ADVERTISEMENT

ಗಾಯಾಳುಗಳಿಗೆ ‘ದಿವ್ಯ’ ಸ್ಪಂದನೆ

ಹಳ್ಳಕ್ಕೆ ಉರುಳಿದ ಖಾಸಗಿ ಬಸ್‌ ಘಟನೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 6:59 IST
Last Updated 1 ಜನವರಿ 2014, 6:59 IST

ಮಂಡ್ಯ: ತಾಲ್ಲೂಕಿನ ಚಿಕ್ಕಮಂಡ್ಯ–ಸಾತನೂರು ಮಧ್ಯೆ ಇತ್ತೀಚೆಗೆ ಖಾಸಗಿ ಬಸ್‌ ಹಳ್ಳಕ್ಕೆ ಬಿದ್ದ ಘಟನೆಯಲ್ಲಿ ಗಾಯಗೊಂಡು ಇಲ್ಲಿನ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ಮತ್ತು ಅವರ ಕುಟುಂಬದ ಸದಸ್ಯರನ್ನು ಮಂಗಳವಾರ ಸಂಸದೆ ರಮ್ಯಾ ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು.

ಮಿಮ್ಸ್‌ಗೆ ಆಗಮಿಸಿದ ರಮ್ಯಾ ಅವರು, ಗಾಯಾಳುಗಳು ಇರುವ ವಾರ್ಡಗಳಿಗೆ ತೆರಳಿ ಆರೋಗ್ಯ ವಿಚಾರಿಸಿದರು. ರಮ್ಯಾ ಅವರೊಂದಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮರೀಗೌಡ, ಮಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ್‌ ಜೊತೆಗಿದ್ದು, ಮಾಹಿತಿ ನೀಡಿದರು.

‘ಉತ್ತಮ ಚಿಕಿತ್ಸೆ ದೊರೆಯುತ್ತಿದ್ದು, ತಾವು ಚೇತರಿಸಿಕೊಳ್ಳುತ್ತಿರುವುದಾಗಿ’ ಗಾಯಾಳುಗಳು ತಿಳಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ರಮ್ಯಾ, ‘ನನ್ನ ಆರೋಗ್ಯ  ಸರಿಯಿಲ್ಲದ ಕಾರಣ ಬರಲು ಆಗಲಿಲ್ಲ. ಇದನ್ನು ತಪ್ಪಾಗಿ ಅರ್ಥೈಸುವುದು ಬೇಡ. ಆದರೆ, ಗಾಯಾಳುಗಳ ಆರೋಗ್ಯದ ಬಗೆಗೆ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಮಿಮ್ಸ್‌ ನಿರ್ದೇಶಕರಿಂದ ನಿತ್ಯ ಮಾಹಿತಿ ಪಡೆದುಕೊಳ್ಳುತ್ತಿದ್ದೆ’ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಮೃತ ವ್ಯಕ್ತಿಗಳ ಕುಟುಂಬಕ್ಕೆ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಿದೆ. ಅವಕಾಶವಿದ್ದರೆ, ಇನ್ನಷ್ಟು ಪರಿಹಾರ ಕೊಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಅಂಬರೀಷ್‌ ಅವರೊಂದಿಗೆ ಮಾತನಾಡು­ವುದಾಗಿ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿ ಪರಿಹಾರ ನಿಧಿ ಅಥವಾ ಸಂಸದ ನಿಧಿಯಿಂದ ಗಾಯಾಳುಗಳಿಗೆ ಹಣ ಕೊಡಲು ಸಾಧ್ಯವಿಲ್ಲದಿದ್ದರೆ ವೈಯಕ್ತಿಕವಾಗಿ ತಲಾ 10 ಸಾವಿರ ರೂಪಾಯಿ ನೀಡುವುದಾಗಿ ತಿಳಿಸಿದರು. ಗಾಯಾಳುಗಳ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟ­ದಲ್ಲಿರುವುದನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಮೊತ್ತವನ್ನು ನೀಡುತ್ತಿರುವುದಾಗಿ ಹೇಳಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವಕಾಶ’
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ, ಎಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧಿಸಲು ಸ್ವತಂತ್ರರಾಗಿದ್ದಾರೆ ಎಂದು ಚಿತ್ರನಟಿ, ಸಂಸದೆ ರಮ್ಯಾ ಹೇಳಿದರು.

ನಟಿ ರಕ್ಷಿತಾ ಪ್ರೇಮ್‌ ಅವರು ಜೆಡಿಎಸ್‌ ಪಕ್ಷದಿಂದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ, ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎನ್ನುವ ಸುದ್ದಿಗಾರರ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.

ಈವರೆವಿಗೂ ಸಿನಿಮಾದಲ್ಲಿ ಎದುರಾಳಿ ಆಗಿದ್ದವರು, ಚುನಾವಣೆಯಲ್ಲೂ ಮುಖಮುಖಿ ಆಗುವಿರಾ? ಎನ್ನುವ ಇನ್ನೊಂದು ಪ್ರಶ್ನೆಗೆ, ನಸುನಕ್ಕು ಯಾವುದೇ ಪ್ರತಿಕ್ರಿಯೆ ನೀಡದೇ ಮಾತು ಹೊರಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.