ADVERTISEMENT

ಜಿ.ಪಂ ಸಭೆ: ಪ್ರತಿಧ್ವನಿಸಿದ ಕಾಲುಬಾಯಿ ಜ್ವರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 9:24 IST
Last Updated 20 ಸೆಪ್ಟೆಂಬರ್ 2013, 9:24 IST

ಮಂಡ್ಯ: ಕಾಲುಬಾಯಿ ಜ್ವರದಿಂದಾಗಿ ಜಾನುವಾರುಗಳು ಸಾವಿಗೀಡಾಗುತ್ತಿವೆ. ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಬಸವರಾಜು ದೂರಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ನಡೆದ ಸಾಮಾನ್ಯಸಭೆಯಲ್ಲಿ ಮಾತನಾಡಿದ ಅವರು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಸದಸ್ಯೆ ವಸಂತಾ ಮಾತನಾಡಿ, ಕೆನ್ನಾಳು ಗ್ರಾಮದಲ್ಲಿ 9 ಹಸುಗಳು ಸಾವನ್ನಪ್ಪಿವೆ. ನಾಳೆ ಬರುತ್ತೇವೆ ಎಂದು ಹೇಳಿ ಹೋದ ವೈದ್ಯರು ಮರಳಿ ಬಂದಿಲ್ಲ. ಜನರು ಆತಂಕದಲ್ಲಿದ್ದಾರೆ ಎಂದರು.

ವಿವಿಧ ತಾಲ್ಲೂಕುಗಳಲ್ಲಿ ಜಾನುವಾರುಗಳು ಸಾವನ್ನಪ್ಪುತ್ತಿರುವುದನ್ನು ಪ್ರಸ್ತಾಪಿಸಿದ ಸದಸ್ಯರು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಪಿ.ಎಂ. ಪ್ರಸಾದಮೂರ್ತಿ ಮಾತನಾಡಿ, ಕೆ.ಆರ್‌. ಪೇಟೆ ಹಾಗೂ ನಾಗಮಂಗಲದಲ್ಲಿ ಈಗಾಗಲೇ ನಿಯಂತ್ರಣಕ್ಕೆ ಬಂದಿದೆ. ಪಾಂಡವಪುರದಲ್ಲಿಯೂ ಕಡಿಮೆಯಾಗುತ್ತಿದೆ. ಮದ್ದೂರು ತಾಲ್ಲೂಕಿನಲ್ಲಿಯೂ ನಿಯಂತ್ರಣಕ್ಕೆ ತರಲಿದ್ದೇವೆ ಎಂದರು.

ಇಲ್ಲಿಯವರೆಗೆ ಕಾಲುಬಾಯಿ ಜ್ವರದಿಂದ 60 ಜಾನುವಾರುಗಳು ಸಾವಿಗೀಡಾಗಿವೆ. ಶೇ 90ರಷ್ಟು ಲಸಿಕೆ ಹಾಕಬೇಕಿದ್ದು. ಕಳೆದ ವರ್ಷ ಶೇ 54 ರಷ್ಟು ಮಾತ್ರ ಹಾಕಲಾಗಿದೆ. ಜತೆಗೆ ದಕ್ಷಿಣ ಭಾರತದಲ್ಲಿ ಹೆಚ್ಚಿಗೆ ಕಾಣಿಸಿಕೊಂಡಿದೆ. ಈಗಾಗಲೇ 2.65 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ ಎಂದರು.

ಸದಸ್ಯ ಡಾ.ಶಂಕರೇಗೌಡ ಮಾತನಾಡಿ, ಪ್ರಕರಣ ಹೆಚ್ಚಾಗಿರುವ ಕಡೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ಮಾಡಿದರು.
ಜಾನುವಾರುಗಳನ್ನು ಕಳೆದುಕೊಂಡಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಕೆಲವು ಸದಸ್ಯರು ಆಗ್ರಹಿಸಿದರು. ಪ್ರಸಾದಮೂರ್ತಿ ಅವರು, ಪರಿಹಾರ ನೀಡಲು ಅವಕಾಶವಿಲ್ಲ ಎಂದರು. ಆಗ ಮಧ್ಯಪ್ರವೇಶಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್‌ ಅವರು, ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಧ್ಯಕ್ಷರ ಅನುದಾನದಲ್ಲಿ ತಲಾ ಎರಡು ಸಾವಿರ ರೂಪಾಯಿ ನೀಡಲಾಗುವುದು ಎಂದರು.

ಸದಸ್ಯ ಮಂಜೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಎಷ್ಟು ಸಸಿಗಳನ್ನು ನೆಡಲಾಗಿದೆ. ಎಷ್ಟು ಸಸಿಗಳು ಉಳಿದಿವೆ. ವೈಯಕ್ತಿಕವಾಗಿ ತೆಗೆದುಕೊಂಡು ಹೋದವರು ನೆಟ್ಟಿದ್ದಾರೆ ಎಂದು ಪರಿಶೀಲಿಸಲಾಗಿದೆಯೇ ಎಂದು ಪ್ರಶ್ನಿಸಿದರು. ಸಿಇಒ ಪಿ.ಸಿ. ಜಯಣ್ಣ ಮಾತನಾಡಿ, ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸದಸ್ಯ ಹುಚ್ಚೇಗೌಡ, ವಿದ್ಯುತ್‌ ಪರಿವರ್ತಕ ಕೂಡಿಸಿಲ್ಲ. ಕೊಳವೆಬಾವಿಗೆ ವಿದ್ಯುತ್‌ ಸಂಪರ್ಕ ನೀಡಿಲ್ಲ ಎಂದು ದೂರಿದರು.
ಸದಸ್ಯ ಶ್ರೀನಿವಾಸ್‌, ಈಗಾಗಲೇ ಎರಡು ವಾಟರ್‌ ಟ್ಯಾಂಕ್‌ ಹಾಗೂ ಮಿನಿ ವಾಟರ್‌ ಪೂರೈಕೆ ವ್ಯವಸ್ಥೆ ಇರುವ ಮಜ್ಜಿಗೆಪುರಕ್ಕೆ ಅನುದಾನ ಬಿಡುಗಡೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಸದಸ್ಯ ಸುರೇಶ್‌ ಕಂಠಿ ಮಾತನಾಡಿ, ನಿರ್ಮಿತಿ ಕೇಂದ್ರ, ಕೆಆರ್‌ಡಿಸಿ, ಭೂಸೇನಾ ನಿಗಮಕ್ಕೆ ಎಷ್ಟು ಕಾಮಗಾರಿ ವಹಿಸಲಾಗಿದೆ ಎಂಬ ವಿವರ ನೀಡಬೇಕು ಎಂದು     ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.