ADVERTISEMENT

`ಗುಡಿ ಕೈಗಾರಿಕೆ ಸ್ಥಾಪನೆಗೆ ಒತ್ತು'

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 4:41 IST
Last Updated 25 ಏಪ್ರಿಲ್ 2013, 4:41 IST

ಮಂಡ್ಯ: ಜಿಲ್ಲೆಯ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಕೆ.ಸಿ. ನಾರಾಯಣಗೌಡ ಅವರು ಅದೃಷ್ಟ ಪರೀಕ್ಷೆಗಾಗಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.

ಕಳೆದ ಬಾರಿ ಬಿಎಸ್ಪಿಯಿಂದ ಸ್ಪರ್ಧಿಸಿದ್ದ ಇವರು, ನಂತರದ ದಿನಗಳಲ್ಲಿ ಜೆಡಿಎಸ್ ಸೇರ್ಪಡೆಗೊಂಡಿದ್ದರು. ಉದ್ಯಮಿಯಾಗಿದ್ದು, ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ.

ಪ್ರಚಾರ ಹೇಗೆ ಸಾಗಿದೆ?
ತುಂಬಾ ಚೆನ್ನಾಗಿದೆ. ತಾಲ್ಲೂಕಿನಲ್ಲಿರುವ ಪಕ್ಷದ ಶಕ್ತಿ ನಮ್ಮ ಬಲವನ್ನು ಹೆಚ್ಚಿಸಿದೆ. ಬಹುತೇಕ ಮುಖಂಡರು, ಕಾರ್ಯಕರ್ತರು ನಮ್ಮಂದಿಗೆ ಇದ್ದು, ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಳೆದ ಚುನಾವಣೆಗಿಂತ ಈ ಚುನಾವಣೆ ಹೇಗೆ ಭಿನ್ನವಾಗಿದೆ?
ಕಳೆದ ಬಾರಿ ಜಿಲ್ಲೆಯಲ್ಲಿ ಭದ್ರ ನೆಲೆಯನ್ನು ಹೊಂದಿರದ ಬಿಎಸ್ಪಿಯಿಂದ ಸ್ಪರ್ಧಿಸಿದ್ದೆ. ಈ ಬಾರಿಗೆ ಜಿಲ್ಲೆಯಲ್ಲಿ ಪ್ರಬಲ ಪಕ್ಷವಾಗಿರುವ ಜೆಡಿಎಸ್‌ನಿಂದ ಸ್ಪರ್ಧಿಸಿದ್ದೇನೆ. ಬಂಡಾಯದ ಬಿಸಿ ಪಕ್ಷವನ್ನು ಕಾಡುವುದಿಲ್ಲ. ರಾಷ್ಟ್ರ ನಾಯಕರೂ ಪ್ರಚಾರಕ್ಕೆ ಆಗಮಿಸಲಿದ್ದಾರೆ.

ನಿಮಗೆ ಯಾಕೆ ಮತ ನೀಡಬೇಕು?
ಉದ್ಯಮಿಯಾಗಿದ್ದ ನಾನು ತಾಲ್ಲೂಕಿಗಾಗಿ ಏನಾದರೂ ಮಾಡಬೇಕು ಎಂದು ಟ್ರಸ್ಟ್ ಮೂಲಕ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇನೆ.

ಉಚಿತವಾಗಿ ಹೊಲಿಗೆ ತರಬೇತಿ, ಶಾಲಾ ಮಕ್ಕಳಿಗೆ ನೋಟ್‌ಬುಕ್, ಬಿಸಿಯೂಟಕ್ಕೆ ತಟ್ಟೆ, ಲೋಟ ನೀಡುವ ಕಾರ್ಯ ಮಾಡಿದ್ದೇನೆ. ಇದನ್ನು ವಿಸ್ತರಿಸಲು ಅವಕಾಶ ನೀಡಬೇಕು.

ನಿಮ್ಮ ಭರವಸೆಗಳು ಏನು?
ಮಹಿಳೆಯರಿಗೆ ಉದ್ಯೋಗಕ್ಕಾಗಿ ಹೊರಗಡೆ ಹೋಗುತ್ತಾರೆ. ಮುಂಬೈಗೆ ವಲಸೆಯೂ ಇದೆ. ಇದನ್ನು ತಪ್ಪಿಸಲು  ಗಾರ್ಮೆಂಟ್ ಕಾರ್ಖಾನೆ ಆರಂಭಿಸುವ ಯೋಜನೆ ಇದೆ.

ಸಣ್ಣ ಹಾಗೂ ಗುಡಿ ಕೈಗಾರಿಕೆಗಳ ಸ್ಥಾಪನೆಗೂ ಒತ್ತು ನೀಡಿ ಉದ್ಯೋಗವಕಾಶಗಳ ಹೆಚ್ಚಳಕ್ಕೆ ಆದ್ಯತೆ ನೀಡಲಾಗುವುದು. ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಒದಗಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.