ADVERTISEMENT

ಚಾಕನಕೆರೆ ಒತ್ತುವರಿ ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 10:55 IST
Last Updated 24 ಫೆಬ್ರುವರಿ 2012, 10:55 IST

ಮದ್ದೂರು: ತಮ್ಮ ಗ್ರಾಮದ ಕೆರೆ ಒತ್ತುವರಿ ಹಾಗೂ ಹೂಳೆತ್ತುವ ಕಾರ್ಯದಲ್ಲಿ ಆಗಿರುವ ಅಕ್ರಮ ಖಂಡಿಸಿ ಗುರುವಾರ ಗ್ರಾಮಸ್ಥರು ಕೆರೆಯಂಗಳದಲ್ಲಿ ಪ್ರತಿಭಟನೆ ನಡೆಸಿದರು.

ಕೆರೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡವರ ವಿರುದ್ಧ ಘೋಷಣೆ ಗಳನ್ನು ಮೊಳಗಿಸಿದ ಗ್ರಾಮಸ್ಥರು ಕೆರೆ ಒತ್ತುವರಿ ತೆರವುಗೊಳಿಸುವಲ್ಲಿ ನಿರ್ಲಕ್ಷ್ಯ ಪ್ರದರ್ಶಿಸಿರುವ ತಾಲ್ಲೂಕು ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಸರ್ವೆ ಸಂಖ್ಯೆ: 137ರಲ್ಲಿ ಒಟ್ಟು ಕೆರೆಯು 35.18 ಎಕರೆ ವಿಸ್ತೀರ್ಣ ಹೊಂದಿದ್ದು, ಇಲ್ಲಿನ ಸ್ಥಳೀಯ ರೈತರು ಅಕ್ರಮವಾಗಿ ಕೆರೆಯನ್ನು 10ಎಕರೆಗಿಂತಲೂ ಹೆಚ್ಚು ಒತ್ತುವರಿ ಮಾಡಿಕೊಂಡಿದ್ದಾರೆ. ಕೆರೆ ಒತ್ತುವರಿ ತೆರವಿಗೆ ಆಗ್ರಹಿಸಿ ತಹಶೀ ಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಹಲವು ಬಾರಿ ಮನವಿ ನೀಡಿದ್ದರೂ ಅವರು ಇದುವರೆಗೂ ಕೆರೆ ಒತ್ತುವರಿ ತೆರವುಗೊಳಿಸಲು        ಮುಂದಾಗಿಲ್ಲ.

ಈ ಮೂರು ತಿಂಗಳ ಹಿಂದೆ 56ಲಕ್ಷ ರೂಪಾಯಿ ವೆಚ್ಚದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಆರಂಭಿಸ ಲಾಯಿತು. ಆದರೆ ಕೆರೆಯ ಕೆಲವು ಭಾಗದಲ್ಲಿ ಹೂಳನ್ನು ಎತ್ತಿ, ಆ ಮಣ್ಣನ್ನು ರಸ್ತೆ ಅಭಿವೃದ್ಧಿಗೆ ಬಳಸಿಕೊಂಡ ಗುತ್ತಿಗೆ ದಾರರು, ಅಂದಿನಿಂದ ಇಲ್ಲಿಯವರೆಗೆ ನಾಪತ್ತೆಯಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

ಈ ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕೆರೆಯ ಪುನರ್ ಸರ್ವೇ ಕಾರ್ಯ ನಡೆಸಿ ಹದ್ದುಬಸ್ತು ನಿಗದಿಗೊಳಿಸಬೇಕು. ಅಲ್ಲದೇ ಸ್ಥಗಿತ ಗೊಂಡಿರುವ ಕೆರೆ ಹೂಳೇತ್ತುವ ಕಾಮಗಾರಿಗೆ ಪುನರ್ ಚಾಲನೆ ನೀಡಬೇಕು.
ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವುದು ಅನಿವಾರ್ಯ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಗ್ರಾಮದ ಮುಖಂಡರಾದ ಸುರೇಶ್, ಶಿವರಾಜು, ಜಗದೀಶ್, ಪುಟ್ಟರಾಜು, ಎಲ್‌ಐಸಿ ನಾಗರಾಜು, ಸತೀಶ್, ಅಶೋಕ್, ರಾಮು, ಚಿಕ್ಕಿರೇಗೌಡ, ಚಿಕ್ಕಮರಿಯಪ್ಪ, ಮಲ್ಲೇಶ್, ಮಹದೇವು, ಗಿರೀಶ್, ತಮ್ಮಣ್ಣ ಸೇರಿದಂತೆ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.