ADVERTISEMENT

ಗಣಿಗಾರಿಕೆ ವಿರುದ್ಧ ಸಿಓಡಿ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 8:55 IST
Last Updated 12 ಫೆಬ್ರುವರಿ 2011, 8:55 IST

ಮಂಡ್ಯ: ಕೃಷ್ಣರಾಜಸಾಗರ ಜಲಾಶಯದ ಭದ್ರತೆಯೇ ಮುಖ್ಯವಾಗಿದ್ದು, ಯಾವುದೇ ಕಾರಣಕ್ಕೂ ಜಲಾಶಯದ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗದು ಎಂದು ಜಲಸಂಪನ್ಮೂಲ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಶುಕ್ರವಾರ ಪ್ರತಿಪಾದಿಸಿದರು.ಕೆಆರ್‌ಎಸ್ ಆಸುಪಾಸಿನಲ್ಲಿ ಅಕ್ರಮವಾಗಿ ನಡೆಯತ್ತಿರುವ ಗಣಿಗಾರಿಕೆ ಕುರಿತು ಸಿಒಡಿ ತನಿಖೆಗೆ ಆಗ್ರಹಪಡಿಸಬೇಕು ಎಂದು ಒತ್ತಾಯಿಸಿ ಕೆಆರ್‌ಎಸ್‌ನಿಂದ ಮಂಡ್ಯದವರೆಗೂ ಬೈಕ್ ರ್ಯಾಲಿ ನಡೆಸಿದ ರೈತ ಸಂಘದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಜಿಲ್ಲಾಧಿಕಾರಿ ಕಚೇರಿ ಬಳಿ ಮಾತನಾಡಿದರು.ಜಲಾಶಯದ ಬಳಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ ಎಂಬುದು ಗಂಭೀರವಾದ ವಿಷಯ. ಜಲಾಶಯ ಸುರಕ್ಷತೆಯೇ ನಮ್ಮ ಆದ್ಯತೆ. ಅದಕ್ಕೆ ತೊಂದರೆ ಆಗಬಾರದು. ಈ ವಿಷಯದಲ್ಲಿ ಸರ್ಕಾರದ ನಿಲುವು ಸ್ಪಷ್ಟವಾಗಿದೆ ಎಂದು ಹೇಳಿದರು.

ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ ಎಂಬ ಕುರಿತ ಮಾಹಿತಿಗಳು ನಮಗೂ ಬಂದಿದ್ದು.  ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ಭರವಸೆ ನೀಡಿದರು.ಅಂತಹ ಬೆಳವಣಿಗೆಗಳು ನಡೆಯುತ್ತಿದ್ದರೂ ಗಮನಿಸಿ ಕಡಿವಾಣ ಹಾಕಬೇಕು. ಮೊದಲ ಜಲಾಶಯದ ರಕ್ಷಣೆ, ಅದರ ನೀರು ಕುಡಿಯುವ ಉದ್ದೇಶ ಮತ್ತು ಬಳಿಕ ನೀರಾವರಿಗೆ ಬಳಕೆ ಆಗಬೇಕು ಎಂಬುದು ಸರ್ಕಾರದ ಸ್ಪಷ್ಟ ನಿಲುವು ಎಂದು ಹೇಳಿದರು.

ಈ ವಿಷಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೂ ಚರ್ಚಿಸಲಾಗುವುದು ಎಂದರು. ಸಿಒಡಿ ತನಿಖೆ ನಡೆಸಬೇಕು ಎಂಬ ಬೇಡಿಕೆ ಉಲ್ಲೇಖಿಸಿ, ಈ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಲಾಗುವುದು. ಒಟ್ಟಾರೆ, ಅಕ್ರಮ ಗಣಿಗಾರಿಕೆಗೆ ಇತಿಶ್ರೀ ಹಾಡಲಾಗುವುದು ಎಂದು ಹೇಳಿದರು. ಐಸಿಸಿ ಸಭೆಗೆ ರೈತ ಪ್ರತಿನಿಧಿಗಳು: ಇದೇ ಸಂದರ್ಭದಲ್ಲಿ ಅವರು ಕೃಷ್ಣಾ, ಕಾವೇರಿ ಕಣಿವೆಯ ನೀರಾವರಿ ಸಲಹಾ ಸಮಿತಿಗಳಿಗೆ ನಾಲ್ವರು ರೈತ ಪ್ರತಿನಿಧಿಗಳನ್ನು ಸದಸ್ಯರಾಗಿ ಆಯ್ಕೆ ಮಾಡುವ ಕುರಿತು ತೀರ್ಮಾನ ಮಾಡಲಾಗಿದೆ ಎಂದು ವಿವರಿಸಿದರು.

ರಾಜಕೀಯ ಹಸ್ತಕ್ಷೇಪ ಕಾರಣ’
‘ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಪತ್ತೆ ಹಚ್ಚಲು ತನಿಖೆಯನ್ನು ಸಿಒಡಿಗೆ ಒಪ್ಪಿಸಬೇಕು’ ಎಂದು ಆಗ್ರಹಪಡಿಸಿ ರೈತ ಸಂಂಘದ ಕಾರ್ಯಕರ್ತರು ಕೃಷ್ಣರಾಜಸಾಗರ ಜಲಾಶಯದಿಂದ ಮಂಡ್ಯದ ಜಿಲ್ಲಾಧಿಕಾರಿ ಕಚೇರಿವರೆಗೆ ಶುಕ್ರವಾರ ಬೈಕ್ ರ್ಯಾಲಿ ನಡೆಸಿದರು.ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರನ್ನು ಬಂಧಿಸುವಂತೆ ಆಗ್ರಹಪಡಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಕಾರ್ಯಕರ್ತರು, ‘ಜಿಲ್ಲೆ ಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಯನ್ನು ನಿಯಂತ್ರಿಸುವಲ್ಲಿ ಜಿಲ್ಲಾ ಆಡಳಿತ ಸಂಪರ್ಣ ವಿಫಲವಾಗಿದೆ. ಇದಕ್ಕೆ ರಾಜಕೀಯ ಹಸ್ತಕ್ಷೇಪವೇ ಕಾರಣ’ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ರೈತ ಸಂಘದ ಕೆ.ಎಸ್.ಪುಟ್ಟಣ್ಣಯ್ಯ ಅವರು ಮಾತನಾಡಿ, ‘ಜಿಲ್ಲೆಯಲ್ಲಿ ಸುಮಾರು 900 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆದಿದೆ. ಬಹಳಷ್ಟು ಮಂದಿ ಲೈಸೆನ್ಸ್ ಇಲ್ಲದೆ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಇದಕ್ಕೆ, ರಾಜಕಾರಣಿಗಳು ಮತ್ತು ಕೆಲ ಅಧಿಕಾರಿಗಳ ಕುಮ್ಮಕ್ಕೂ ಇದೆ’ ಎಂದು ಆರೋಪಿಸಿದರು.

‘ಕೃಷ್ಣರಾಜಸಾಗರ ಜಲಾಶಯ ವ್ಯಾಪ್ತಿಯ ಆಸುಪಾಸಿನಲ್ಲೇ ಗಣಿಗಾರಿಕೆ ನಡೆದಿರುವುದು ಆತಂಕ ಸೃಷ್ಟಿಸಿದೆ ಎಂದು ಹೇಳಿದ ಅವರು, ಜಲಾಶಯದಿಂದ 10 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬಾರದು’ ಎಂದು ಒತ್ತಾಯಿಸಿದರು.ರೈತ ಸಂಘದ ಮುಖಂಡ ನಂಜುಂಡೇಗೌಡ ಅವರು, ರೈತ ಸಂಘದ ಅಧ್ಯಕ್ಷ ಪುಟ್ಟಣ್ಣಯ್ಯ ಅವರನ್ನುಜೈಲಿಗೆ ಕಳುಹಿಸಲಾಗುವುದು ಎಂದು ಹೇಳಿಕೆ ನೀಡಿರುವ ಜೆಡಿಎಸ್ ಮುಖಂಡರ ಕ್ರಮವನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡರು.

ಜನರ ಪರ, ರೈತ ಪರವಾಗಿ ಹೋರಾಟ ಮಾಡುತ್ತಿರುವುದಕ್ಕೆ ಜೈಲಿಗೆ ಕಳುಹಿಸುತ್ತಾರಾ ಎಂದು ಖಾರವಾಗಿ ಪ್ರಶ್ನಿಸಿದ ಅವರು,  ಸಂಸದ ಚಲುವರಾಯ ಸ್ವಾಮಿ ಮತ್ತು ಶಾಸಕರಾದ ಸಿ.ಎಸ್.ಪುಟ್ಟರಾಜು, ಎ.ಬಿ.ರಮೇಶ್‌ಬಾಬು, ಮೊದಲು ತಾವು ನಡೆಸಿದ ಜನಪರ ಹೋರಾಟದ ವಿವರ ನೀಡಲಿದೆ ಎಂದರು.ಯಾವುದೇ ಹೇಳಿಕೆ ನೀಡುವ ಮುನ್ನ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು.  ಟನ್ ಕಬ್ಬಿಗೆ ಸರಿಯಾದ ಬೆಲೆಯನ್ನು ಕೊಡಿಸಲು ಆಗದ ಇವರು ಈಗ ರೈತರ ಪರ ಮಾತ ನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೋಣಸಾಲೆ ನರಸರಾಜು, ಮುಖಂಡರಾದ ನಂಜುಂಡೇಗೌಡ, ಎಸ್.ಸುರೇಶ್, ಬೊಮ್ಮೇ ಗೌಡ, ಬಳ್ಳಾರಿಗೌಡ, ಮರಿಚನ್ನೇಗೌಡ, ಮರಿಲಿಂಗೇಗೌಡ, ಹನಿಯಂಬಾಡಿ ನಾಗರಾಜು, ಜವರೇಗೌಡ ಮತ್ತಿತರರು ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.