂದ ಸಂಪೂರ್ಣವಾಗಿ ಗುಣಪಡಿಸಬಹುದು’ ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಅಶ್ವತ್ಧ್ ತಿಳಿಸಿದರು.

ಡಿ.4–18ರವರೆಗೆ ಜಾಗೃತಿ ಆಂದೋಲನ: ಆರೋಗ್ಯ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸುವ ಆಂದೋಲನ ಡಿ.4–18ರವರೆಗೆ ನಡೆಯಲಿದೆ. ಇಲಾಖೆಯ ಸಿಬ್ಬಂದಿ ಮನೆಮನೆಗೆ ತೆರಳು ಕ್ಷಯರೋಗದಿಂದ ಉಂಟಾಗುವ ಪರಿಣಾಮ ಹಾಗೂ ಚಿಕಿತ್ಸಾ ವಿಧಾನದ ಬಗ್ಗೆ ಮಾಹಿತಿ ನೀಡಲಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಕೂಡ ಡಿಸೆಂಬರ್‌ ತಿಂಗಳಲ್ಲಿ ಜಿಲ್ಲೆಯಾದ್ಯಂತ ಕ್ಷಯ, ಕುಷ್ಠ, ಸಮುದಾಯ ಆರೋಗ್ಯ, ಧನುಷ್‌ ಲಸಿಕೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ

‘ಕೇಂದ್ರ ಸರ್ಕಾರದ ಸಹಯೋಗದಲ್ಲಿ ಜಿಲ್ಲೆಯ ಜನರಿಗೆ ಆರೋಗ್ಯದ ಅರಿವು ಮೂಡಿಸಲಾಗುತ್ತದೆ. ದೇಶದಿಂದ ಕ್ಷಯ, ಕುಷ್ಠ ರೋಗ ನಿರ್ಮೂಲನೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಮೈಸೂರು ಘಟಕದ ಹಿರಿಯ ಉಪ ನಿರ್ದೇಶಕಿ ಡಾ.ಟಿ.ಸಿ.ಪೂರ್ಣಿಮಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.