ADVERTISEMENT

ಜಿಲ್ಲೆಯ 58 ಸಾವಿರ ರೈತರ ಸಾಲ ಮನ್ನಾ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 6:10 IST
Last Updated 13 ಆಗಸ್ಟ್ 2012, 6:10 IST

ಮಂಡ್ಯ: ರಾಜ್ಯ ಸರ್ಕಾರ, ಬರ ಹಿನ್ನೆಲೆಯಲ್ಲಿ ಮಾಡಿರುವ ಸಾಲ ಮನ್ನಾದ ಲಾಭವನ್ನು ಜಿಲ್ಲೆಯಲ್ಲಿ 58,594 ರೈತರು ಪಡೆದುಕೊಂಡಿದ್ದು, ಅವರ 117.62 ಕೋಟಿ ರೂಪಾಯಿ ಸಾಲ ಮನ್ನಾ ಆಗಿದೆ ಎಂದು ಸಹಕಾರ ಸಚಿವ ಬಿ.ಜೆ. ಪುಟ್ಟಸ್ವಾಮಿ ಹೇಳಿದರು.

ರಾಜ್ಯದಲ್ಲಿ 3,500 ಕೋಟಿ ರೂಪಾಯಿ ಸಾಲ ಮನ್ನಾ ಮಾಡಲಾಗಿದೆ. ಜನವರಿಯಿಂದ ಜೂನ್‌ವರೆಗೆ ಸಾಲ ವಸೂಲಾತಿ ಮಾಡಲಾಗುತ್ತದೆ. ಆ ನಂತರವಷ್ಟೇ ಸಾಲ ನೀಡಲಾಗುವುದು. ಆದ್ದರಿಂದ ಆ. 1 ರಿಂದ ಅನ್ವಯ ಮಾಡಿರುವ ದಿನಾಂಕವನ್ನು ಏ. 1 ರಿಂದ ಬದಲಾವಣೆ ಮಾಡುವುದಿಲ್ಲ ಎಂದು ಭಾನುವಾರ ಸ್ಪಷ್ಟಪಡಿಸಿದರು.

ಜಿಲ್ಲೆಯ 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಬೆಳೆ ಹಾನಿಯಿಂದ 260 ಕೋಟಿ ರೂಪಾಯಿ ಹಾಗೂ ಒಣಭೂಮಿಯಲ್ಲಿ ಬೆಳೆದಿದ್ದ ಬೆಳೆಯಿಂದ 8 ಕೋಟಿ ರೂಪಾಯಿ ನಷ್ಟವಾಗಿದೆ. ಜಿಲ್ಲೆಗೆ 16.35 ಕೋಟಿ ರೂಪಾಯಿ ಬರ ಕಾಮಗಾರಿಗೆ ಹಣ ಬಿಡುಗಡೆ ಮಾಡಲಾಗಿದ್ದು, 6.60 ಕೋಟಿ ರೂಪಾಯಿ ಖರ್ಚಾಗಿದೆ. ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.

ಜಿಲ್ಲೆಯಲ್ಲಿ 14,093 ಸ್ವ ಸಹಾಯ ಗುಂಪುಗಳಿದ್ದು, 10,703 ಗುಂಪುಗಳಿಗೆ 25.36 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿದೆ. ಯಶಸ್ವಿನಿ ಯೋಜನೆಯಡಿ 17,493 ಜನರಿಗೆ 9.22 ಕೋಟಿ ರೂಪಾಯಿ ವೆಚ್ಚದಲ್ಲಿ ಚಿಕಿತ್ಸೆ ಒದಗಿಸಲಾಗಿದೆ ಎಂದರು.

ಕಳೆದ ವರ್ಷ ಯಶಸ್ವಿನಿ ಯೋಜನೆ ಯಲ್ಲಿ 2,46,308 ಸದಸ್ಯರಿದ್ದು, ಈ ವರ್ಷ ಅವರ ಸಂಖ್ಯೆಯನ್ನು 3 ಲಕ್ಷಕ್ಕೆ ಏರಿಸುವ ಗುರಿ ಹೊಂದಲಾಗಿದೆ. 1,839 ಸಂಘಗಳಿವೆ. ಅದರಲ್ಲಿ 230 ಪ್ರಾಥಮಿಕ ಕೃಷಿ ಸಂಘ, 1,117 ಹಾಲು ಉತ್ಪಾದಕರ ಸಹಕಾರ ಸಂಘ, ಏಳು ಪಿಎಲ್‌ಡಿಪಿ ಹಾಗೂ ಏಳು ತಾಲ್ಲೂಕು ವ್ಯವಸಾಯ ಸಹಕಾರ ಸಂಘಗಳಿವೆ ಎಂದು ಹೇಳಿದರು.

ಜಿಲ್ಲೆಯ 3,11,390 ಮಂದಿ ರೈತರಿಗೆ 112.45 ಕೋಟಿ ರೂಪಾಯಿ ಯನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಯಂತೆ ಪ್ರೋತ್ಸಾಹ ಧನವಾಗಿ ನೀಡಲಾಗಿದೆ. ಹಾಲಿನ 1.75 ರೂಪಾಯಿ ಇಳಿಸಿದ ಕುರಿತು ಮುಖ್ಯಮಂತ್ರಿ ಗಳೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.

ಸಹಕಾರಿ ಸಂಘದಲ್ಲಿ ಮೀಸಲಾತಿ ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಹಕಾರ ಸಂಘಗಳಲ್ಲಿ ಪ್ರತಿ ವರ್ಷ ಶೇ 25 ರಷ್ಟು ಮಂದಿಗೆ ಹೊಸದಾಗಿ ಸಾಲ ನೀಡಬೇಕು ಎಂದು ಸೂಚಿಸಿದ್ದೇವೆ. ಅದರಲ್ಲೂ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲು ಸೂಚಿಸಲಾಗಿದೆ ಎಂದರು.
ಎಲ್ಲ ಜಿಲ್ಲೆಗಳಲ್ಲಿ ಸಹಕಾರ ಭವನ ನಿರ್ಮಾಣಕ್ಕೆ ಮುಂದಿನ ಬಜೆಟ್‌ನಲ್ಲಿ ಹಣ ತೆಗೆದಿರಸಲಾಗವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.