ADVERTISEMENT

ಜೀತಕ್ಕೆ ಸಿಲುಕಿದ ಬಾಲಕನ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 8:42 IST
Last Updated 5 ಸೆಪ್ಟೆಂಬರ್ 2013, 8:42 IST

ಮದ್ದೂರು: ತಾಲ್ಲೂಕಿನ ಕಬ್ಬಾರೆ ಗ್ರಾಮದಲ್ಲಿ ಕಳೆದ ಐದು ವರ್ಷಗಳಿಂದ ಮನೆಯೊಂದರಲ್ಲಿ ಜೀತಕ್ಕೆ ಇದ್ದ ನಾಗ ಎಂಬ ಹತ್ತು ವರ್ಷ ವಯಸ್ಸಿನ ಬಾಲಕನನ್ನು ಮಂಡ್ಯ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧಿಕಾರಿ ಡಾ.ದಿವಾಕರ್ ನೇತೃತ್ವದಲ್ಲಿ ಬುಧ ವಾರ ಜೀತ ವಿಮುಕ್ತಗೊಳಿಸಲಾಯಿತು.

ಖಚಿತ ವರ್ತಮಾನದ ಮೇರೆಗೆ ಬೆಳಿಗ್ಗೆ 6.30ಕ್ಕೆ ಪಟ್ಟಣ ಪೊಲೀಸರ ನೆರವಿನೊಂದಿಗೆ ಗ್ರಾಮದ ರಮೇಶ್ ಹಾಗೂ ಸಾಕಮ್ಮ ಅವರ ಮನೆಗೆ ಅಧಿಕಾರಿಗಳು ದಾಳಿ ನಡೆಸಿದಾಗ ಈ ಬಾಲಕ ಕೊಟ್ಟಿಗೆ ಮನೆಯಲ್ಲಿ ಕಸ ಗುಡಿಸುತ್ತಿದ್ದುದು ಕಂಡು ಬಂತು. ಕೂಡಲೇ ಮನೆಯ ಮಾಲೀಕ ರಮೇಶ್ ಅವರನ್ನು ವಿಚಾರಣೆ ನಡೆಸಿದಾಗ ಬಾಲಕನನ್ನು ಕೆಲಸಕ್ಕೆ ಇಟ್ಟುಕೊಂಡ ವಿಚಾರ ಬೆಳಕಿಗೆ ಬಂತು.

ವಿವರ: 5 ವರ್ಷಗಳ ಹಿಂದೆ ಪಟ್ಟಣದ ಬಸ್‌ನಿಲ್ದಾಣದಲ್ಲಿ ಅನಾಥ ನಾಗಿ ಅಳುತ್ತ ನಿಂತಿದ್ದ 5 ವರ್ಷದ ಬಾಲಕನನ್ನು ರಮೇಶ್ ತಮ್ಮ ಮನೆಗೆ ಕರೆ ತಂದಿದ್ದರು. ಆದರೆ, ಬಾಲಕನನ್ನು ಶಾಲೆಗೆ ಸೇರಿಸದೇ ಹೊಲ-ಮನೆ ಕೆಲಸಕ್ಕೆ ನಿಯೋಜಿಸಿದ್ದರು. ಬಾಲಕ ನಾಗ ಪ್ರತಿನಿತ್ಯ ಎಮ್ಮೆ ಮೇಯಿಸುವುದು. ಹುಲ್ಲು ಕತ್ತರಿಸಿ ತರುವುದು. ಕೊಟ್ಟಿಗೆ ಗುಡಿಸಿ ಸಗಣಿ ಬಾಚುವುದು ಸೇರಿದಂತೆ ಮನೆಯ ಕೆಲಸಗಳನ್ನು ಮಾಡಿಕೊಂಡಿದ್ದ.

ಜೀತಕ್ಕೆ ಸಿಲುಕಿದ ಈ ಬಾಲಕನ ವಿವರವನ್ನು ಗ್ರಾಮದ ಕೆಲ ಯುವಕರು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧಿಕಾರಿ ಡಾ.ದಿವಾಕರ್ ಅವರಿಗೆ ತಲುಪಿಸಿದ್ದರು. ಈ ಕುರಿತು ಗ್ರಾಮಕ್ಕೆ ಎರಡು ಬಾರಿ ಭೇಟಿ ನೀಡಿದ ಸಮಿತಿ ಸದಸ್ಯರು ಬಾಲಕನನ್ನು ಜೀತದಾಳಾಗಿ ದುಡಿಸಿಕೊಳ್ಳುತ್ತಿರುವುದು ಖಚಿತ ಪಡಿಸಿ ಕೊಂಡು ಬಳಿಕ ಈ ದಾಳಿ ನಡೆಸಿದರು.

ಸುದ್ದಿಗಾರರೊಡನೆ ಮಾತನಾಡಿದ ದಿವಾಕರ್, ಬಾಲಕ ನಾಗನಿಗೆ ತನ್ನ ಊರು ಯಾವುದು? ಅಪ್ಪ-ಅಮ್ಮ ಯಾರು ಎಂಬ ಮಾಹಿತಿ ತಿಳಿದಿಲ್ಲ. ಈ ಕುರಿತು ಬಾಲಕನ ಭಾವಚಿತ್ರ ಹಾಗೂ ಮಾಹಿತಿಯನ್ನು ಮಾಧ್ಯಮಗಳಲ್ಲಿ ಪ್ರಕಟಿಸಿ ಬಾಲಕನ ಪೋಷಕರ ಪತ್ತೆಗೆ ಕ್ರಮ ಜರುಗಿಸಲಾಗುವುದು.

 ಅಲ್ಲಿಯ ವರೆಗೆ ಬಾಲಕನನ್ನು ನಮ್ಮ ರಕ್ಷಣಾ ಸಮಿತಿಯ ಸುಪರ್ದಿಯಲ್ಲಿರಿಸಿಕೊಂಡು ಆತನಿಗೆ ವಿದ್ಯಾಭ್ಯಾಸ ಕೊಡಿಸಲಾಗುವುದು. ಅಲ್ಲದೇ, ಆತನಿಗೆ ಪ್ರತಿ ತಿಂಗಳು 1 ಸಾವಿರ ರೂಪಾಯಿ ಪರಿಹಾರ ಧನ ನೀಡಲಾಗುವುದು ಎಂದು ವಿವರಿಸಿದರು. 
ಮನೆ ಮಾಲೀಕರಾದ ರಮೇಶ್ ಹಾಗೂ ಸಾಕಮ್ಮ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.