ADVERTISEMENT

ಗಣಿ ಸ್ಫೋಟದಿಂದ ಹೃದಯಾಘಾತ: ದೂರು

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು, ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 8:44 IST
Last Updated 8 ಮಾರ್ಚ್ 2018, 8:44 IST

ಮಂಡ್ಯ: ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಕ್ವಾರಿಗಳಲ್ಲಿ ಜಲ್ಲಿ ಕ್ರಷರ್‌ಗಳು ಹಗಲು–ರಾತ್ರಿ ಎನ್ನದೇ ಅಕ್ರಮವಾಗಿ ಕಲ್ಲು ಸ್ಫೋಟ ಮಾಡುತ್ತಿರುವ ಕಾರಣ ಹೃದಯಾಘಾತ ಉಂಟಾಗಿ ಪ್ರಾಣಕ್ಕೆ ಅಪಾಯ ಉಂಟಾಗಿದೆ ಎಂದು ಆರೋಪಿಸಿ ಗ್ರಾಮದ ಮಹಿಳೆ ನಿಂಗಮ್ಮ ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

‘ಮಾರ್ಚ್‌ 3ರಂದು ಸಂಜೆ 7 ಗಂಟೆಯ ವೇಳೆಯಲ್ಲಿ ಗ್ರಾಮದ ಸಮೀಪದಲ್ಲಿರುವ ಕಲ್ಲು ಕ್ರಷರ್‌ನಿಂದ ಸ್ಫೋಟಗೊಂಡಿತು. ಭಾರಿ ಶಬ್ದದಿಂದ ನಾನು ಕೆಳಕ್ಕೆ ಕುಸಿದು ಬಿದ್ದೆ. ಮನೆಯವರು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದರು. ತಪಾಸಣೆ ನಡೆಸಿದ ವೈದ್ಯರು ಲಘು ಹೃದಯಾಘಾತ ಉಂಟಾಗಿದೆ ಎಂದು ತಿಳಿಸಿದರು. ಈ ಬಗ್ಗೆ ವೈದ್ಯರು ನೀಡಿರುವ ದಾಖಲೆಗಳು ಇವೆ. ದೇವರ ದಯೆಯಿಂದ ನಾನು ಪ್ರಾಣಾಪಾಯದಿಂದ ಪಾರಾಗಿದ್ದೇನೆ. ನನಗೆ ಮಾತ್ರವಲ್ಲದೆ ಗ್ರಾಮದ ಹಲವರಿಗೆ ಭಯಾನಕ ಶಬ್ದದಿಂದ ಮಾನಸಿಕ ತೊಂದರೆಗಳು ಉಂಟಾಗಿವೆ. ಕಲ್ಲು ಸ್ಫೋಟದ ವೇಳೆ ಬರುವ ಭಾರಿ ಶಬ್ದದಿಂದ ಮನೆಯ ಮುಂದಕ್ಕೆ ಜಲ್ಲಿಗಳು ಬಂದು ಬೀಳುತ್ತಿವೆ. ಇದರಿಂದ ನಾವು ಜೀವನ ನಡೆಸಲು ತೊಂದರೆಯಾಗಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು’ ಎಂದು ಅವರು ದೂರಿನಲ್ಲಿ ಒತ್ತಾಯ ಮಾಡಿದ್ದಾರೆ.

ಜಿಲ್ಲಾಧಿಕಾರಿಗೂ ದೂರು: ಹೃದಯಾಘಾತದಿಂದ ಪಾರಾಗಿರುವ ರಾಗಿಮುದ್ದನಹಳ್ಳಿಯ ನಿಂಗಮ್ಮ, ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರಿಗೂ ದೂರು ನೀಡಿದ್ದಾರೆ. ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಕಾರಣ ಗ್ರಾಮದ ಮನೆಗಳು ಬಿರುಕುಬಿಟ್ಟಿವೆ. ದೂಳು, ಸದ್ದಿನಿಂದಾಗಿ ಮಕ್ಕಳು, ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ರಾತ್ರಿಯ ವೇಳೆಯಲ್ಲಿ 60 ಅಡಿವರೆಗೂ ಕುಳಿ ತೋಡಿ ಮೆಗ್ಗರ್‌ ಸ್ಫೋಟ ನಡೆಸುತ್ತಿದ್ದಾರೆ. ಈ ಭಾರಿ ಶಬ್ದವನ್ನು ಮನುಷ್ಯರಾದವರು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಎದೆಯ ಮೇಲೆ ಕಲ್ಲು ಬಿದ್ದಂತಾಗುತ್ತಿದೆ. ಗ್ರಾಮಸ್ಥರು ಭಯದ ನೆರಳಲ್ಲೇ ಜೀವನ ಮಾಡುವಂತಾಗಿದೆ. ಕಲ್ಲು ಗಣಿ ಸ್ಫೋಟ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

‘ಅಕ್ರಮ ಕಲ್ಲು ಕ್ರಷರ್‌ನಿಂದ ಗ್ರಾಮದ ಜನರಿಗೆ ಉಂಟಾಗುತ್ತಿರುವ ತೊಂದರೆಯ ಬಗ್ಗೆ ಎರಡು ತಿಂಗಳ ಹಿಂದೆಯೇ ತಹಶೀಲ್ದಾರ್, ಉಪ ವಿಭಾಗಾಧಿಕಾರಿಗೂ ಗ್ರಾಮಸ್ಥರು ದೂರು ಸಲ್ಲಿಸಿದ್ದೆವು. ಆದರೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕಲ್ಲು ಸ್ಫೋಟದಿಂದ ಉಂಟಾಗುತ್ತಿರುವ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿದೆ. ಮೆಗ್ಗರ್‌ ಸ್ಫೋಟದ ತೀವ್ರತೆಗೆ ಗ್ರಾಮದ ರೈತರ ಕೊಳವೆಬಾವಿಗಳ ಮೋಟರ್‌ಗಳು ಕಳಚಿ ಬೀಳುತ್ತಿವೆ’ ಎಂದು ಗ್ರಾಮದ ನಿವಾಸಿ ಆರ್‌.ಎಂ.ಶಂಕರೇಗೌಡ ಹೇಳಿದರು.

‘ತಾಲ್ಲೂಕಿನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು’ ಎಂದು ತಹಶೀಲ್ದಾರ್‌ ನಾಗೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.