ADVERTISEMENT

ಜಾಗೃತಿ ಸಮಿತಿ ರಚನೆ- ಆಹಾರ ಇಲಾಖೆ ಕ್ರಮಕ್ಕೆ ಟೀಕೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 9:50 IST
Last Updated 18 ಫೆಬ್ರುವರಿ 2012, 9:50 IST

ಮಂಡ್ಯ: ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಪಡಿತರ ವಿತರಣೆಯಲ್ಲಿ ಆಗುವ ಲೋಪ ದೋಷಗಳನ್ನು ಸರಿಪಡಿಸಲು, ಜಾಗೃತಿ ಮೂಡಿಸಲು ರಚಿಸಲು ಉದ್ದೇಶಿಸಿರುವ ಜಾಗೃತಿ ಸಮಿತಿ ರಚನೆಯ ಪ್ರಕ್ರಿಯೆಗೆ ಅಧಿಕಾರಿಗಳು ಅನುಸರಿಸುತ್ತಿರುವ ಮಾರ್ಗ ಕುರಿತು ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಈಗಾಗಲೇ ರಚನೆ ಆಗಿದೆ ಎನ್ನಲಾಗಿರುವ ಜಾಗೃತ ಸಮಿತಿಗಳ ಸದಸ್ಯರಿಗೆ ಸಮಿತಿಯ ಕಾರ್ಯವೈಖರಿ ಕುರಿತು ಅರಿವು ಮೂಡಿಸಲು ರೈತ ಸಭಾಂಗಣದಲ್ಲಿ ಕರೆಯಲಾಗಿದ್ದ ಸಭೆಯಲ್ಲಿಯೇ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ತಕರಾರು ವ್ಯಕ್ತವಾಗಿದ್ದು, ಈ ಬಗೆಗೆ ಜಿಲ್ಲಾಧಿಕಾರಿಗಳಿಗೂ ದೂರು ನೀಡಲು ಮುಂದಾಗಿರುವ ಘಟನೆ ನಡೆದಿದೆ.

ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು, ಕಾಟಾಚಾರಕ್ಕಾಗಿ ಈ ಸಭೆಯನ್ನು ಮಾಡುತ್ತಿದ್ದಾರೆ. ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯ ಪ್ರಮುಖರು, ಪಡಿತರ ಚೀಟಿದಾರರಿಗೆ ಕನಿಷ್ಠ ಮಾಹಿತಿ ಇಲ್ಲದಂತೆ ಸಮಿತಿ ರಚನೆಯಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ ನಗರಸಭೆ ಸದಸ್ಯರು, ನಾಗರೇವಕ್ಕ ದೂರಿದರು.

`ಪ್ರಜಾವಾಣಿ~ ಜೊತೆ ಮಾತನಾಡಿದ ನಗರಸಭೆ ಅಧ್ಯಕ್ಷ ಅರುಣ್‌ಕುಮಾರ್ ಮತ್ತು ನಂಜುಂಡಪ್ಪ ಅವರು, ನಗರಸಭೆ ಸದಸ್ಯರಿಗೂ ಕೊನೆಗಳಿಗೆಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ಸಭೆ ನಡೆಸಬೇಡಿ. ಮುಂದೂಡಿ. ಎಲ್ಲರಿಗೂ ಮಾಹಿತಿ ನೀಡಿ ನಡೆಸಬೇಕು ಎಂದು ಕೋರಿದೆವು. ಈ ಬಗೆಗೂ ಜಿಲ್ಲಾಧಿಕಾರಿಗಳಿಗೂ ದೂರು ನೀಡಲಿದ್ದೇವೆ ಎಂದರು.

ಸಭೆಯನ್ನು ಮುಂದೂಡಬೇಕು. ಎಲ್ಲ ಸದಸ್ಯರು, ಆಯಾ ನ್ಯಾಯಬೆಲೆ ಅಂಗಡಿಯ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಸಮಿತಿ ರಚನೆ ಕುರಿತು ಪ್ರಚಾರ ಮಾಡಿದ ಬಳಿಕವೇ ಸಭೆ ನಡೆಸಬೇಕು ಎಂದು ಕೋರಿದೆವು. ಆದರೂ, ಅಧಿಕಾರಿಗಳು ಇದನ್ನು ಕಡೆಗಣಿಸಿ ಸಭೆಯನ್ನು ನಡೆಸಿದ್ದಾರೆ ಎಂದು ಅರುಣ್‌ಕುಮಾರ್ ದೂರಿದರು.

ಕಾಟಾಚಾರಕ್ಕೆ ಸಭೆಯನ್ನು ಮಾಡಿದಂತಿದೆ. ಬಹುತೇಕ ಆಯಾ ನ್ಯಾಯಬೆಲೆ ಅಂಗಡಿಗಳವರಿಗೇ ಸಮಿತಿಯನ್ನು ರಚಿಸಲು ಹೊಣೆ ನೀಡಲಾಗಿದೆ. ಹೀಗಾದರೆ, ಅನ್ಯಾಯ ಆಗುತ್ತಿದ್ದರೂ ಹೇಗೆ ಸರಿಪಡಿಸಲು ಸಾಧ್ಯ ಎಂದು ಸಭೆಯಲ್ಲಿ ಭಾಗವಹಿಸಿದ್ದ ನಾಗರೇವಕ್ಕ ಪ್ರಶ್ನಿಸಿದರು.

ಈಗ ರಚನೆಯಾಗಿದೆ ಎನ್ನಲಾಗಿರುವ ಸಮಿತಿಯನ್ನು ರದ್ದುಪಡಿಸಬೇಕು. ಆಯಾ ನ್ಯಾಯ ಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿ ನಿಯಮಾನುಸಾರ ಸಮಿತಿಗಳನ್ನು ರಚಿಸಬೇಕು ಎಂಬುದು ನಮ್ಮ ಆಗ್ರಹ ಎಂದರು.

ಇಂದಿನ ಸಭೆಯಲ್ಲಿ ಸಮಿತಿಯ ಸದಸ್ಯರಿಗೆ ಅರಿವು ಮೂಡಿಸುವುದು, ತರಬೇತಿ ಎಂದು ಹೇಳಲಾಗಿತ್ತು.ಆದರೆ, ಈಗ ಮುದ್ರಿಸಿರುವ ಕೈಪಿಡಿಯ ಅಂಶಗಳನ್ನು ಓದಿ ಹೇಳಿದ್ದು ಹೊರತುಪಡಿಸಿದರೆ ಮತ್ತೇನೂ ಆಗಲಿಲ್ಲ ಎಂದು ಅಸಮಾಧಾನ ತೋಡಿಕೊಂಡರು.

ಪಡಿತರ ವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಗುರಿಯೊಂದಿಗೆ, ಮೇಲ್ವಿಚಾರಣೆಗೆ ಅವಕಾಶ ಇರುವಂತೆ ಪ್ರತಿ ನ್ಯಾಯಬೆಲೆ ಅಂಗಡಿಯ ವ್ಯಾಪ್ತಿಯಲ್ಲಿಯೂ ಏಳು ಸದಸ್ಯರಿರುವ ಜಾಗೃತ ಸಮಿತಿ ರಚಿಸಬೇಕು ಎಂಬುದು ಆದೇಶ.

ಸಮಿತಿಯಲ್ಲಿ ಮೂರ ಜನ ಬಿಪಿಎಲ್/ಎಎವೈ ಪಡಿತರ ಚೀಟಿದಾರ ಮಹಿಳಾ ಸಸ್ಯರು, ಸಮಾಜ ಸೇವಾಕರ್ತರು, ಸ್ಥಳೀಯ ಮಹಿಳಾ ಸ್ವಸಹಾಯಗುಂಪಿನ ಅಧ್ಯಕ್ಷರು, ಸ್ತ್ರೀ ಶಕ್ತಿ ಗುಂಪಿನ ಅಧ್ಯಕ್ಷರು ಇರಬೇಕು. ಗಾಮೀಣ ಪ್ರದೇಶದಲ್ಲಿ ಆಯಾ ಗ್ರಾಪಂ ಅಧ್ಯಕ್ಷರೇ ಸಮಿತಿಯ ಅಧ್ಯಕ್ಷರಾಗಿರುತ್ತಾರೆ ಎಂದು ಆದೇಶದಲ್ಲಿ ಹೇಳಿದೆ.

`ಸಮಿತಿ ರಚನೆಯಾಗಿದೆ, ಸಭೆ ಮಾಡಿದ್ದೇವೆ~
ಮಂಡ್ಯ:
ಜಾಗೃತ ಸಮಿತಿಗಳನ್ನು ರಚಿಸುವಲ್ಲಿ ಇಲಾಖೆಯ ಕಡೆಯಿಂದ ಯಾವುದೇ ಲೋಪ ಆಗಿಲ್ಲ. ನಿಯಮಗಳ ಅನುಸಾರವೇ ಮಾಡಲಾಗಿದೆ. ಆದರೂ, ಕೆಲವರು ಗಲಾಟೆ ಮಾಡಿ ಹೋದರು ಎಂದು ಆಹಾರ ಇಲಾಖೆಯ ಉಪ ನಿರ್ದೇಶಕ ವೃಷಭರಾಜೇಂದ್ರಮೂರ್ತಿ ಪ್ರತಿಕ್ರಿಯಿಸಿದರು.

ಇಂದು ನಗರವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳ ಜಾಗೃತ ಸಮಿತಿ ರಚನೆಯಾಗಿತ್ತು. ನಗರದಲ್ಲಿ ಒಟ್ಟು 51 ನ್ಯಾಯಬೆಲೆ ಅಂಗಡಿಗಳಿದ್ದು, ಎಲ್ಲ ಕಡೆಯೂ ಸಮಿತಿ ರಚನೆಯಾಗಿದೆ. ನಗರಸಭೆ ಸದಸ್ಯರು ಆಯಾ ವಾರ್ಡ್‌ನ ಎಲ್ಲ ಸಮಿತಿಗಳಿಗೂ ಸದಸ್ಯರಾಗಿರುತ್ತಾರೆ ಎಂದರು. ಹಿಂದಿನ ದಿನವೇ ಎಲ್ಲರಿಗೂ ಸಭೆ ನಡೆಯುತ್ತಿರುವುದರ ಮಾಹಿತಿ ನೀಡಲಾಗಿದೆ. ಅನ್ಯ ಕಾರ್ಯ ಇದ್ದವರು ಬಂದಿಲ್ಲದೇ ಇರಬಹುದು. ಆದರೆ, ಬಹುತೇಕ ಎಲ್ಲರೂ ಬಂದಿದ್ದಾರೆ. ತರಬೇತಿ ನೀಡಲು ಸಭೆ ಕರೆಯಲಾಗಿತ್ತು. ಸಭೆಯನ್ನು ಮಾಡಿದ್ದೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT